ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರದ ಐತಿಹಾಸಿಕ ತಾಜ್ ಬಾವಡಿ ಸೇರಿದಂತೆ ಅನೇಕ ಪುರಾತನ ಬಾವಿಗಳನ್ನು ಸ್ವಚ್ಛಗೊಳಿಸಲಾಗಿದ್ದು, ಈ ಸ್ವಚ್ಛಗೊಂಡಿರುವ ಪುರಾತನ ಬಾವಿಗಳ ನೀರನ್ನು ಗೃಹೋಪಯೋಗಿ ಕಾರ್ಯಗಳಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ ಕಾರ್ಯಯೋಜನೆ ರೂಪಿಸಿ ತುರ್ತು ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಸೂಚನೆ ನೀಡಿದರು.ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈ ಎಲ್ಲ ಬಾವಡಿಗಳ ನೀರನ್ನು ಕುಡಿಯುವ ನೀರು ಹೊರತುಪಡಿಸಿ ಸ್ನಾನ, ಬಟ್ಟೆ ಒಗೆಯಲು ಬಳಸಬಹುದಾಗಿದೆ. ಸರಿಸುಮಾರು ೫ ಎಂಎಲ್‌ಡಿಯಷ್ಟು ನೀರು ಸದ್ಭಳಕೆ ಮಾಡಿಕೊಳ್ಳಬಹುದಾಗಿದ್ದು, ಭೂತನಾಳ ಕೆರೆ ಜಲಮೂಲದ ಹೊರೆಯನ್ನು ಸಂಪೂರ್ಣವಾಗಿ ತಗ್ಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಖಾಸಗಿ ಬೋರ್‌ವೆಲ್‌ಗಳನ್ನು ಸಹ ನೀರು ಪೂರೈಕೆಯ ಮಾಧ್ಯಮಗಳಾಗಿ ಬಳಸಿಕೊಳ್ಳಬಹುದಾಗಿದೆ. ಆಯಾ ವಾರ್ಡ್ ಸದಸ್ಯರು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿ ಬಾಡಿಗೆ ಒಪ್ಪಂದದ ಆಧಾರದ ಮೇಲೆ ಕುಡಿಯುವ ನೀರಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಭೂತನಾಳ ಕೆರೆಗೆ ತಿಡಗುಂದಿ ಅಕ್ವಾಡೆಕ್ಟ್ ಮೂಲಕ ನೀರು ತುಂಬಿಸುವ ಕಾರ್ಯ ಕೈಗೊಳ್ಳಲಾಗುವುದು, ಈಗಾಗಲೇ ಈ ಯೋಜನೆಗೆ ₹೭.೫ ಕೋಟಿ ಖರ್ಚಾಗಲಿದ್ದು, ಮೂರುವರೆ ಕೋಟಿ ರು. ಹಣ ಪಾಲಿಕೆ ವತಿಯಿಂದ ಕೈಗೊಳ್ಳಲಾಗುವುದು ಎಂದರು.
ಪಾಲಿಕೆ ಸದಸ್ಯ ಅಶೋಕ ನ್ಯಾಮಗೌಡ, ಈ ಹಿಂದೆ ಪಿವಿಸಿ ಪೈಪ್ ಕುಡಿಯುವ ನೀರಿನ ಪೈಪ್‌ಲೈನ್ ವ್ಯವಸ್ಥೆಗೆ ಪುರಾತನ ತಾಜ್‌ಬಾವಡಿ, ಚಂದಾಬಾವಡಿ ಮೊದಲಾದವುಗಳ ಸಂಪರ್ಕ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂದರು.ಮಂಗಳೂರು ಮಾದರಿ ಅನುಸರಿಸಿ:
ಸದಸ್ಯ ರಾಜಶೇಖರ ಮಗಿಮಠ ಮಾತನಾಡಿ, ಬಡ್ಡಿದರ ಆಕರಣೆ ಮಂಗಳೂರು ಮಾದರಿ ಅನುಸರಿಸಿ ಪಾಲಿಕೆ ಆಸ್ತಿ ಕರ, ಘರ್ ಪಟ್ಟಿ ಮೊದಲಾದವುಗಳಿಗೆ ಬಡ್ಡಿ ಆಕರಣೆ ವಿಷಯವಾಗಿ ಶೇ.೨೫೦ಕ್ಕೂ ಹೆಚ್ಚು ಬಡ್ಡಿಪ್ರಮಾಣ ವಿಧಿಸಲಾಗುತ್ತಿದೆ. ಇದು ಜನರಿಗೆ ಅತ್ಯಂತ ಹೊರೆಯಾಗುತ್ತಿದ್ದು, ಈ ಮಾದರಿಯ ಸಮಸ್ಯೆ ಎದುರಾದಾಗ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ತೆರಿಗೆ ಪರಿಷ್ಕರಣೆ ಮಾಡಲಾಗಿದೆ. ಈ ಮಾದರಿಯಲ್ಲಿ ವಿಜಯಪುರ ಮಹಾನಗರ ಪಾಲಿಕೆಯಲ್ಲಿಯೂ ತೆರಿಗೆ ಪರಿಷ್ಕರಣೆ ಮಾಡಬೇಕು. ಕೂಡಲೇ ಈ ಹೊರೆಯನ್ನು ಕಡಿಮೆ ಮಾಡಿ ಎಂದರು.