ಜ್ಞಾನಸಾಗರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ತೆರೆದ ಬಾಗಿಲು ಕಾರ್ಯಕ್ರಮದಲ್ಲಿ ಎಎಸ್‌ಐ
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಪ್ರತಿಯೊಬ್ಬ ವಿದ್ಯಾರ್ಥಿಗಳು ಕಾನೂನಿನ ಅರಿವು ಪಡೆದುಕೊಂಡು ಸಮಾಜದಲ್ಲಿ ನರೆಹೊರೆಯವರೊಂದಿಗೆ ಶಾಂತಿ, ಸೌಹಾರ್ದತೆಯಿಂದ ಬದುಕು ಕಟ್ಟಿಕೊಳ್ಳಬೇಕು ಎಂದು ಎಎಸ್‌ಐ ಬಸವರಾಜ ಮಾಲಗಿತ್ತಿ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜ್ಞಾನಸಾಗರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ತೆರೆದ ಬಾಗಿಲು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಯಾರಾದರೂ ವಿನಃ ಕಿರುಕುಳ ನೀಡುವುದು, ಅಸಭ್ಯವಾಗಿ ವರ್ತಿಸುತ್ತಿದ್ದರೆ ತಕ್ಷಣ ಠಾಣೆಗೆ ಬಂದು ಅಂತವರ ವಿರುದ್ಧ ದೂರು ನೀಡಿದರೆ ಇಲಾಖೆ ಸದಾ ನಿಮ್ಮ ರಕ್ಷಣೆಗೆ ಇರುತ್ತದೆ ಎಂದರು.
ವಿದ್ಯಾರ್ಥಿಗಳು ಬಾಲ್ಯ ವಿವಾಹ ವಿರೋಧಿಸುವ ಧೈರ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜತೆಗೆ ಬಾಲ ಕಾರ್ಮಿಕ ಪದ್ದತಿಯನ್ನು ಹೊಗಲಾಡಿಸಿ ಮಕ್ಕಳು ಓದುವ ಹಂತದಲ್ಲಿ ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಮದ್ದು, ಬಂದೂಕು, ಗುಂಡುಗಳ ಮಹತ್ವ ಅರಿತಿರಬೇಕು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಜ್ಞಾನ ಹೊಂದಿರಬೇಕು, ಪೊಲೀಸ್ ಇಲಾಖೆಯ ದೈನಂದಿನ ಕರ್ತವ್ಯ, ಎಫ್‌ಐಆರ್ ಚಾರ್ಜ್‌ಶಿಟ್ ದಾಖಲಿಸುವ ಕುರಿತು ಯುಡಿಆರ್ ಹಾಗೂ ಪೋಸ್ಕೋ, ಬಾಲ್ಯ ವಿವಾಹ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು. ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಮಕ್ಕಳ ಕಳ್ಳ ಸಾಗಾಣಿಕೆ, ಮಾದಕ ವಸ್ತುಗಳು, ತಂಬಾಕು ಉತ್ಪನ್ನಗಳ ಬಗ್ಗೆ ಮಹಿಳೆಯರು, ಮಕ್ಕಳು ಜಾಗೃತರಾಗಿರಬೇಕು. ಬಾಲ್ಯ ವಿವಾಹಗಳು ನಡೆದಲ್ಲಿ ಮಕ್ಕಳ ಸಹಾಯವಾಣಿ ೧೦೯೮, ಇಲ್ಲವೇ ಪೊಲೀಸ್ ಸಹಾಯವಾಣಿ ೧೧೨ ಕರೆ ಮಾಡಿ ತಡೆಗಟ್ಟಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಪೊಲೀಸ್ ಮಹಿಳಾ ಪೇದೆ ಹುಸೇನಬಿ, ಶಾಲಾ ಸಹ ಶಿಕ್ಷಕರಾದ ವಿನಯ್ ಹಿರೇಮಠ, ನಿರ್ಮಲಾ ಶ್ರೀಗಿರಿ ಹಾಗೂ ಸಿಬ್ಬಂದಿ ಇದ್ದರು.