ಪ್ರವೀಣ ಹೆಗಡೆ ಕರ್ಜಗಿ
ಶಿರಸಿ: ಕಾಳು ಕಟ್ಟುವ ಸಂದರ್ಭದಲ್ಲಿ ಅತಿಯಾದ ಮಳೆಯಾದ್ದರಿಂದ ಮೆಕ್ಕೆಜೋಳದ ತೆನೆ ನೋಡಲು ತುಂಬಿದಂತೆ ಕಂಡರೂ ಬೇರ್ಪಡಿಸಿ ಸಂಸ್ಕರಿಸಿದಾಗ ಜೊಳ್ಳಿನ ಪ್ರಮಾಣ ವಿಪರೀತವಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ. ೬೦ರಷ್ಟು ಇಳುವರಿ ಕುಂಠಿತವಾಗಿದೆ.ತಾಲೂಕಿನ ಪೂರ್ವಭಾಗದಲ್ಲಿ ಸುಮಾರು ೬೨೫ ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿತ್ತು. ಜೂನ್‌ನಲ್ಲಿ ಭೂಮಿ ಹದಗೊಳಿಸಿ ಬಿತ್ತಲಾದ ಮೆಕ್ಕೆಜೋಳ ಮೊದಲ ಹಂತದಲ್ಲಿ ಉತ್ತಮವಾಗಿ ಬೆಳೆದಿತ್ತು. ನಂತರ ಸುರಿದ ಭಾರಿ ಮಳೆಯ ಪರಿಣಾಮ ಬಿತ್ತನೆ ಮಾಡಿದ ಮೆಕ್ಕೆಜೋಳದ ಬೆಳೆ ಸರಿಯಾಗಿ ಬೆಳೆಯದೇ ಕುಂಠಿತವಾಗಿವೆ. ಬಳಿಕ ಜುಲೈನಲ್ಲಿ ಮೆಕ್ಕೆಜೋಳ ಹಂತ ಹಂತವಾಗಿ ತೆನೆ ಒಡೆದು ಕಾಳು ಕಟ್ಟುತ್ತದೆ. ಆದರೆ ಈ ಸಂದರ್ಭದಲ್ಲಿ ಭಾರಿ ಮಳೆಯಾದ ಪರಿಣಾಮ ಕಳೆ ನಿಯಂತ್ರಣ ಸಾಧ್ಯವಾಗಲಿಲ್ಲ.
ಬೆಳವಣಿಗೆ ಹಂತದಲ್ಲಿ ಸೈನಿಕ ಹುಳುವಿನ ಬಾಧೆ ಹೆಚ್ಚಿತ್ತು. ಇತ್ತೀಚೆಗೆ ಕಟಾವು ಮಾಡುವ ಸಂದರ್ಭದಲ್ಲಿ ಬಿದ್ದ ಮಳೆಯಿಂದ ಕಾಳುಗಳು ಕೊಳೆತಿವೆ. ತೆನೆಗಳು ಜೊಳ್ಳಾಗಿವೆ. ಸಾಲ ಮಾಡಿ ಹಾಕಿದ ಬಂಡವಾಳ ಕೈಸೇರುವ ವಿಶ್ವಾಸವಿಲ್ಲದೇ ರೈತರು ಕಂಗಾಲಾಗುವಂತಾಗಿದೆ.ಜಿಲ್ಲೆಯ ಶಿರಸಿ, ಮುಂಡಗೋಡ, ಹಳಿಯಾಳ ಭಾಗದ ಅಂದಾಜು ೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಬನವಾಸಿ ಹಾಗೂ ಮುಂಡಗೋಡ ಭಾಗದಲ್ಲಿ ಭತ್ತದ ಬದಲು ಮೆಕ್ಕೆಜೋಳ ಬೆಳೆದರೆ ಹಳಿಯಾಳ ಭಾಗದಲ್ಲಿ ಕಬ್ಬಿನ ಕ್ಷೇತ್ರದಲ್ಲಿ ಈ ಬೆಳೆ ನೆಲೆ ಕಂಡಿದೆ. ಪ್ರಸಕ್ತ ವರ್ಷ ಸದ್ಯ ಕಟಾವು ಕಾರ್ಯ ನಡೆದು ಕಾಳು ಒಣಗಿಸುವ ಕಾರ್ಯ ನಡೆದಿದೆ. ಆದರೆ ಈಗ ಸುರಿಯುತ್ತಿರುವ ಮಳೆಯಿಂದ ಕಾಳು ಒಣಗಿಸಲು ಬೆಳೆಗಾರರು ಹರಸಾಹಸ ಪಡುವ ಸ್ಥಿತಿ ಎದುರಿಸುವಂತಾಗಿದೆ.