ಮಹಾನಗರ ಪಾಲಿಕೆ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಪಾಲಿಕೆ ಕಾರ್ಮಿಕರಿಗೂ ದುಡ್ಡು ಕೊಡಲು ಹಣವಿಲ್ಲ. ಹೀಗಾಗಿ ತುರ್ತು ಪರಿಹಾರ ನಿಧಿಯಾಗಿ ₹೧೦೦ ಕೋಟಿ ಹಣವಾದರೂ ಕೊಡಿ ಎಂದು ಮಗಿಮಠ ಮನವಿ ಮಾಡಿಕೊಂಡರು. ೨೪x೭ ಯೋಜನೆ ಪೂರ್ವದಲ್ಲಿ ೧೦ ದಿನಕ್ಕೊಮ್ಮೆ ನೀರು ಬರುತ್ತಿತ್ತು, ಈಗ ನೂರಾರು ಕೋಟಿ ರು. ಖರ್ಚು ಮಾಡಿ ಕುಡಿಯುವ ನೀರಿನ ಯೋಜನೆ ಮಾಡಿಯಾದರೂ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಜೈನ ಕಂಪನಿ ಇನ್ನೂ ಅನೇಕ ಕಡೆ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಎಲ್ಲ ವರ್ಕ್ ಕಂಪ್ಲೀಟ್ ಆಗಿ ಅದು ಪರಿಶೀಲನೆಯಾದ ನಂತರವೇ ಅವರಿಗೆ ಹಸ್ತಾಂತರ ಮಾಡಬೇಕು ಎಂದು ಸಲಹೆ ನೀಡಿದರು.ಉಪಮೇಯರ್ ದಿನೇಶ ಹಳ್ಳಿ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ಪಾಲಿಕೆ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.----ಬಾಕ್ಸ್
ಇಂಗ್ಲಿಷ್‌ನಲ್ಲೇ ಬಯ್ಯತ್ತಿದ್ದಾರೆ: ಪಾಟೀಲಕೆಲವೊಂದು ವಾರ್ಡ್‌ಗಳಲ್ಲಿ ಯಥೇಚ್ಛವಾಗಿ ನೀರು ವ್ಯರ್ಥವಾಗಿ ಹರಿಯುತ್ತಿದೆ. ನಮ್ಮ ವಾರ್ಡ್ ನಂ.೨೪ ರಲ್ಲಿ ಕುಡಿಯುವ ನೀರಿಗೆ ತತ್ವಾರವಿದೆ ಎಂದು ಸದಸ್ಯೆ ವಿಮಲಾ ಕಾಣೆ ದೂರಿದರೆ, ನಮ್ಮ ವಾರ್ಡ್‌ನಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ನನ್ನ ವಾರ್ಡ್‌ನಲ್ಲಿ ಡಾಕ್ಟರ್, ಎಂಜಿನಿಯರ್‌ಗಳು ನನಗೆ ಇಂಗ್ಲಿಷ್‌ನಲ್ಲಿಯೇ ಬಯ್ಯುತ್ತಿದ್ದಾರೆ ಎಂದು ಮಳುಗೌಡ ಪಾಟೀಲ ಅಳಲು ತೋಡಿಕೊಂಡ ಪ್ರಸಂಗ ನಡೆಯಿತು.ನನ್ನ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಅತಿಯಾಗಿದೆ. ನನ್ನ ವಾರ್ಡ್‌ನಲ್ಲಿ ಡಾಕ್ಟರ್, ಎಂಜಿನಿಯರ್‌ಗಳೇ ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಸಮಸ್ಯೆಯಿಂದ ಬೇಸರಗೊಂಡಿರುವ ಅವರು ನನಗೆ ಕರೆ ಮಾಡಿ ಇಂಗ್ಲಿಷ್‌ನಲ್ಲಿ ಬಯ್ಯುತ್ತಿದ್ದಾರೆ. ಯಾವ ರೀತಿ ಉತ್ತರಿಸಲಿ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.ಅಧಿಕಾರಿಗಳು ಫೋನ್ ರಿಸೀವ್ ಮಾಡುವುದೇ ಇಲ್ಲ, ಈ ರೀತಿಯಾದರೆ ಯಾವ ರೀತಿ ಜನರ ಸಮಸ್ಯೆಯನ್ನು ಹೇಳಬೇಕು ಎಂದು ಸದಸ್ಯ ರಾಹುಲ್ ಜಾಧವ ಅಸಮಾಧಾನ ಹೊರಹಾಕಿದರು.
