ಕನ್ನಡಪ್ರಭ ವಾರ್ತೆ ಮಂಡ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿ.20 ರಿಂದ 22 ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು, ಸಮ್ಮೇಳನ ಯಶಸ್ವಿಯಾಗಿ ನಡೆಸಲು ರಚಿತವಾಗಿರುವ ಸಮಿತಿಗಳು ಕಾರ್ಯಯೋಜನೆ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಈಚೆಗೆ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಸಮಿತಿಗಳ ಸಭೆ ನಡೆಸಿ ಮಾತನಾಡಿದರು.
ಸಮಿತಿಯ ಎಲ್ಲಾ ಸದಸ್ಯರು ಸಕ್ರಿಯವಾಗಿ ಸಭೆಗಳಲ್ಲಿ ಪಾಲ್ಗೊಳ್ಳಬೇಕು. ಕಾರ್ಯಕ್ರಮಗಳು ಉತ್ತಮವಾಗಿ ಮೂಡಿಬರಲು ಸಮಿತಿಯ ಸದಸ್ಯ ಕಾರ್ಯದರ್ಶಿಗಳು ತಮ್ಮ ಹಂತದಲ್ಲಿ ಸಭೆಗಳನ್ನು ನಡೆಸಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.ಹೊರ ರಾಜ್ಯ, ಹೊರ ಜಿಲ್ಲೆಯ ಕಲಾವಿದರಿಗೂ ಆದ್ಯತೆ:
ಸಮ್ಮೇಳನ ನಡೆಯುವ ದಿನಗಳಂದು ಸಂಜೆ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ 1 ಮುಖ್ಯ ವೇದಿಕೆ ಹಾಗೂ 2 ಸಮಾನಾಂತರ ವೇದಿಕೆ ಇರಲಿದೆ. ಇದಕ್ಕೆ ಕ್ರಿಯಾಯೋಜನೆ ತಯಾರಿಸಿ ಅಂದಾಜು ಮೊತ್ತವನ್ನು ನೀಡಬೇಕು. ಸಾಂಸ್ಕೃತಿಕ ಹಾಗೂ ಮೆರವಣಿಗೆ ಸಮಿತಿಯಲ್ಲಿ ಸದಸ್ಯರು ಜಿಲ್ಲೆ, ಹೊರಜಿಲ್ಲೆ, ಹೊರ ರಾಜ್ಯದ ಕಲಾವಿದರಿಗೆ ಆದ್ಯತೆ ನೀಡುವಂತಿರಬೇಕು. ಡೊಳ್ಳುಕುಣಿತ ಎಂದ ಕೂಡಲೇ ಇದು ಕೇವಲ ಒಂದು ಸ್ಥಳ ಅಥವಾ ಒಂದು ಸಂಘಕ್ಕೆ ಸೀಮಿತವಾಗಬಾರದು. ಈ ಕಲೆಯಲ್ಲಿರುವ ಎಲ್ಲರನ್ನೂ ಒಗ್ಗೂಡಿಸಿ ತಂಡ ರಚಿಸುವಂತೆ ಸಲಹೆ ನೀಡಿದರು.ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೂ ಆದ್ಯತೆ ನೀಡುವುದರಿಂದ ವಿವಿಧ ಕಲಾ ಪ್ರಾಕಾರಗಳನ್ನು ತಿಳಿಸಬಹುದು. ಆದ್ದರಿಂದ ಇಡೀ ಜಿಲ್ಲೆ ಹಾಗೂ ರಾಜ್ಯದ ಕಲಾ ತಂಡಗಳಿಗೆ ಅವಕಾಶ ನೀಡಲಾಗುವುದು. ಪ್ರತಿ ಜಿಲ್ಲೆಯನ್ನು ಪ್ರತಿನಿಧಿಸುವ ಕಲಾ ತಂಡಗಳಿಗೂ ಸಹ ಅವಕಾಶ ನೀಡಲಾಗುತ್ತದೆ. ಮೆರವಣಿಗೆಯಲ್ಲಿ ಸ್ಥಳೀಯ ತಂಡಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ನುಡಿದರು.
ಸ್ಮರಣಾ ಸಂಚಿಕೆ:ಸ್ಮರಣಾ ಸಂಚಿಕೆಯನ್ನು ಸಾಹಿತ್ಯ ಸಮ್ಮೇಳನ ನಡೆಯುವ 3 ದಿನಗಳ ಅವಧಿಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುವುದು. ಸ್ಮರಣಸಂಚಿಕೆ ಉತ್ತಮವಾಗಿ ಮೂಡಿಬರಲು ಕನ್ನಡ ನಾಡು, ನುಡಿ, ಕಲೆಯ ಬಗ್ಗೆ ಲೇಖನಗಳನ್ನು ಸಂಗ್ರಹಿಸಬೇಕು. ಆ ಲೇಖನಗಳು ವಿಷಯಾಧಾರಿತವಾಗಿದ್ದರೆ ಉತ್ತಮ. ಲೇಖನಗಳಿಗೆ ಹೊರ ರಾಜ್ಯ ಹಾಗೂ ಜಿಲ್ಲೆಯವರಿಗೆ ಮಾಹಿತಿ ನೀಡಿ ಸಂಗ್ರಹಿಸುವುದರ ಜೊತೆಗೆ ಉತ್ತಮ ಗುಣಮಟ್ಟವಿರುವ ಲೇಖನಗಳನ್ನು ಆಯ್ಕೆ ಮಾಡುವಂತೆ ಸಲಹೆ ನೀಡಿದರು.
