ಕನ್ನಡಪ್ರಭ ವಾರ್ತೆ ಮಾಲೂರು
ಮಳೆಗಾಲ ಆರಂಭವಾಗಿದ್ದು, ನೀರಿನ ಸಂಗ್ರಹಗಳಲ್ಲಿ ಸೊಳ್ಳೆಗಳ ಉತ್ಪತ್ತಿ ಅಧಿಕವಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರಿಕರು ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸುವುದರಿಂದ ಮಲೇರಿಯಾ ಡೆಂಘೀ ಚಿಕೂನ್ ಗುನ್ಯಾ ಹರಡುವುದನ್ನು ತಡೆಗಟ್ಟಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ರವಿಕುಮಾರ್ ಹೇಳಿದರು. ಅವರು ಪಟ್ಟಣದ ತಾಲೂಕು ಪಂಚಾಯಿತಿಯ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡೆಂಘೀ ತಡೆಗಟ್ಟುವ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.ಡೆಂಘೀ ಸಾಂಕ್ರಾಮಿಕ ರೋಗವಾಗಿದ್ದು ಈ ರೋಗವನ್ನು ತಡೆಗಟ್ಟಲು ನಮ್ಮ ಪರಿಸರದ ಸ್ವಚ್ಛತೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ ೨೮ ಪ್ರಕರಣಗಳು ಕಂಡುಬಂದಿದೆ. ಆದರೆ ಸಾವಿನ ಸಂಖ್ಯೆ ಯಾವುದೇ ಪ್ರಕರಣ ಕಂಡುಬಂದಿಲ್ಲ, ಈಗ ಡೆಂಘೀ ಜ್ವರದ ಪ್ರಕರಣಗಳು ಕಾಣಿಸಿಕೊಳ್ಳುತ್ತದೆ ಆದ್ದರಿಂದ ಗ್ರಾಮಗಳಲ್ಲಿ ಸುತ್ತಮುತ್ತಲ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡೆಂಘೀ ರೋಗ ಲಕ್ಷಣಗಳುತೀವ್ರಜ್ವರ, ತಲೆನೋವು, ಮಾಂಸಖಂಡ, ಕೀಲುಗಳಲ್ಲಿ ನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಒಸಡು, ಮೂಗಿನಿಂದ ರಕ್ತಸ್ರಾವ ಕಂಡುಬರುತ್ತವೆ. ಆರೋಗ್ಯ ಅಧಿಕಾರಿಗಳು ಡೆಂಘೀ ಜ್ವರದ ಸ್ವರೂಪ ಸೋಂಕಿತ ಈಡೀಸ್ ಸೊಳ್ಳೆ ಕಡಿತದಿಂದ ಹರಡುವ ಡೆಂಘೀ ಜ್ವರವು ವೈರಾಣುಗಳಿಂದ ಉಂಟಾಗುತ್ತದೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ- ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು. ವಾಕರಿಕೆ, ವಾಂತಿ. ಆಂತರಿಕ ರಕ್ತಸ್ರಾವ, ಒಸಡುಗಳಲ್ಲಿ ರಕ್ತಸ್ರಾವ ಡೆಂಘೀ ಜ್ವರವನ್ನು ತಡೆಗಟ್ಟಲು ಲಸಿಕೆ ಲಭ್ಯವಿರುವುದಿಲ್ಲ. ಆದ್ದರಿಂದ ರೋಗ ಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದರು.
ಸೂಕ್ತ ಚಿಕಿತ್ಸೆ ಪಡೆಯಿರಿಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದಲ್ಲಿ, ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಡೆಂಘೀ ಜ್ವರದ ತಪಾಸಣೆ, ರಕ್ತ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸೇವೆಯ ಸೌಲಭ್ಯ ನೀಡಲಾಗುತ್ತಿದೆ. ಮನೆಯಲ್ಲಿ ತೊಟ್ಟಿ, ಬ್ಯಾರೆಲ್, ಡ್ರಂಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ತೊಟ್ಟಿ, ಬ್ಯಾರೆಲ್, ಡ್ರಂಗಳನ್ನು ಯಾವಾಗಲೂ ಮುಚ್ಚಿಡುವುದು. ಮನೆಯ ಸುತ್ತ–ಮುತ್ತ ಬಿಸಾಡಿರುವ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸುವುದು ಎಂದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ವೀಣಾ, ತಾಲೂಕು ಆರೋಗ್ಯ ಅಧಿಕಾರಿ ಡಾ.ರಮೇಶ್ ಬಾಬು, ಹಿರಿಯ ಆರೋಗ್ಯ ನಿರೀಕ್ಷಕ ಭಾನು ಸಾಗರ್ ವರ್ಮ, ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಸರಸ್ವತಿ, ಪಿಡಿಒ, ಆಶಾ ಕಾರ್ಯಕರ್ತರು, ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.