ಕನ್ನಡಪ್ರಭ ವಾರ್ತೆ ಹಲಗೂರು
ರೇಷ್ಮೆಗೂಡು ಬೆಳೆಯಲು ಹುಳುಗಳಿಗೆ ಹಾಕುವ ಹಿಪ್ಪನೇರಳೆ ಸೊಪ್ಪು ತಿಂದ ನಂತರ ಉಳಿದ ತ್ಯಾಜ್ಯ ವಸ್ತುಗಳನ್ನು ಹೊರ ಹಾಕಿ ಸುಡುವ ಬದಲು ಆ ಕಸವನ್ನೇ ನಿಮ್ಮ ಜಮೀನುಗಳಿಗೆ ಹಾಕುವುದರಿಂದ ಜಮೀನಿನ ಫಲವತ್ತತೆ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಕೆ.ಆರ್.ಪೇಟೆ ರೇಷ್ಮೆ ತರಬೇತಿ ಸಂಸ್ಥೆ ರೇಷ್ಮೆ ಉಪ ನಿರ್ದೇಶಕ ಸೋಮಣ್ಣ ತಿಳಿಸಿದರು.ಕೊನ್ನಾಪುರ ಗ್ರಾಮದ ರಾಮಮಂದಿರ ದೇವಸ್ಥಾನದ ಆವರಣದಲ್ಲಿ ನಡೆದ ರಾಜ್ಯ ಸರ್ಕಾರ, ರೇಷ್ಮೆ ಇಲಾಖೆ ವತಿಯಿಂದ ರೇಷ್ಮೆ ಬೆಳೆಗಾರರಿಗೆ ಒಂದು ದಿನದ ಪ್ರಾತ್ಯಕ್ಷಿಕೆ ತರಬೇತಿ ಹಾಗೂ ದ್ವಿತಳಿ ರೇಷ್ಮೆ ಬೆಳೆಗಾರರ ಒಂದು ದಿನದ ಕಾರ್ಯಾಗಾರ ಹಾಗೂ ರೇಷ್ಮೆ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ 32 ಸಾವಿರ ರೇಷ್ಮೆಗಾರರು ರೇಷ್ಮೆ ಬೆಳೆಯುತ್ತಿದ್ದಾರೆ. ನಿಮ್ಮ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯಬೇಕಾದರೆ ಜಮೀನಿನ ಮಣ್ಣಿನ ಫಲವತ್ತತೆ ಚೆನ್ನಾಗಿರಬೇಕು. ಯಾವ ಬೆಳೆ ಬೆಳೆಯುತ್ತೀರೋ ಆ ಬೆಳೆಗೆ ಬೇಕಾದ ಸಮಯಕ್ಕೆ ಸರಿಯಾದ ಗೊಬ್ಬರಗಳನ್ನು ಹಾಕಬೇಕು. ಆಗ ಉತ್ತಮವಾದ ಬೆಳೆ ಬೆಳೆಯುವುದಕ್ಕೆ ಸಹಕಾರಿಯಾಗಲಿದೆ ಎಂದರು.ರೇಷ್ಮೆ ಬೆಳೆಯುತ್ತಿರುವ ರೈತರು ರೇಷ್ಮೆ ಹುಳುಗಳಿಗೆ ಹಾಕುವ ಹಿಪ್ಪುನೇರಳೆ, ಸೊಪ್ಪಿನ ಕಡ್ಡಿಗಳನ್ನು ಹೊರಗಡೆ ಹಾಕಿ ಬೆಂಕಿ ಹಾಕುವುದು ಸೂಕ್ತವಲ್ಲ, ಅದನ್ನು ನಿಮ್ಮ ಜಮೀನಿನ ಒಂದು ಮೂಲೆಯಲ್ಲಿ 3 ಅಡಿ ಹಳ್ಳವನ್ನು ಮಾಡಿ ಆ ಕಸ ಕಡ್ಡಿಗಳನ್ನು ಅದರಲ್ಲಿ ಹಾಕಿ ಮಣ್ಣು ಮುಚ್ಚಿ ನೋಡಿಕೊಳ್ಳಬೇಕು. ಆಗ ಅದು ದನದ ಗೊಬ್ಬರಕ್ಕಿಂತ ಉತ್ತಮವಾದ ಗೊಬ್ಬರವಾಗುತ್ತದೆ. ಅದನ್ನೇ ನಿಮ್ಮ ಜಮೀನುಗಳಿಗೆ ಆರು ತಿಂಗಳಿಗೊಮ್ಮೆ ಹಾಕಿಕೊಳ್ಳುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎಂದು ಸಲಹೆ ನೀಡಿದರು.