ನಿತ್ಯ 1 ಲಕ್ಷ ಜನ ಸೇರುವ ನಿರೀಕ್ಷೆ:ಪ್ರತಿ ದಿನ ಒಂದುವರೆ ಲಕ್ಷ ಜನರು ಭಾಗವಿಸುವ ನಿರೀಕ್ಷೆ ಇದೆ. ಸ್ವಚ್ಛತೆಗೆ ಬೇಕಿರುವ ತಂಡಗಳನ್ನು ರಚಿಸಿಕೊಳ್ಳಿ. ಪಾರ್ಕಿಂಗ್, ವೇದಿಕೆ, ಆಹಾರ ಕೌಂಟರ್‌ಗಳಲ್ಲಿ ಇನ್ನಿತರೆ ಸ್ಥಳಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು. ಹೆಚ್ಚಿನವರು ಜನರು ಬೇಕಿದ್ದರೆ ಸ್ವಯಂ ಸೇವಕರು ಹಾಗೂ ಎನ್ಎಸ್‌ಎಸ್ ವಿದ್ಯಾರ್ಥಿಗಳನ್ನು ಪಡೆದುಕೊಂಡು ತಂಡ ರಚಿಸಿ ಈಗಿನಿಂದಲೇ ಅವರಿಗೆ ತರಬೇತಿ ನೀಡುವಂತೆ ತಿಳಿಸಿದರು.
ತಾತ್ಕಲಿಕ ಆಸ್ಪತ್ರೆ ತೆರೆದು ವೈದ್ಯರು ಹಾಗೂ ಇನ್ನಿತರೆ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು. ಔಷಧ ಹಾಗೂ ಬೇಕಿರುವ ಇನ್ನಿತರೆ ವಸ್ತುಗಳನ್ನು ದಾಸ್ತಾನು ಮಾಡಿಕೊಳ್ಳುವುದು. ಆಹಾರ ತಯಾರಿಕೆ ಸ್ಥಳದಲ್ಲಿ ಹೆಚ್ಚಿನ ಆಹಾರ ಸುರಕ್ಷತಾ ಅಧಿಕಾರಿಗಳ ಅವಶ್ಯಕತೆ ಇದ್ದು, ನಿಯೋಜಿಸಿಕೊಳ್ಳಲು ಕೇಂದ್ರ ಕಚೇರಿಗೆ ಪತ್ರ ಬರೆಯಿರಿ. ಸ್ಥಳ ಪರಿಶೀಲನೆ ನಡೆಸಿ ತಾತ್ಕಾಲಿಕ ಶೌಚಾಲಯ ತೆರೆಯಲು ಯೋಜನೆ ರೂಪಿಸುವಂತೆ ಸೂಚಿಸಿದರು.ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಾಗಿರುವುದ ರಿಂದ ವಿಭಿನ್ನ ಕಲಾ ತಂಡಗಳಿಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಎಲ್ಲಾ ಕಲಾ ಪ್ರಕಾರಗಳಿಗೂ ಅವಕಾಶ ನೀಡುವುದು ಮುಖ್ಯವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒಂದು ದಿನಕ್ಕೆ ಎಷ್ಟು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬಹುದು ಎಂದು ಸಮಿತಿಯಲ್ಲಿ ಚರ್ಚಿಸಿ, ಸಮಯವನ್ನು ನಿಗಧಿಪಡಿಸುವಂತೆ ತಿಳಿಸಿದರು.
ಆರೋಗ್ಯ ಮೈಕ್ರೋ ಲೆವಲ್ ಪ್ಲಾನ್ ಮಾಡಿ ಬೇರೆ ಜಿಲ್ಲೆಯಿಂದ ಸೆಳೆದು ನಿಯೋಜಿಸಿಕೊಳ್ಳಬಹುದು. ಪ್ರತಿ ಕಡೆ ವೈದ್ಯರನ್ಬೊಳಗೊಂಡ ಯುನಿಟ್ ರಚಿಸಿ. ಚಿಕ್ಕ ಅಂಬ್ಯೂಲೆನ್ಸ್ ಗಳನ್ನು ನಿಯೋಜನೆ ಮಾಡಿಕೊಳ್ಳಿ. ಖಾಸಗಿ ಆಸ್ಪತ್ರೆ ಯವರಿಗೆ ಸಹ ಪತ್ರ ಬರೆದು ಅವರನ್ನು ಸಹ ಮೂರು ದಿನಗಳನ್ನು ನಿಯೋಜಿಸಿಕೊಡುವಂತೆ ಮನವಿ ಮಾಡುವಂತೆ ತಿಳಿಸಿದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ, ಸೇರಿದಂತೆ ವಿವಿಧ ಸಮಿತಿಯ ಎಚ್.ಎಸ್.ಮುದ್ದೇಗೌಡ, ತೈಲೂರು ವೆಂಕಟಕೃಷ್ಣ, ಮ.ರಾಮಕೃಷ್ಣ ಇತರರಿದ್ದರು.