ಎಲ್ಲೆಡೆ ಸಡಗರದಿಂದ ಜರುಗಿದ ಮಹಾಶಿವರಾತ್ರಿ

KannadaprabhaNewsNetwork |  
Published : Mar 09, 2024, 01:34 AM IST
08ಕೆಪಿಆರ್ಸಿಆರ್02: | Kannada Prabha

ಸಾರಾಂಶ

ರಾಯಚೂರು ನಗರದ ಚಂದ್ರಮೌಳೇಶ್ವರ ದೇವಸ್ಥಾನದ ಮುಂದೆ ಮಹಾಶಿವರಾತ್ರಿ ನಿಮಿತ್ತ ಶಿವನ ದರ್ಶನಕ್ಕಾಗಿ ಸಾಲುಗಟ್ಟಿನಿಂತ ಭಕ್ತರ ದಂಡು.

ಕನ್ನಡಪ್ರಡ ವಾರ್ತೆ ರಾಯಚೂರು

ಹಿಂದೂ ಧರ್ಮಿಯರ ಮಹತ್ವದ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿಯನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಂಭ್ರಮ-ಸಡಗರದಿಂದ ಶುಕ್ರವಾರ ಆಚರಿಸಲಾಯಿತು.

ಜಿಲ್ಲೆಯ ನಗರ, ಪಟ್ಟಣ, ಹೋಬಳಿ ಮತ್ತು ಗ್ರಾಮೀಣ ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಪೂಜಿಸಲ್ಪಡುತ್ತಿರುವ ಶಿವನ ಎಲ್ಲ ದೇವಸ್ಥಾನಗಳಲ್ಲಿ ಶಿವರಾತ್ರಿಯ ನಿಮಿತ್ತ ವಿಶೇಷ ಪೂಜಾ-ವಿಧಿವಿಧಾನ, ಕೈಂಕಾರ್ಯಗಳು, ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಮಹಾಮಂಗಳಾರತಿ, ಪುಷ್ಪಾರ್ಚಾನೆ ಅಲಂಕಾರ ಸೇವೆಗಳು ಅದ್ಧೂರಿಯಾಗಿ ನಡೆದವು.

ರಾಯಚೂರು ನಗರದಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನ, ಐಬಿ ರಸ್ತೆ ರಾಮಲಿಂಗೇಶ್ವರ ದೇವಸ್ಥಾನ, ನೇತಾಜಿನಗರದ ನಗರೇಶ್ವರ ದೇವಸ್ಥಾನ, ಪಂಚಲಿಂಗೇಶ್ವರ, ನೀಲಕಂಠೇಶ್ವರ, ಮಾವಿನಕೆರೆ ಪಕ್ಕದ ನಂದೀಶ್ವರ ದೇವಸ್ಥಾನ, ಬೊಳಮಾನದೊಡ್ಡಿಯ ಮಲ್ಲಿಕಾರ್ಜುನ ಗುಡಿ, ಏಗನೂರು ದೇವಸ್ಥಾನ, ನಿಜಲಿಂಗಪ್ಪ ಕಾಲೋನಿ, ಗಣೇಶ ಕಾಲೋನಿ, ಡ್ಯಾಡಿ ಕಾಲೋನಿ ಹಾಗೂ ಕೃಷಿ ವಿವಿ ಆವರಣದಲ್ಲಿರುವ ಈಶ್ವರ ದೇವಸ್ಥಾನಗಳಲ್ಲಿ ಭಕ್ತರು ಸಾಲುಗಟ್ಟಿ ಶಿವನ ದರ್ಶನ ಪಡೆದರು.