ದೌಲತಕೋಟಿ ಬಳಿ ಸರ್ಕಾರಿ ಉರ್ದು ಶಾಲೆ ಕುಸಿದು ಇಬ್ಬರು ಮಕ್ಕಳಿಗೆ ಗಾಯವಾಗಿದೆ. ಶಾಲೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲವಾಗಿದೆ. ಸಚಿವರು ಈ ಸ್ಥಳಕ್ಕೆ ಕೂಡಲೇ ಭೇಟಿ ನೀಡಿ ಎಂದು ಸದಸ್ಯೆ ಶಾಹೀನ್ ಬಾಂಗಿ ಸಭೆಯ ಗಮನ ಸೆಳೆದರು.--ಡ್ರೈನೇಜ್ ನೀರು ಪೂರೈಕೆಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ವಿಮಲಾ ರಫೀಕ್‌ಅಹ್ಮದ್ ಖಾಣೆ, ವಾರ್ಡ್ ನಂ.೨೪ರಲ್ಲಿ ಕುಡಿಯುವ ನೀರಿನಲ್ಲಿ ಡ್ರೈನೇಜ್ ನೀರು ಪೂರೈಕೆಯಾಗುತ್ತಿದೆ ಎಂದು ಗಂಭೀರವಾಗಿ ದೂರಿದರು. ಈ ರೀತಿ ನೀರು ಪೂರೈಕೆಯಾದರೇ ಜನರು ಯಾವ ರೀತಿ ಬದುಕಬೇಕು ಎಂದು ಪ್ರಶ್ನಿಸಿದರು.
ಆಗ ಸಚಿವ ಡಾ.ಎಂ.ಬಿ. ಪಾಟೀಲ ಸಹ ಆತಂಕ ವ್ಯಕ್ತಪಡಿಸಿ ಅಧಿಕಾರಿಗಳಿಗೆ ವಿವರಣೆ ಕೇಳಿ, ಈ ಹಿಂದೆ ಡ್ರೈನೇಜ್ ಲೈನ್ ಲಿಂಕ್ ಆಗಿದ್ದ ಕಾರಣ ಈ ರೀತಿಯ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆ ನಿವಾರಣೆಯಾಗಿದೆ ಎಂದರು.---ನೀರು ಪೂರೈಕೆಗೆ ಟೈಂಲೈನ್ ಮಾಡಿ
ವಿಮಲಾ ಕಾಣೆ, ಕೆಲವೊಂದು ವಾರ್ಡ್‌ಗಳಲ್ಲಿ ಯಥೇಚ್ಚವಾಗಿ ರಾತ್ರಿ ಸಮಯದಲ್ಲಿ ನೀರು ಪೂರೈಕೆಯಾಗುತ್ತದೆ. ರಸ್ತೆಗೆ ಹರಿದು ಹೋಗುತ್ತಿದೆ. ಗಾಡಿ ತೊಳೆಯಲು ಸಹ ಈ ನೀರು ಬಳಕೆಯಾಗುತ್ತಿದೆ. ಆದರೆ ನಮ್ಮ ವಾರ್ಡ್‌ನಲ್ಲಿ ಮಾತ್ರ ಕುಡಿಯಲು ನೀರಿಲ್ಲ. ಹೀಗಾಗಿ ಒಂದು ಟೈಂಲೈನ್ ಫಿಕ್ಸ್ ಮಾಡಿ ಎಂದು ಸಚಿವರಿಗೆ ಮನವಿ ಮಾಡಿಕೊಂಡರು.--ಜಲಮಂಡಳಿ ಅಧಿಕಾರಿ ಕರೆ ಮಾಡಿ ಸಚಿವರಿಂದ ಎಚ್ಚರಿಕೆಕುಡಿಯುವ ನೀರಿನ ಗಂಭೀರ ಸಮಸ್ಯೆ ಚರ್ಚೆ ನಡೆಯುತ್ತಿದ್ದಾಗ ಜಲಮಂಡಳಿಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ಸಭೆಗೆ ಹಾಜರಾಗಿರಲಿಲ್ಲ. ಜಲಮಂಡಳಿ ಅಧ್ಯಕ್ಷರ ಸಭೆಗೆ ಹೋಗಿದ್ದಾರೆ ಎಂದು ಉಳಿದ ಅಧಿಕಾರಿಗಳು ಸಮಜಾಯಿಷಿ ನೀಡಲು ಬಂದಾಗ ಗರಂ ಆದ ಸಚಿವರು ಇಲ್ಲಿ ಜನರ ಸಮಸ್ಯೆ ಇದೆ. ಕುಡಿಯುವ ನೀರಿನ ಸಮಸ್ಯೆಯ ಗಂಭೀರತೆ ಇದೆ. ಈ ಹೊತ್ತಿನಲ್ಲಿ ಹೂಗುಚ್ಚ ನೀಡಲು ಹೋಗಿದ್ದಾರಾ? ಎಂದು ಸ್ವತಃ ಅಧಿಕಾರಿಗೆ ಕರೆ ಮಾಡಿದರು.