ಕನ್ನಡಪ್ರಭ ವಾರ್ತೆ ಹನೂರು ಶಿವನ ಭಕ್ತರ ಪವಿತ್ರ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿ ಹಿನ್ನೆಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಕಲ ಸಿದ್ಧತೆ ಕ್ರಮ ಕೈಗೊಂಡಿದೆ.
ಈಗಾಗಲೇ ಕನಕಪುರ, ಬೆಂಗಳೂರು, ರಾಮನಗರ, ಚನ್ನಪಟ್ಟಣ ಕಡೆಯಿಂದ ಕಾವೇರಿ ಸಂಗಮವನ್ನು ದಾಟಿ ಲಕ್ಷಾಂತರ ಮಂದಿ ಭಕ್ತರು ಬೆಟ್ಟಕ್ಕೆ ಬಂದಿದ್ದು ಚಾಮರಾಜನಗರ, ಮಂಡ್ಯ, ಮೈಸೂರು ಭಾಗದಿಂದಲೂ ಭಕ್ತಸಾಗರವೇ ಆಗಮಿಸಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೇ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದು ಎತ್ತ ನೋಡಿದರೂ ಮಾದಪ್ಪನ ಜಯಘೋಷಗಳು ಮಾರ್ದನಿಸುತ್ತಿದೆ.4 ಲಕ್ಷ ಲಡ್ಡು ರೆಡಿ:ತಿರುಪತಿಯಂತೇ ಮಲೆ ಮಹದೇಶ್ವರನ ಲಾಡು ಪ್ರಸಾದಕ್ಕೂ ಬೇಡಿಕೆ ಇರುವ ಹಿನ್ನೆಲೆ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರವು ಈಗಾಗಲೇ 4 ಲಕ್ಷ ಲಾಡುಗಳನ್ನು ತಯಾರಿಸಿದ್ದು ಲಾಡು ಪ್ರಸಾದ ಮಾರಾಟವಾಗುತ್ತಿದ್ದಂತೆ ಪ್ರಸಾದ ತಯಾರಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಲಾಡು ಪ್ರಸಾದ ಮಾರಾಟ ಈ ಬಾರಿ 5 ಲಕ್ಷ ಮೀರುವ ನಿರೀಕ್ಷೆ ಇದೆ.ಮಡಕೆ ನೀರು-ಮಾತೃ ಕುಟೀರ:ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆ ಪ್ರಾಧಿಕಾರದ ಕಾರ್ಯದರ್ಶಿ ರಘು ಮೊದಲ ಬಾರಿಗೆ ಕ್ಷೇತ್ರದ ಅಲ್ಲಲ್ಲಿ ಮಡಕೆಗಳನ್ನು ಇರಿಸಿದ್ದು ಭಕ್ತರು ಈ ಬಾರಿ ಕುಡಿಯುವ ನೀರಿನ ಟ್ಯಾಂಕ್ ಜೊತೆಗೆ ಮಡಕೆ ನೀರನ್ನು ಕುಡಿದು ಮಾದಪ್ಪನ ಭಕ್ತರು ದಣಿವು ಆರಿಸಿಕೊಳ್ಳಬಹುದಾಗಿದೆ. ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ತಾಳು ಬೆಟ್ಟದಿಂದ ಮಾದೇಶ್ವರ ಬೆಟ್ಟದವರೆಗೆ ಟ್ಯಾಂಕ್ ಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡಲು 10 ಕಡೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಶ್ರೀ ಕ್ಷೇತ್ರದ ಎರಡು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಜನರಿಗೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ತಾಯಂದಿರು ಕೂಡ ಸಾವಿರಾರು ಸಂಖ್ಯೆಯಲ್ಲಿ ಬರುವುದರಿಂದ ಯಾವುದೇ ತೊಂದರೆಯಾಗದಂತೆ ತೆಂಗಿನ ಗರಿಗಳನ್ನು ಬಳಸಿಕೊಂಡು ಹಾಲುಣಿಸುವ ಕೇಂದ್ರ ತೆರೆದಿದ್ದು ಮಾತೃ ಕುಟೀರ ಎಂದು ಹೆಸರಿಡಲಾಗಿದೆ ಇದು ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಬಿಸಿಲಿನ ತಾಪಮಾನ ಹೆಚ್ಚಾದ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಲೂ ಸಹ ಭಕ್ತರಿಗೆ ಮ್ಯಾಟ್ ಸಹ ಓಡಾಡಲು ಹಾಕಲಾಗಿದೆ.
