ಕೋವಿಡ್ ನಿರ್ವಹಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

ಪ್ರಸ್ತುತ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು, ಪ್ರಯೋಗಾಲಯದ ತಜ್ಞರು, ಇತರೇ ಅಗತ್ಯ ಸಿಬ್ಬಂದಿ ಮತ್ತು ವಾಹನ ಹಾಗೂ ಆ್ಯಂಬುಲೆನ್ಸ್‌ ಕೊರತೆ ನೀಗಿಸುವ ಬಗ್ಗೆ ಈಗಿನಿಂದಲೇ ಅಗತ್ಯ ಪರ್ಯಾಯ ಸಿದ್ಧತೆ ಕೈಗೊಳ್ಳಬೇಕು.

ಕಾರವಾರ:ಜಿಲ್ಲೆಯಲ್ಲಿ ಕೋವಿಡ್ ಸೋಂಕು ಎದುರಿಸುವ ಕುರಿತಂತೆ ಆರೋಗ್ಯ ಇಲಾಖೆಯಿಂದ ಎಲ್ಲ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕೋವಿಡ್ ಸೋಂಕಿನ ನಿರ್ವಹಣೆ ಕುರಿತಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೋವಿಡ್ ಯಶಸ್ವಿಯಾಗಿ ಎದುರಿಸುವ ಕುರಿತಂತೆ, ಪ್ರಸ್ತುತ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು, ಪ್ರಯೋಗಾಲಯದ ತಜ್ಞರು, ಇತರೇ ಅಗತ್ಯ ಸಿಬ್ಬಂದಿ ಮತ್ತು ವಾಹನ ಹಾಗೂ ಆ್ಯಂಬುಲೆನ್ಸ್‌ ಕೊರತೆ ನೀಗಿಸುವ ಬಗ್ಗೆ ಈಗಿನಿಂದಲೇ ಅಗತ್ಯ ಪರ್ಯಾಯ ಸಿದ್ಧತೆ ಕೈಗೊಳ್ಳಬೇಕು. ಆರೋಗ್ಯಕ್ಕೆ ಸಂಬಂಧಿತ ಎಲ್ಲ ಉಪಕರಣ ಸುಸಜ್ಜಿತವಾಗಿಟ್ಟುಕೊಂಡು, ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಸಿದ್ಧ ಮಾಡಿಟ್ಟುಕೊಳ್ಳುವ ಮೂಲಕ ಜಿಲ್ಲೆಯ ಜನರಿಗೆ ಆರೋಗ್ಯ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ಎಚ್ಚರವಹಿಸಬೇಕು ಎಂದರು.ಎಲ್ಲ ಆರೋಗ್ಯಾಧಿಕಾರಿಗಳು ಕೇಂದ್ರ ಸ್ಥಾನಗಳಲ್ಲಿ ಲಭ್ಯವಿದ್ದು, ತಕ್ಷಣದಲ್ಲಿ ಸಂಪರ್ಕಕ್ಕೆ ಸಿಗಬೇಕು. ಆರೋಗ್ಯ ಕೇಂದ್ರಗಳಲ್ಲಿ ದೂರವಾಣಿಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಬೇಕು. ತಮ್ಮ ವ್ಯಾಪ್ತಿಯ ಸಾರ್ವಜನಿಕರಿಗೆ ಈ ದೂರವಾಣಿ ಸಂಖ್ಯೆಗಳ ಬಗ್ಗೆ ಮಾಹಿತಿ ನೀಡಿ, ಕರೆ ಬಂದಲ್ಲಿ ತಕ್ಷಣ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಕೋವಿಡ್ ನಿರ್ವಹಣೆಯಲ್ಲಿ ಲೋಪವಾದರೆ ಸಂಬಂಧಂಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕೋವಿಡ್ ನಿರ್ವಹಣೆಯಲ್ಲಿ ಆರೋಗ್ಯ ಇಲಾಖೆಗೆ ಇತರೇ ಇಲಾಖೆಗಳು ಎಲ್ಲ ರೀತಿಯ ಅಗತ್ಯ ಸಹಕಾರ ಮತ್ತು ತುರ್ತು ಸಂದರ್ಭದಲ್ಲಿ ತಮ್ಮ ಇಲಾಖೆಯ ವಾಹನ ಒದಗಿಸಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಯ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಂಬಂಧಂಪಟ್ಟ ತಾಲೂಕಿನ ತಹಸೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೋವಿಡ್ ನಿರ್ವಹಣೆ ಕುರಿತಂತೆ ಕಾಲಕಾಲಕ್ಕೆ ಸಭೆ ನಡೆಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.ಜಿಲ್ಲೆಯ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧಿಗಳನ್ನು ಹೊರಗಿನಿಂದ ಪಡೆಯುವಂತೆ ಕೆಲ ವೈದ್ಯರು ಚೀಟಿ ಕೊಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಯಾವುದೇ ಕಾರಣಕ್ಕೂ ಈ ರೀತಿಯಾಗಿ ರೋಗಿಗಳಿಗೆ ಚೀಟಿ ನೀಡಬಾರದು. ಆರೋಗ್ಯ ರಕ್ಷಾ ಸಮಿತಿಗಳ ಮೂಲಕ ಅಗತ್ಯವಿರುವ ಔಷಧ ಖರೀದಿಸಿ ಉಚಿತವಾಗಿಯೇ ವಿತರಿಸಬೇಕು ಎಂದು ಸಚಿವರು ಸೂಚಿಸಿದರು.ಡಿಎಚ್‌ಒ ಡಾ. ನೀರಜ್ ಬಿ.ವಿ. ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ದಿನದ ಐಎಲ್‌ಐ ಮತ್ತು ಸಾರಿ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದು, ಈ ವರೆಗೆ 71,298 ಪರೀಕ್ಷೆ ನಡೆಸಿದ್ದು, 7 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಪ್ರತಿದಿನ 150 ಐಎಲ್‌ಐ ಮತ್ತು ಸಾರಿ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸುವ ಗುರಿ ಇದ್ದು ಜಿಲ್ಲೆಯಲ್ಲಿ 200 ಪರೀಕ್ಷೆ ನಡೆಸಲಾಗುತ್ತಿದೆ. ಮುಂಜಾಗ್ರತೆಯಾಗಿ 1678 ಬೆಡ್ ವ್ಯವಸ್ಥೆ ಮಾಡಿದ್ದು, ಅದರಲ್ಲಿ 186 ಐಸೋಲೇಷನ್ ಬೆಡ್, 1170 ಆಮ್ಲಜನಕ ವ್ಯವಸ್ಥೆ ಇರುವ ಐಸೋಲೇಷನ್ ಬೆಡ್, 201 ಐಸಿಯು ಬೆಡ್, 121 ಐಸಿಯು ವಿತ್ ವೆಂಟಿಲೇಟರ್ ಬೆಡ್ ಇದೆ. ಪಿಪಿಇ ಕಿಟ್ ಮತ್ತು ಎನ್ 95 ಮಾಸ್ಕ್, ಟ್ರಿಪಲ್ ಲೇಯರ್ ಮಾಸ್ಕ್ ಹಾಗೂ ಜ್ವರ ಶೀತದ ಮಾತ್ರೆಗಳ ಸಾಕಷ್ಟು ದಾಸ್ತಾನು ಇದೆ. ವೆಂಟಿಲೇಟರ್, ಆಕ್ಸಿಮೀಟರ್, ಆಕ್ಸಿಜನ್ ಕಾನ್ಸನ್ ಟ್ರೇಟರ್, ಆಕ್ಸಿಜನ್‌ ಸಿಲೆಂಡರ್, ಪಿಎಸ್‌ಎ ಪ್ಲಾಂಟ್, ಲಿಕ್ವಿಡ್ ಆಕ್ಸಿಜಿನ್ ಸ್ಟೋರೇಜ್ ಟ್ಯಾಂಕ್ ವ್ಯವಸ್ಥೆ ಪರಿಶೀಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಲ್ಲಾ ಪೊಲೀಸ್ ವರಿಷ್ಠ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ್ ಇದ್ದರು.

Share this article