ಇಲ್ಲಿ ಗಂಭೀರವಾಗಿ ಸಭೆ ನಡೆಯುತ್ತಿದೆ. ಕುಡಿಯುವ ನೀರು ೧೧ ದಿನವಾದರೂ ಪೂರೈಕೆಯಾಗುತ್ತಿಲ್ಲ, ಇಂತಹ ಸಂದರ್ಭದಲ್ಲಿ ನೀವು ಸಭೆಯ ಉದ್ದೇಶ ಹೇಳಿ ಹೋಗುವುದು ತಪ್ಪಿಸಬಹುದಿತ್ತಲ್ಲ ಎಂದು ಅಸಮಾಧಾನ ಹೊರಹಾಕಿದರು. ಆಗ ಜಲಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಇದ್ದರೆ ಅವರ ಕೈಗೆ ಫೋನ್ ಕೊಡಿ ಎಂದ ಸಚಿವ ಡಾ.ಎಂ.ಬಿ. ಪಾಟೀಲರು, ನಿಮ್ಮ ಅಧಿಕಾರಿಯ ವರ್ತನೆ ಬೇಜಾರು ತಂದಿದೆ. ಅಮಾನತ್ತು ಸಹ ಮಾಡಬೇಕಾಗುತ್ತದೆ. ಈ ಗಂಭೀರ ಸಮಸ್ಯೆ ಬಿಟ್ಟು ಅಲ್ಲಿಗೆ ಬರುವ ಔಚಿತ್ಯ ಇರಲಿಲ್ಲ ಎಂದು ಹೇಳಿದ ಪ್ರಸಂಗವೂ ನಡೆಯಿತು.
---ಕಡ್ಡಾಯವಾಗಿ ಸಭೆಗೆ ಹಾಜರಾಗಲು ಒತ್ತಾಯಸಭೆ ಆರಂಭವಾಗುತ್ತಿದ್ದಂತೆ ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ, ಸಭೆಯಲ್ಲಿ ಅನೇಕ ಅಧಿಕಾರಿಗಳು ಗೈರಾಗಿದ್ದಾರೆ. ಇದೊಂದು ಗಂಭೀರವಾದ ಸಭೆ ಅಧಿಕಾರಿಗಳು ಹಾಜರಾಗದೇ ಇದ್ದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯ ರಾಹುಲ್ ಜಾಧವ ದನಿಗೂಡಿಸಿದರು. ಅಧಿಕಾರಿಗಳು ಕಡ್ಡಾಯವಾಗಿ ಸಭೆಯಲ್ಲಿ ಹಾಜರಾಗಬೇಕು ಎಂಬ ಒತ್ತಾಯ ಎಲ್ಲ ಸದಸ್ಯರಿಂದಲೂ ಕೇಳಿ ಬಂದಿತು.--
ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿನಡೆದಾಡುವ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಪಾಲಿಕೆ ಸದಸ್ಯ ವಿಜಯಕುಮಾರ ಬಿರಾದಾರ, ಪಾಲಿಕೆ ಮಾಜಿ ಸದಸ್ಯರಾದ ವಿಜಯಕುಮಾರ ಮಂಗಳವೇಡೆ, ನಗರಸಭೆ ಮಾಜಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ಲೋಣಿ, ಮಾಜಿ ಅಧ್ಯಕ್ಷ ಕಮಾಲ್ ಸಾಬ ಇನಾಮದಾರ, ಮಾಜಿ ಉಪಮೇಯರ್ ಆನಂದ ಧುಮಾಳೆ, ಗಣ್ಯ ಉದ್ಯಮಿ ಡಿ.ಎಸ್ ಗುಡ್ಡೋಡಗಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.