ಕನ್ನಡಪ್ರಭ ವಾರ್ತೆ ಕಲಬುರಗಿ
ಮಹಾಕವಿ ಮಹರ್ಷಿ ವಾಲ್ಮೀಕಿ ಅವರ ಬದುಕು ಮತ್ತು ಚಿಂತನೆಗಳು ಕೇವಲ ಜಯಂತಿ ಆಚರಣೆಗೆ ಸೀಮಿತವಾಗಿರುವುದು ದುರಂತವಾಗಿದೆ. ಮಹರ್ಷಿ ವಾಲ್ಮೀಕಿ ಮಾನವ ಕುಲದ ಏಳಿಗೆಗೆ ಸತ್ಯ ಮಾರ್ಗ ತೋರಿಸಿದ ಆಧುನಿಕ ಚಿಂತಕ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಹೇಳಿದರು.ಗುಲಬರ್ಗಾ ವಿವಿ ಮಹಾತ್ಮಗಾಂಧಿ ಸಭಾಂಗಣದಲ್ಲಿ ನಡೆದ ಮಹಾಕವಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತ ದೇಶದ ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಕೊಡುಗೆಗಳನ್ನು ಸಮಾಜಕ್ಕೆ ತಲುಪಿಸಲು ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆ ನಡೆಯಬೇಕಿದೆ ಎಂದು ಹೇಳಿದರು.
ಬೆಳಗಾವಿ ರಾಣಿ ಚನ್ನಮ್ಮ ವಿವಿ ಆಂಗ್ಲ ಅಧ್ಯಯನ ವಿಭಾಗದ ಅಧ್ಯಕ್ಷರು ಹಾಗೂ ಪ್ರಾಧ್ಯಾಪಕಿ ಡಾ.ಕವಿತಾ ಕುಸಗಲ್ ಮುಖ್ಯ ಅತಿಥಿಯಾಗಿ ಮಾತನಾಡಿ, ವಾಲ್ಮೀಕಿಯವರ ಬದುಕು ಮತ್ತು ಕಾವ್ಯ ಸಾಹಿತ್ಯ ಪಾಲಿ, ಪ್ರಾಕೃತ, ಆಂಗ್ಲ ಮತ್ತು ಸಂಸ್ಕೃತ ಭಾಷೆಗಳಲ್ಲಿ ದೊರಕಿವೆ. ಇನ್ನಷ್ಟು ಸಂಶೋಧನೆಗಳ ಮೂಲಕ ಅವರ ಜೀವನ ಮತ್ತು ಸಾಹಿತ್ಯ ಕೊಡುಗೆಗೆಳ ಮೇಲೆ ಬೆಳಕು ಚೆಲ್ಲಬೇಕಿದೆ. ಆಶ್ರಮದಲ್ಲಿದ್ದ ವಾಲ್ಮೀಕಿಯವರಿಗೆ ಪರಿಸರ ಕಾಳಜಿಯಿತ್ತು ಮತ್ತು ಕಾಡಿನಲ್ಲಿದ್ದ ಪ್ರಾಣಿ ಮತ್ತು ಪಕ್ಷಿಗಳ ಬಗೆ ದಯಾಮಯಿಯಾಗಿದ್ದರು ಎಂದು ನುಡಿದರು.ಸಿಂಡಿಕೇಟ್ ಸದಸ್ಯ ಗುರು ಶ್ರೀರಾಮುಲು, ವಿದ್ಯಾ ವಿಷಯಕ ಪರಿಷತ್ ಸದಸ್ಯ ವಿ.ಎಂ.ಜಾಲಿ, ಆಡಳಿತ ವಿಶೇಷಾಧಿಕಾರಿ ಚಂದ್ರಕಾಂತ ಕೆಳಮನಿ, ಪ್ರೊ. ಎನ್.ಬಿ.ನಡುವಿನಮನಿ, ಶಿಕ್ಷಣ ನಿಕಾಯದ ಡೀನ್ ಹೂವಿನಬಾವಿ ಬಾಬಣ್ಣ, ಕೆ. ವಿಜಯಕುಮಾರ್, ಶಂಕರಪ್ಪ, ರಮೇಶ್ ಲಂಡನಕರ್, ಜಿ.ಎಂ. ವಿದ್ಯಾಸಾಗರ, ರಮೇಶ್ ರಾಠೋಡ್, ಗಾಯಕವಾಡ, ಆನಂದ ನಾಯಕ, ಡಾ. ಹನುಮಂತ ಜಂಗೆ, ಡಾ. ಪ್ರಕಾಶ ಕರಿಯಜ್ಜನವರ್ ಸೇರಿ ಅನೇಕರಿದ್ದರು.
ಮೌಲ್ಯಮಾಪನ ಕುಲಸಚಿವೆ ಮೇಧಾವಿನಿ ಕಟ್ಟಿ ಸ್ವಾಗತಿಸಿದರು. ಬಸವರಾಜ ಸಣ್ಣಕ್ಕಿ ಅತಿಥಿ ಪರಿಚಯಿಸಿದರು. ಪ್ರಕಾಶ್ ಹದನೂರಕರ್ ವಂದಿಸಿದರು. ಡಾ. ಚಂದ್ರಕಾಂತ್ ಬಿರಾದಾರ ನಿರೂಪಿಸಿದರು.
---
ಕೋಟ್:ಮಹಾಕವಿ ವಾಲ್ಮೀಕಿಯವರು ಜಗತ್ತು ಕಂಡ ಆದರ್ಶ ಚಿಂತಕರಲ್ಲಿ ಒಬ್ಬರು. ಮಹರ್ಷಿ ವಾಲ್ಮೀಕಿಯವರು ಕೇವಲ ದಾರ್ಶನಿಕ ಚಿಂತಕ ಮಾತ್ರವಲ್ಲ. ಅವರೊಬ್ಬ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ವೈಜ್ಞಾನಿಕ ಚಿಂತಕರಾಗಿ ಸರ್ವಕಾಲಕ್ಕೂ ಅನ್ವಯವಾಗುತ್ತಾರೆ.
-ಡಾ.ಟಿ.ನಿಂಗಣ್ಣ, ಮಹರ್ಷಿ ವಾಲ್ಮೀಕಿ ಬುಡಕಟ್ಟು ಅಧ್ಯಯನ ಹಾಗೂ ಸಂಶೋಧನಾ ಪೀಠದ ನಿರ್ದೇಶಕ