ರಾಯಚೂರು ತಾಲೂಕಿನ ದೇವಸುಗೂರಿನ ಸುಗೂರೇಶ್ವರ ಸ್ವಾಮಿ, ಲಿಂಗಸುಗೂರು ತಾಲೂಕಿನ ಗುರುಗುಂಟಾ ಅಮರೇಶ್ವರ, ಮುದಗಲ್ನಲ್ಲಿ ಮಲ್ಲಿಕಾರ್ಜುನ ಸ್ವಾಮಿ ಸೇರಿ ತುಂಗಭದ್ರಾ-ಕೃಷ್ಣಾ ನದಿ ತಟದಲ್ಲಿ ಬರುವ ಗೂಗಲ್ ಅಲ್ಲಮಪ್ರಭು, ಅಣಮಲೇಶ್ವರ, ಮುಡರಗಿ ಶಿವರಾಯ ಸೇರಿ ಪ್ರಮುಖ ಶಿವನ ದೇವಸ್ಥಾನಗಳಲ್ಲಿ ಭಕ್ತರು ಹರಿದುಬಂದಿದ್ದರು.

ರಾಯಚೂರು ನಗರ, ಸಿರವಾರ, ಮಸ್ಕಿಯಲ್ಲಿ ಈಶ್ವರೀಯ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಕೇಂದ್ರದಿಂದ ಸದ್ಭಾವನಾ ಶಾಂತಿಯಾತ್ರೆಯನ್ನು ಮತ್ತು ರಾಯಚೂರು ನಗರದ ವಿವಿಧ ರಸ್ತೆ, ವೃತ್ತಗಳಲ್ಲಿ ಜ್ಯೋತಿರ್ಲಿಂಗಗಳ ಮೆರವಣಿಗೆ ನಡೆಸಲಾಯಿತು.

ಮಹಾಶಿವರಾತ್ರಿ ಹಿನ್ನೆಲೆ ಮಹಿಳೆಯರು, ಪುರುಷರು,ಮಕ್ಕಳು ಬೆಳಗ್ಗೆಯಿಂದ ಸಂಜೆ ತನಕ ಉಪವಾಸವಿದ್ದು ನಂತರ ಸಮೀಪದ ಶಿವನ ಗುಡಿಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಕೆಲ ದೇವಸ್ಥಾನಗಳಲ್ಲಿ ದರ್ಶನ ಪಡೆದು ಹೊರಗಡೆ ಬಂದ ಭಕ್ತರಿಗೆ ಅಲ್ಪೊಪಹಾರ ಹಣ್ಣಿನ ಮಿಶ್ರಣ, ತೀರ್ಥ-ಪ್ರಸಾದ ಹಂಚಲಾಯಿತು. ಬೆಳಗ್ಗೆಯಿಂದ ಉಪವಾಸವಿದ್ದ ಭಕ್ತರು ಉಪವಾಸವನ್ನು ವಿರಮಿಸಿ, ರಾತ್ರಿ ಜಾಗರಣ ಮಾಡಿ ಇಡೀ ದಿನ ಶಿವ ನಾಮಸ್ಮರಣೆಯಲ್ಲಿಯೇ ಕಳೆದು ಮಹಾಶಿವನ ಕೃಪೆಗೆ ಪಾತ್ರರಾದರು.

ಮಳೆ ಕೊರತೆ, ತೀವ್ರ ಬರ ಆವರಿಸಿರುವ ಸಮಯದಲ್ಲಿ ಹೂವು-ಹಣ್ಣು, ಪೂಜಾ ಸಾಮಗ್ರಿಗಳು ಹಾಗೂ ದಿನಸಿಗಳ ಬೆಲೆ ಏರಿಕೆಯು ಬಿಸಿಯ ನಡುವೆಯೂ ಮಾರುಕಟ್ಟೆಯಲ್ಲಿ ಶಿವರಾತ್ರಿ ಹಬ್ಬದ ಖರೀದಿಯು ಜೋರಾಗಿತ್ತು. ಬಿರುಬಿಸಿಲನ್ನು ಲೆಕ್ಕಿಸದ ಜನರು ಹಬ್ಬದ ಸಾಮಗ್ರಿ ಖರೀದಿಸಿ, ಹಬ್ಬವನ್ನು ಆಚರಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