ಮಲಪ್ರಭಾಗೆ ಸೇರ್ತಿದೆ ಚರಂಡಿ ನೀರು!

KannadaprabhaNewsNetwork | Published : Jun 4, 2024 12:30 AM

ಸಾರಾಂಶ

ಒಂದುವರೆ ದಶಕಗಳಾದರೂ ಮುಗಿಯದ ಒಳಚರಂಡಿ ಕಾಮಗಾರಿಯ ಕಾರ್ಯ. ಶುದ್ಧೀಕರಣ ಕೇಂದ್ರಕ್ಕೆ ಜೋಡಣೆ ಇನ್ನೆಷ್ಟು ಬೇಕು ವರ್ಷ?

ಈರಣ್ಣ ಬುಡ್ಡಾಗೋಳ

ಕನ್ನಡಪ್ರಭ ವಾರ್ತೆ ರಾಮದುರ್ಗ

ಒಳಚರಂಡಿ ನೀರು ಶುದ್ಧೀಕರಣ ಕೇಂದ್ರ ಹಾಗೂ ಒಳಚರಂಡಿ ಕಾಮಗಾರಿಗಳು ಕುಂಟುತ್ತ ಸಾಗಿದಷ್ಟು ಕಲುಷಿತ ನೀರಿನಿಂದಲೇ ಮಲಪ್ರಭಾ ನದಿ ಸರ್ವ ಋುತುವಿನಲ್ಲಿಯೂ ದುರ್ವಾಸನೆಯೊಂದಿಗೆ ಹರಿದು ಮಲಪ್ರಭಾ ನದಿಯಾಗದೇ ಚರಂಡಿ ನೀರಿನ ಜೀವ ನದಿಯಾಗಿದೆ. ಮಲಗೊಳ್ಳದೇ ಸ್ವಚ್ಛಂದವಾಗಿ ಹರಿಯಬೇಕಿದ್ದ ನೀರನ್ನು ಜನರೇ ಮಲಗೊಳಿಸುತ್ತಿದ್ದಾರೆ.

2009 ರಲ್ಲಿಯೇ ರಾಮದುರ್ಗದ ಚರಂಡಿ ನೀರು ಮಲಪ್ರಭಾಗೆ ಸೇರಿಸದೇ ಒಳಚರಂಡಿ ಮೂಲಕ ಹಲಗತ್ತಿ ಸಮೀಪದ ಜಾಗದಲ್ಲಿ ನೀರು ಶುದ್ಧೀಕರಣ ಕೇಂದ್ರ ಮಾಡಲು ನಿರ್ಧರಿಸಲಾಗಿತ್ತು. ಆದರೂ ಕಳೆದ 15 ವರ್ಷಗಳಿಂದ ಕುಂಟುತ್ತ ಸಾಗಿರುವ ಒಳಚರಂಡಿ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಹೀಗಾಗಿ ಮಲಪ್ರಭಾ ನದಿ ಚರಂಡಿ ನೀರಿನ ನದಿಯಾಗಿದೆ.

ಕಳೆದ ವರ್ಷ ಮುಂಗಾರು, ಹಿಂಗಾರು ಮಳೆರಾಜನ ಅವಕೃಪೆಯಿಂದ ಮಲಪ್ರಭಾ ನದಿ ಸಂಪೂರ್ಣ ಖಾಲಿಯಾಗಿತ್ತು. ಪಟ್ಟಣದಿಂದ ಹೊರ ಹೋಗಬೇಕಾಗಿದ್ದ ಚರಂಡಿ ನೀರು ಅತಿಕ್ರಮವಾಗಿರುವ ಮಲಪ್ರಭೆ ನದಿಗೆ ಸೇರ್ಪಡೆಯಾಗಿ ಮಲೀನವಾಗಿದ್ದಲ್ಲದೇ ನಿತ್ಯವೂ ದುರ್ನಾತ ಬೀರುತ್ತಿರುವುದು ಪರಿಸರ ಪ್ರೇಮಿಗಳ ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಂಕ್ರಾಮಿಕ ರೋಗ ಭೀತಿ:

ರಾಮದುರ್ಗ ಪ್ರದೇಶದ ಎಲ್ಲ ಚರಂಡಿಗಳ ನೀರು ಮೊದಲಿನಿಂದಲೂ ನದಿಗೆ ಹರಿ ಬಿಡಲಾಗುತ್ತಿದೆ. ಈಗಲೂ ನಾಲ್ಕೈದು ಕಡೆಗಳಿಂದ ಚರಂಡಿ ನೀರು ಮಲಪ್ರಭಾ ಒಡಲು ಸೇರಿ ಸುತ್ತಲಿನ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಪರಿಣಾಮ ವಾಯುವಿಹಾರಕ್ಕೆಂದು ಆಗಮಿಸುವ ಜನರಿಗೆ ತಲೆ ನೋವಾಗಿದೆ. ಇದಲ್ಲದೇ ನದಿ ಪಕ್ಕದಲ್ಲಿ ವಾಸಿಸುವವರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಆವರಿಸಿದೆ.

