ಪ್ರಜಾಪ್ರಭುತ್ವ ರಕ್ಷಣೆಗೆ ಕಡ್ಡಾಯ ಮತದಾನ ಮಾಡಿ: ಮಹಾಮನಿ

KannadaprabhaNewsNetwork | Published : May 1, 2024 1:15 AM

ಸಾರಾಂಶ

ಶಹಾಪುರ ನಗರದಲ್ಲಿ ನಡೆದ ಲೋಕಾಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಮತದಾನದ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಖ್ಯಾತ ಹಾಸ್ಯ ಕಲಾವಿದ ಬಸವರಾಜ್ ಮಹಾಮನಿ ಮಾತನಾಡಿದರು.

ಜಿಲ್ಲಾಡಲಿದಿಂದ ಮತದಾನ ಜಾಗೃತಿ ಕಾರ್ಯಕ್ರಮ । ಹಾಸ್ಯ ಕಲಾವಿದ ಬಸವರಾಜ ಚಾಲನೆ

ಕನ್ನಡಪ್ರಭ ವಾರ್ತೆ ಶಹಾಪುರ

ಭಾರತದಲ್ಲಿ ಸುಭದ್ರ ಹಾಗೂ ಉತ್ತಮ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕೆಂದರೆ, ದೇಶದ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು. ಅಲಸ್ಯ ಧೋರಣೆ ತೋರದೆ ಮತದಾನ ಮಾಡಬೇಕೆಂದು ಯಾದಗಿರಿ ಜಿಲ್ಲಾ ಚುನಾವಣೆ ರಾಯಭಾರಿ ಹಾಗೂ ಹಾಸ್ಯ ಕಲಾವಿದ ಬಸವರಾಜ್ ಮಹಾಮನಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ತಾಲೂಕ ಪಂಚಾಯಿತಿ ಹಾಗೂ ನಗರಸಭೆ ಜಿಲ್ಲಾ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಡೆದ ನಡೆದ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಕಾರಣಕ್ಕೂ ಮತದಾನದಿಂದ ಹೊರಗುಳಿಯುವ ಕೆಲಸ ಮಾಡಬೇಡಿ. ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾಯಿಸಿ, ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತ ಪಡಿಸಿಕೊಂಡು ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.ಜಿಲ್ಲಾ ಅಂಗವಿಕಲ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಶರಣಪ್ಪ ಪಾಟೀಲ್ ಮಾತನಾಡಿ, ಮತದಾರರು ನಿಷ್ಪಕ್ಷ ಹಾಗೂ ನಿರ್ಭೀತಿಯಿಂದ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಭ್ರಷ್ಟಾಚಾರ, ಸ್ವಜನ ಪಕ್ಷಪಾತಕ್ಕೆ ಅವಕಾಶ ನಿಡದಂತೆ ಕಡ್ಡಾಯ ಮತ ಚಲಾಯಿಸಬೇಕು ಎಂದರು. ಇದೇ ವೇಳೆ ಪೌರಾಯುಕ್ತ ರಮೇಶ್ ಬಡಿಗೇರ್ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಸಿಪಿಎಸ್ ಶಾಲಾ ಮೈದಾನದವರೆಗೆ ವಿಶೇಷ ಚೇತನರ ತ್ರಿಚಕ್ರವಾಹನ (ಬೈಕ್‌ ರ‍್ಯಾಲಿ) ಹಾಗೂ ನಗರದ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರ ಕಾಲ್ನಡಿಗೆ ಜಾಥಾ ಮತ್ತು ಎತ್ತಿನ ಬಂಡಿಯಲ್ಲಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ನಗರಸಭೆ ಪೌರಾಯುಕ್ತರನ್ನು ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕರೆ ತರಲಾಯಿತು.

ಇದೇ ವೇಳೆ ಮತದಾನ ಕೇಂದ್ರಗಳತ್ತ ಮತದಾರರ ಮನಸ್ಸನ್ನು ಸೆಳೆಯಲು ಲಿಂಬೆ ಚಮಚಾ ನಡಿಗೆ, ಗೋಣಿ ಚೀಲ ಓಟ ಕ್ರೀಡಾ ಚಟುವಟಿಕೆ ಹಮ್ಮಿಕೊಂಡು ಪ್ರಥಮ, ದ್ವೀತಿಯ ಸ್ಥಾನದಲ್ಲಿ ವಿಜೇತರಾದವರಿಗೆ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ನೀಡಿ, ಗೌರವಿಸಲಾಯಿತು.

ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ. ರಮೇಶ ಗುತ್ತೇದಾರ, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಧಿಕಾರಿ ಮಲ್ಲಣ್ಣ ದೇಸಾಯಿ(ಸಿಡಿಪಿಒ), ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾವುತಪ್ಪ ನಾಯಕ, ಜಿಲ್ಲಾ ಕ್ರೀಡಾ ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಕಟ್ಟಿ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸೂರ್ಯವಂಶಿ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಭೀಮಣ್ಣಗೌಡ ಬಿರಾದಾರ, ನಗರಸಭೆ ಎಇಇ ನಾನಾಗೌಡ, ಚುನಾವಣಾ ರಾಯಭಾರಿ ಮಾಯಾ ಎಸ್. ಆರ್. ನಾಯಕ, ಗಂಗಾಧರ ಹೊಟ್ಟಿ ಸೇರಿದಂತೆ ಇತರರಿದ್ದರು.

Share this article