ಕಾರವಾರ: ದೇಶದಲ್ಲಿಯೇ ವಿನೂತನ ಪ್ರಯೋಗವಾದ ಕೂಸಿನ ಮನೆ ಯೋಜನೆ ಯಶಸ್ಸಿಗೆ ಅಧಿಕಾರಿಗಳೆಲ್ಲ ಕೈಜೋಡಿಸಬೇಕು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ದಾಸಗುಪ್ತ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಕೆಲಸಕ್ಕೆ ಬರುವ ಕಾರ್ಮಿಕರ ಕಂದಮ್ಮಗಳ ಆರೈಕೆಗೆ ಕೂಸಿನ ಮನೆ ಆಸರೆಯಾಗಿದೆ. ಇಲ್ಲಿ ಮಗುವಿಗೆ ಆಹಾರ, ಆರೋಗ್ಯ ಸೇರಿದಂತೆ ಲಾಲನೆ-ಪಾಲನೆ ಮಾಡಲಾಗುತ್ತದೆ. ದೇಶದ ಭವಿಷ್ಯವಾದ ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿ ಉತ್ತಮ ಆರೈಕೆ, ಪೌಷ್ಟಿಕಾಂಶಯುಕ್ತ ಆಹಾರ, ಕಲಿಕೆಗೆ ಉತ್ತಮ ಅಡಿಪಾಯದ ಅವಶ್ಯಕತೆಯಿದೆ. ಮಕ್ಕಳನ್ನು ಸಾಕಲು ಬಡ ಕುಟುಂಬಗಳಿಗಿರುವ ಅನಾನುಕೂಲಗಳನ್ನು ನೀಗಿಸಲು ಮತ್ತು ಕೆಲಸಕ್ಕೆಂದು ಹೋಗುವ ಮಹಿಳೆಯರಿಗೆ ಮಕ್ಕಳನ್ನು ಎಲ್ಲಿ ಬಿಡುವುದೆಂಬ ಚಿಂತೆಗೆ ಕೂಸಿನ ಮನೆ ಉತ್ತರವಾಗಿದೆ ಎಂದರು.
ಪ್ರತಿ ಗ್ರಾಮಕ್ಕೆ ಒಂದರಂತೆ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲು ಇಲಾಖೆ ಸಿದ್ಧವಿದೆ. ಖಾಲಿ ಇರುವ ಕಟ್ಟಡ ಅಥವಾ ಸ್ಥಳ ಗುರುತಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ವಸತಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಬೇಕಾಗುವಷ್ಟು ಪುಸ್ತಕಗಳು, ಕಂಪ್ಯೂಟರ್, ಇಂಟರ್ನೆಟ್ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುವಂತೆ ಸ್ಟಡಿ ಟೇಬಲ್, ಚೇರ್, ಬೆಳಕಿನ ವ್ಯವಸ್ಥೆ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳುವಂತೆ ಸೂಚಿಸಿದರು.ಜಿಲ್ಲೆಯ ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಪಂ ವ್ಯಾಪ್ತಿಯ ಲಿಂಗದಬೈಲ್ ಗ್ರಾಮದಲ್ಲಿ ಸಂಜೀವಿನಿ ಎನ್.ಆರ್.ಎಲ್.ಎಂ. ಮತ್ತು ಮನರೇಗಾ ಯೋಜನೆಯಡಿ ರೂಪುಗೊಂಡ ಸಿದ್ಧಿ ಸಮುದಾಯದ ಡಮಾಮಿ ಕಮ್ಯೂನಿಟಿ ಹೋಮ್ ಸ್ಟೇ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆಯುತ್ತಿರುವ ಬಗ್ಗೆ ಸಿಇಒ ಈಶ್ವರ್ ಕಾಂದೂ ಹರ್ಷ ವ್ಯಕ್ತಪಡಿಸಿದರು.ಬಳಿಕ ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಎನ್‌ಆರ್‌ಎಲ್‌ಎಂ ಮತ್ತು ಮನರೇಗಾ ಅಡಿ ಸ್ಥಾಪಿಸಿರುವ ಸಮುದಾಯ ಕೋಳಿ ಸಾಕಾಣಿಕೆ ಘಟಕ, ಹಣಕೋಣ ಗ್ರಾಪಂ ವ್ಯಾಪ್ತಿಯಲ್ಲಿರುವ ಭೀಮಕೋಲ್ ಅಮೃತ ಸರೋವರ ಮತ್ತು ಡಿಜಿಟಲ್ ಲೈಬ್ರರಿ ಹಾಗೂ ತೋಡೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಕೂಸಿನ ಮನೆಗೆ ಭೇಟಿ ನೀಡಿ, ಪರಿಶೀಲಿಸಿ, ಉತ್ತಮ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಉಪ ವಿಭಾಗಾಧಿಕಾರಿ ಕನಿಷ್ಕ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.