ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ

KannadaprabhaNewsNetwork |  
Published : Mar 19, 2024, 12:48 AM IST
ತಹಶೀಲ್ದಾರ  ಮಲ್ಲಿಕಾರ್ಜುನ ಹೆಗ್ಗನ್ನವರ  | Kannada Prabha

ಸಾರಾಂಶ

88 ದಿನ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಎಚ್ಚರಿಕೆಯಿಂದ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆದುಕೊಳ್ಳಬೇಕು. ತಮಗೆ ಬೇಕಾದ ಸವಲತ್ತು ನೀಡಲು 24 ಗಂಟೆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ.

ನವಲಗುಂದ:ಹೋಳಿ ಹಬ್ಬದಂಗವಾಗಿ ಪಟ್ಟಣದ ರಾಮಲಿಂಗ ಕಾಮಣ್ಣನ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಮೈಕ್‌ ಹಾಗೂ ಬ್ಯಾನರ್‌ ಅಳವಡಿಸಲು ಪರವಾನಗಿ ಪಡೆದುಕೊಳ್ಳಬೇಕೆಂದು ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗನ್ನವರ ಹೇಳಿದರು.ಪಟ್ಟಣದ ಜನಸ್ನೇಹಿ ಪೊಲೀಸ್‌ ಠಾಣೆಯಲ್ಲಿ ರಂಜಾನ್‌ ಹಾಗೂ ಹೋಳಿ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.88 ದಿನ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಎಚ್ಚರಿಕೆಯಿಂದ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆದುಕೊಳ್ಳಬೇಕು. ತಮಗೆ ಬೇಕಾದ ಸವಲತ್ತು ನೀಡಲು 24 ಗಂಟೆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ. ಯಾವುದೇ ಗಲಾಟೆ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಹಿರಿಯರು ನೋಡಿಕೊಂಡರೆ ಪೊಲೀಸರಿಗೆ ರಿಲೀಫ್‌ ಸಿಗಲಿದೆ. ಯುವಕರು ಆವೇಶದಲ್ಲಿ ಏನಾದರೂ ತಪ್ಪು ಮಾಡಿದರೆ ಅವರ ಜೀವನ ಮೇಲೆ ದುಷ್ಪರಿಣಾಮ ಬೀರಲಿದೆ. ಆದರಿಂದ ಅಂತಹ ಯಾವುದೇ ಘಟನೆಗಳು ನಡೆದಂತೆ ಹಿರಿಯರು ನೋಡಿಕೊಳ್ಳಬೇಕು. ಈ ಮೂಲಕ ಸಂಭ್ರಮದಿಂದ ಹೋಳಿ ಹಾಗೂ ರಂಜಾನ್‌ ಹಬ್ಬವನ್ನು ಆಚರಿಸಬೇಕೆಂದು ಕರೆ ನೀಡಿದರು.ಸಿಪಿಐ ರವಿಕುಮಾರ ಕಪ್ಪತ್ನವರ ಮಾತನಾಡಿ, ಪಟ್ಟಣದಲ್ಲಿ ಐದು ದಿನ ಮುಂಚಿತವಾಗಿ ರಾಮಲಿಂಗ ಕಾಮಣ್ಣ, ಚಾವಡಿ ಕಾಮಣ್ಣ, ಮಂಜುನಾಥ ನಗರದ ಕಾಮಣ್ಣ, ಭೋವಿ ಓಣಿ ಕಾಮಣ್ಣ ಪ್ರತಿಷ್ಠಾಪಿಸಲಾಗುತ್ತದೆ. ಇವುಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಇನ್ನೂಳಿದ ಕಾಮಣ್ಣಗಳು ಮಾ. 24ರ ರಾತ್ರಿ ಪ್ರತಿಷ್ಠಾಪನೆ ಹಾಗೂ ಮಾ. 26ರಂದು ಬಣ್ಣದೋಕುಳಿ ನಡೆಯುತ್ತದೆ. ಎಲ್ಲರೂ ಇಲಾಖೆಗಳೊಂದಿಗೆ ಸಹಕರಿಸಿ ಹಾಗೂ ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಬರುವ ಭಕ್ತರಿಗೆ ಯಾವ ಮಾರ್ಗಗಳಲ್ಲಿ ವಾಹನ ಪಾರ್ಕಿಂಗ್ ಮತ್ತು ಲೈಟ್‌, ನೀರಿನ ವ್ಯವಸ್ಥೆ ಹಾಗೂ ತುರ್ತು ಚಿಕಿತ್ಸಾ ವಿಭಾಗ ಸೌಕರ್ಯ ಒದಗಿಸುವ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಿದರು.ಉಸ್ಮಾನ ಬಬರ್ಚಿ ಮತ್ತು ಅಬ್ಬಾಸಅಲಿ ದೇವರಿಡು, ಹಿಂದೂ ಮತ್ತು ಮುಸ್ಲಿಂ ಯಾವುದೇ ಹಬ್ಬವಾದರೂ ಭಾವೈಕ್ಯತೆಯಿಂದ ಒಟ್ಟಿಗೆ ಆಚರಣೆ ಮಾಡುತ್ತಲೇ ಬಂದಿದ್ದೇವೆ. ಇಲ್ಲಿ ಪರಸ್ಪರ ಸಹೋದರರ ಹಾಗೆ ಜೀವನ ನಡೆಸುತ್ತಿದ್ದೇವೆ. ಪಟ್ಟಣದಲ್ಲಿ ಹೋಳಿ ಮತ್ತು ರಂಜಾನ ಒಟ್ಟಿಗೆ ಆಚರಿಸುತ್ತಿದ್ದೇವೆ. ನವಲಗುಂದದ ಹೆಸರಿಗೆ ಚ್ಯುತಿ ಬರದ ಹಾಗೆ ಹಬ್ಬ ಆಚರಣೆ ಮಾಡುತ್ತೇವೆ ಎಂದರು.ಹಿರಿಯರಾದ ರಾಯನಗೌಡ ಪಾಟೀಲ, ಪಿಎಸ್ಐ ಜನಾರ್ಧನ ಭಟ್ರಹಳ್ಳಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ, ಹೆಸ್ಕಾಂ ಅಧಿಕಾರಿ ರೋಗಿ ಈರಣ್ಣ, ಚೌಡಿ ಮಾಂತೇಶ ಭೋವಿ, ಹುಚ್ಚಪ್ಪ ಭೋವಿ, ಈರಣ್ಣ ಸಿಡಗಂಟಿ, ರಾಜು ನಡುವಿನಮನಿ, ಮಂಜುನಾಥ ಜಾಧವ, ಪ್ರಕಾಶ ಶಿಗ್ಲಿ, ಶಂಕ್ರಣ್ಣ ತೋಟದˌ ಮಾಂತೇಶ ಕಲಾಲ, ಶಿವಾನಂದ ತಡಸಿ, ಅರುಣ ಇಬ್ರಾಹಿಂಪುರ, ಚನ್ನಪ್ಪ ನಾಗರಹಳ್ಳಿ, ಮಂಜು ಜಾಲಗಾರ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