೨ ಎಕರೆ ೧೫ ಗಂಟೆ ಜಮೀನಿನಲ್ಲಿ ಬರೀ ೮ ಕ್ವಿಂಟಲ್ ಇಳುವರಿ ಬಂದಿದೆ. ಕಡಿಮೆ ಎಂದರೂ ೧೫ರಿಂದ ೨೦ ಕ್ವಿಂಟಲ್ ಇಳುವರಿ ಬರಬೇಕಾಗಿತ್ತು. ಮಳೆ ಹೆಚ್ಚಾಗಿದ್ದರಿಂದ ಹೊಲಗಳಲ್ಲಿ ಇನ್ನೂ ತೇವಾಂಶ ಇದೆ. ಮಳೆಗೆ ಸಿಲುಕಿದ ಪರಿಣಾಮ ಮೆಕ್ಕೆಜೋಳದ ಗುಣಮಟ್ಟ ಕಡಿಮೆಯಾಗಿದೆ.ಕಳೆ ನಿಯಂತ್ರಣದ ಕೊರತೆಯಿಂದಾಗಿ ಪ್ರಸ್ತುತ ವರ್ಷದಲ್ಲಿ ಇಳುವರಿ ಕುಂಠಿತಗೊಂಡಿದ್ದು, ಪ್ರತಿ ಎಕರೆಗೆ ೧೦ರಿಂದ ೧೨ ಕ್ವಿಂಟಲ್ ಮೆಕ್ಕೆಜೋಳ ದೊರೆಯಬಹುದು. ಒಟ್ಟಾರೆ, ಬೀಜ ಗೊಬ್ಬರದ ಖರ್ಚೂ ಈ ಸಲ ಕೈಸೇರಿಲ್ಲ ಎಂದು ಬೆಳೆಗಾರ ದಾಸನಕೊಪ್ಪದ ದ್ಯಾಮಣ್ಣಪ್ಪ ಅಳಲು ತೋಡಿಕೊಂಡರು.ಈ ವರ್ಷ ಅತಿಯಾದ ಮಳೆಯಿಂದ ಭತ್ತ, ಜೋಳ, ಅಡಕೆ ಬೆಳೆಗಾರರು ಸಂಕಷ್ಟ ಎದುರಿಸಿದ್ದಾರೆ. ಮಳೆಯಿಂದ ಬೆಳೆದ ಬೆಳೆಯನ್ನು ಕಟಾವು ಮಾಡಲು ಆಸ್ಪದ ನೀಡುತ್ತಿಲ್ಲ. ಜೋಳ ಕೊಯ್ಲು ಮಾಡಿ ಒಣಗಿಸಲು ಮಳೆ ಅಡ್ಡಿಯಾಗುತ್ತಿದೆ. ಬಹುತೇಕ ಗದ್ದೆಗಳಲ್ಲಿ ಭತ್ತ ಕಟಾವಿಗೆ ಬಂದಿದೆ. ಮಳೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ರೈತರ ಪರವಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಮುಂದಾಗಬೇಕೆಂಬ ಆಗ್ರಹ ಬಲವಾಗಿ ಕೇಳಿಬರುತ್ತಿದೆ.
ಬೆಳೆ ಕುಂಠಿತ: ಅತಿಯಾದ ಮಳೆಯಾಗಿದ್ದರಿಂದ ಮೆಕ್ಕೆಜೋಳದ ಕಾಳು ಜೊಳ್ಳಾಗಿದೆ. ಶೇ. ೫೦ರಿಂದ ೬೦ರಷ್ಟು ಬೆಳೆ ಕುಂಠಿತವಾಗಿದೆ ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ ದರವೂ ಇಳಿಮುಖವಾಗಿದೆ. ಅಕಾಲಿಕ ಮಳೆಯಿಂದ ಮತ್ತಷ್ಟು ಸಮಸ್ಯೆಯನ್ನು ರೈತರು ಎದುರಿಸುತ್ತಿದ್ದಾರೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ತಿಳಿಸಿದರು.ದರವೂ ಇಳಿಕೆಕಳೆದ ವರ್ಷ ಜೋಳದ ದರ ಉತ್ತಮವಾಗಿತ್ತು ಎಂದು ರೈತರು ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಹಿಂದಿನ ವರ್ಷ ಕ್ವಿಂಟಲ್‌ಗೆ ₹೨,೮೦೦ ದರವಿತ್ತು. ಈ ವರ್ಷ ₹೨,೨೦೦ ದರ ನಡೆಯುತ್ತಿದೆ. ಜೋಳದ ಬೆಳೆ ಕುಂಠಿತದ ನಡುವೆ ದರವೂ ಇಳಿಮುಖವಾಗುತ್ತಿರುವುದರಿಂದ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ನೂಕಿದೆ.