ಆಲೂರು: ೧೪೪ ವರ್ಷಗಳ ನಂತರ ಗಂಗೆ, ಯುಮುನೆ, ಸರಸ್ವತಿ ನದಿಗಳ ಸಂಗಮ ಪ್ರಯಾಜ್‌ರಾಗ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿರುವ ಸಂದರ್ಭದಲ್ಲಿ, ಕ್ರೋಧಿನಾಮ ಸಂವತ್ಸರದ ಮಾಘ ಮಾಸದ ಕೃಷ್ಣಪಕ್ಷದಲ್ಲಿ ಶಿವರಾತ್ರಿ ಹಬ್ಬ ಆಚರಣೆ ನಡೆಯುತ್ತಿರುವುದು ಅತ್ಯಂತ ವಿಶೇಷ ಹಾಗೂ ಆರೋಗ್ಯಪೂರ್ಣವಾಗಿದೆ ಎಂದು ಕಣತೂರಿನ ಪುರೋಹಿತರಾದ ಕೆ. ವೈ. ರಾಘವೇಂದ್ರಶರ್ಮ ತಿಳಿಸಿದ್ದಾರೆ.
ಶಿವನು ಅಭಿಷೇಕ ಪ್ರಿಯನಾದ ಕಾರಣ, ಶಿವರಾತ್ರಿಯಲ್ಲಿ ಉಪವಾಸವಿದ್ದು ಶಿವಲಿಂಗಕ್ಕೆ ಬಿಲ್ವಾರ್ಚನೆಯೊಂದಿಗೆ ಪಂಚಾಮೃತ ಅಭಿಷೇಕ ಮಾಡುತ್ತಾ ಜಾಗರಣೆ ಮಾಡುವುದರಿಂದ, ಬಹಳ ವಿಶೇಷತೆಯನ್ನು ಹೊಂದಿದೆಯಲ್ಲದೆ ಆಯುರಾರೋಗ್ಯ ಲಭಿಸುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಸೃಷ್ಟಿಕರ್ತ ಬ್ರಹ್ಮ, ಸ್ಥಿತಿಕರ್ತ ವಿಷ್ಣು, ಲಯಕರ್ತನಾದ ಶಿವನಿಗೆ ಚಿತಾ ಭಸ್ಮಾರ್ಚನೆ (ಹೆಣವನ್ನು ಸುಟ್ಟ ಬೂದಿ), ಬಿಲ್ವಾರ್ಚನೆ(ಬಿಲ್ವಪತ್ರೆ) ಮತ್ತು ಅಭಿಷೇಕ ಸ್ವೀಕಾರ ಅತ್ಯಂತ ಪ್ರಿಯವಾದ ಅರ್ಪಣೆ. ಶಿವನಿಗೆ ಅತ್ಯಂತ ಪ್ರೀತಿ ಚಿತಾ ಭಸ್ಮಾರ್ಚನೆ. ಕಾಶಿಯಲ್ಲಿ ಇಂದಿಗೂ ಹೆಣಗಳನ್ನು ಸುಟ್ಟ ಬೂದಿಯಿಂದಲೆ ಚಿತಾ ಭಸ್ಮಾರ್ಚನೆ ಮಾಡಲಾಗುತ್ತದೆ. ಅಭಿಷೇಕೊ ಪ್ರಿಯ ಬಿಲ್ವಾರ್ಚನೆ. ಜಾಗರಣೆ ಸಂದರ್ಭದಲ್ಲಿ ಉಪವಾಸದಿಂದ ಭಜನೆಗಳನ್ನು ಮಾಡಿದರೆ ಶಿವನಿಗೆ ಅತ್ಯಂತ ಪ್ರೀತಿಯಾಗುತ್ತದೆ.೧೪೪ ವರ್ಷಗಳ ನಂತರ ನಡೆಯುತ್ತಿರುವ ಮಹಾ ಕುಂಭಮೇಳದ ಸಂದರ್ಭದಲ್ಲಿ ಗೋಚರವಾಗುತ್ತಿರುವ ನಾಗಸಾಧುಗಳು ಮತ್ತು ಅಘೋರಿಗಳು ತಮ್ಮ ಮೈಮೇಲೆ ಹೆಣ ಸುಟ್ಟ ಚಿತಾಭಸ್ಮವನ್ನು ಧಾರಣೆ ಮಾಡಿಕೊಂಡು ಶಿವನಿಗೆ ಪೂಜೆ ಸಲ್ಲಿಸುತ್ತಾರೆ. ಚಿತಾಭಸ್ಮವನ್ನು ಅಘೋರಿಗಳು, ನಾಗಸಾಧುಗಳು ಹೊರತುಪಡಿಸಿದರೆ ಇನ್ಯಾರೂ ಧರಿಸುವುದಿಲ್ಲ. ಈ ಸಂದರ್ಭವನ್ನು ಲಯಕರ್ತನಾದ ಶಿವನು ಆನಂದದಿಂದ ಆಸ್ವಾದಿಸುತ್ತಾನೆ. ಇದು ಮಹಾ ವಿಶೇಷ. ಶಿವರಾತ್ರಿಯಂದು ರಾತ್ರಿ ಮನುಕುಲ ಉಪವಾಸದಿಂದ ಶಿವನಿಗೆ ಅಭಿಷೇಕ, ಬಿಲ್ವಾರ್ಚನೆ, ಭಸ್ಮಾರ್ಚನೆ ಮೂಲಕ ಭಕ್ತಿಭಾವನೆ ಪೂಜೆ ಸಲ್ಲಿಸಿದರೆ ಆಯುರಾರೋಗ್ಯ ವೃದ್ಧಿಸುವುದು. ಮರುದಿನ ಮನುಕುಲ ಫಲಾಹಾರ ಸ್ವೀಕಾರ ಮಾಡುವುದರಿಂದ ಶಿವನು ತೃಪ್ತನಾಗಿ ಆಯುರಾರೋಗ್ಯ ಕರುಣಿಸುತ್ತಾನೆ ಎಂದು ತಿಳಿಸಿದ್ದಾರೆ.