ಭೂಮಿಯಲ್ಲಿ ಒಂದೇ ಬಗೆಯ ಬೆಳೆಗಳನ್ನು ಬೆಳೆಯುತ್ತಾ ಹೋದಂತೆ ಫಸಲಿನ ಇಳುವರಿ ಮತ್ತು ಗುಣಮಟ್ಟ ಕಡಿಮೆಯಾಗುತ್ತಾ ಹೋಗುತ್ತದೆ. ಅದ್ದರಿಂದ ರೈತರು ಕಾಲ ಕಾಲಕ್ಕೆ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಪ್ರಸ್ತುತ ಮಣ್ಣಿನ ಗುಣಮಟ್ಟ ಗುರುತಿಸಿ ತಂತ್ರಜ್ಞರು ಸೂಚಿಸಿದ ಗೊಬ್ಬರ ನೀಡಿದರೆ ಬೆಳೆಗಾರರಿಗೆ ಉತ್ತಮ ಇಳುವರಿ ಕೈ ಸೇರಲಿದೆ ಎಂದು ಸಲಹೆ ನೀಡಿದರು.ರೇಷ್ಮೆ ತಾಂತ್ರಿಕ ಸೇವಾ ಅಧಿಕಾರಿ ಜಿ.ವಿ.ಶ್ರೀನಿವಾಸ್ ಗೌಡ ಮಾತನಾಡಿ, ಈ ಭಾಗದ ರೈತರು ಹಿಪ್ಪುನೇರಳೆ ಗಿಡದ ತಳಮಟ್ಟದಿಂದ ಒಂದು ಅಡಿಗೆ ಕತ್ತರಿಸಲಾಗುತ್ತಿದೆ. ಇದರಿಂದ ಮಳೆ ಬಂದಾಗ ಗಿಡಕ್ಕೆ ಮಣ್ಣು ಹಾರಿ ಸೊಪ್ಪು ಹಾಳಾಗುತ್ತದೆ. ಇದರ ಬದಲಾಗಿ ಎರಡು ಅಡಿಗೆ ಕಾಂಡ ಕತ್ತರಿಸಿದರೆ ಕಾಂಡದಲ್ಲಿನ ಪ್ರತಿ ಸೊಪ್ಪು ಉಪಯೋಗಕ್ಕೆ ಬರುತ್ತದೆ. ಈ ನಿಟ್ಟಿನಲ್ಲಿ ರೈತರು ಚಿಂತಿಸಿ ಬದಲಾವಣೆಗೆ ಮುಂದಾಗಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಟಿ.ಸುರೇಶ್, ಸತ್ಯ ನಾರಾಯಣ ಭಟ್, ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಜಿ.ವಿ.ಶ್ರೀನಿವಾಸ್ ಗೌಡ, ರೇಷ್ಮೆ ನಿರೀಕ್ಷಕ ಎಂ.ಸಿ.ನವೀನ್ ಕುಮಾರ್, ಗ್ರಾಪಂ ಸದಸ್ಯ ಕೆ.ಎಂ.ನಾರಾಯಣಗೌಡ ಸೇರಿ ಹಲವರು ಭಾಗವಹಿಸಿದ್ದರು.