ನಿರಂತರ ದಾಸೋಹದ ವ್ಯವಸ್ಥೆ:ದಾಸೋಹ ಭವನದಲ್ಲಿ ವಿಶೇಷ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದ್ದು ಒಂದು ಬಾರಿಗೆ 2 ಸಾವಿರಕ್ಕೂ ಹೆಚ್ಚು ಜನರು ಪ್ರಸಾದ ಸ್ವೀಕರಿಸಬಹುದಾಗಿದೆ. ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಹಳೆ ದಾಸೋಹದ ಮುಂಭಾಗ ನಿರಂತರ ದಾಸೋಹದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ವತಿಯಿಂದ 500 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ವಾಹನಗಳು ಕೆಟ್ಟ ನಿಂತರೆ ದುರಸ್ತಿ ಪಡಿಸಲು 15 ಜನ ತಾಂತ್ರಿಕ ಸಿಬ್ಬಂದಿಯನ್ನು ಈ ಬಾರಿ ನೇಮಕ ಮಾಡಲಾಗಿದ್ದು ತಾಳು ಬೆಟ್ಟದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ಸಹ ತೆರೆಯಲಾಗಿದೆ. ತಾಳುಬೆಟ್ಟ ಹಾಗೂ ಶಂಕ್ರಮ್ಮನ ನಿಲಯ ಸಮೀಪ 100 ಮೊಬೈಲ್ ಶೌಚಾಲಯವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗುತ್ತಿದೆ.ಬೆಳಗ್ಗೆ 6 ಗಂಟೆಯಿಂದ ಜಾತ್ರಾ ಮಹೋತ್ಸವ ಪ್ರಯುಕ್ತ ಮಾದೇಶ್ವರ ಬೆಟ್ಟಕ್ಕೆ ತೆರಳಲು ದ್ವಿಚಕ್ರ ವಾಹನ ಸವಾರರಿಗೆ ತೆರಳಲು ನಿರ್ಬಂಧ ಹೇರಿರುವುದರಿಂದ ಕೌದಳ್ಳಿ ಗ್ರಾಮದ ಖಾಸಗಿ ಲೇಔಟ್ ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಾರ್ಕಿಂಗ್‌ನಿಂದ ಮಾದೇಶ್ವರ ಬೆಟ್ಟಕ್ಕೆ ತೆರಳಲು 10 ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ರಘು ತಿಳಿಸಿದ್ದಾರೆ. 8 ರಂದು ಮಹಾಶಿವರಾತ್ರಿ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಎಣ್ಣೆ ಮಜ್ಜನ ಸೇವೆ ವಿವಿಧ ಉತ್ಸವಗಳು, 9 ರಂದು ಅಮಾವಾಸ್ಯೆ ವಿಶೇಷ ಪೂಜೆ ಹಾಗೂ ಉತ್ಸವಗಳು, 10 ರಂದು ಬೆಳಗ್ಗೆ ಮಹಾರಥೋತ್ಸವ ಜರುಗಳಿದ್ದು ಅದೇ ದಿನ ರಾತ್ರಿ ಅಭಿಷೇಕದ ಪೂಜೆ ಮುಗಿದ ನಂತರ ಕೊಂಡೋತ್ಸವ ನಡೆಯಲಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಬರುವುದರಿಂದ ತಾಳು ಬೆಟ್ಟ ಬಸ್ ನಿಲ್ದಾಣ ದೇವಾಲಯ ಶಂಕ್ರಮ್ಮನ ನಿಲಯ ರಸ್ತೆ ಹಾಗೂ ಶಾಲೂರು ಮಠ ರಸ್ತೆ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಮಹಾಶಿವರಾತ್ರಿ ಜಾತ್ರಾ ಮಹೋತ್ಸವವು ಐದು ದಿನಗಳು ನಡೆಯಲಿದ್ದು ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದೆ ಹೀಗಾಗಿ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಸಕಲ ಸಿದ್ಧತೆಗಳನ್ನು ಸಹ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವ್ಯವಸ್ಥೆ ಕಲ್ಪಿಸಿದೆ ಜೊತೆಗೆ ದಾಸೋಹ ಹಾಗೂ ಮಾಹಿತಿ ಕೇಂದ್ರಗಳನ್ನು ಸಹ ತೆರೆಯಲಾಗಿದ್ದು ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಕುಡಿಯುವ ನೀರಿನ ವ್ಯವಸ್ಥೆ ಸಹ ಅಚ್ಚುಕಟ್ಟಾಗಿ ಮಾಡಲಾಗಿದೆ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ.
ಎ ಈ ರಘು, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ, ಮಲೆ ಮಹದೇಶ್ವರ ಬೆಟ್ಟ