ಕುಂಟುತ್ತ ಸಾಗಿರುವ ಒಳಚರಂಡಿ ಯೋಜನೆ:

ಕಳೆದ ಸಾಕಷ್ಟು ದಿನಗಳಿಂದ ನಿಧಾನಗತಿಯಲ್ಲಿ ಸಾಗುತ್ತಿರುವ ಒಳಚರಂಡಿ ಯೋಜನೆಯಿಂದ ಜನ ಬೇಸತ್ತು ಹೋಗಿದ್ದಾರೆ. ಆಗಾಗ ಗುಂಡಿ ಅಗೆಯುವ ಮತ್ತು ರಸ್ತೆ, ಪರಿಸರ ಹಾಳು ಮಾಡುವ ಯೋಜನೆಯ ಕಾಮಗಾರಿಯಿಂದ ಜನ ಕಂಗಾಲಾಗಿದ್ದಾರೆ. ಈಗೀಗ ಎರಡ್ಮೂರು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡು ಯೋಜನೆಯ ಸಫಲತೆ ಜನತೆಗೆ ತಲುಪಿಲ್ಲ. ಅಲ್ಲದೆ ಚರಂಡಿ ನೀರಿನ ಜೊತೆ ಶೌಚಾಲಯಗಳ ನೀರು ಸಹಿತ ಮಲಪ್ರಭೆ ಒಡಲಿಗೆ ಸೇರಿ ನೋಡಿದಲ್ಲೆಲ್ಲ ನದಿ ಗಬ್ಬೆದ್ದು ನಾರುತ್ತಿದೆ. ಕೋಟ್ಯಂತರ ರುಪಾಯಿ ಅನುದಾನದಲ್ಲಿ ಕೈಗೊಂಡಿರುವ ಒಳಚರಂಡಿ ಯೋಜನೆಯ ಬಹುತೇಕ ಚೇಂಬರ್‌ಗಳು ಒಡೆದು ಹಾಳಾಗುತ್ತಿವೆ. ಅದರಲ್ಲಿ ವೃದ್ಧರು, ಮಕ್ಕಳು ಬೀಳುವ ಭಯ ಬಹುತೇಕರನ್ನು ಕಾಡುತ್ತಿದೆ.

-------------

ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಆಗ್ರಹ

ಒಳಚರಂಡಿ ಯೋಜನೆ ಮೊದಲಿಗೆ ₹7.49 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ, ಹೊಸ ಅಂದಾಜಿನ ಪ್ರಕಾರ ₹18.18 ಕೋಟಿ ಪ್ರಸ್ತಾವ ಕಲ್ಪಿಸಲಾಗಿದೆ. ಮನೆಯ ಚರಂಡಿ ನೀರನ್ನು ಒಳಚರಂಡಿಗೆ ಜೋಡಿಸುವ ಕಾರ್ಯ ಮಾತ್ರ ಉಳಿದಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿದರೇ ಮಲಿನ ಮುಕ್ತ ಮಲಪ್ರಭಾವನ್ನಾಗಿ ಮಾಡಬಹುದಾಗಿದೆ. ಒಳಚರಂಡಿ ಯೋಜನೆ ಶೀಘ್ರ ಪೂರ್ಣಗೊಂಡು ನದಿಗೆ ಸೇರುವ ಗಲೀಜು ನೀರನ್ನು ಒಂದೆಡೆ ಸಂಗ್ರಹಿಸಿ ಶುದ್ಧೀಕರಣ ಮಾಡಬೇಕಾಗಿದ್ದು, ನದಿ ಪಾತ್ರವನ್ನು ಶುಚಿಯಾಗಿಟ್ಟುಕೊಳ್ಳಲು ಪುರಸಭೆಯು ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

------------ಜೋಡಣಾ ಕಾರ್ಯಕ್ಕೆ ಬೇಕು ಕಾಳಜಿ

ರಾಮದುರ್ಗದ ಚರಂಡಿ ನೀರು ಮಲಪ್ರಭೆಗೆ ನದಿಗೆ ಸೇರಿಸದೇ ಒಳಚರಂಡಿ ಮೂಲಕ ಶುದ್ಧೀಕರಣ ಕೇಂದ್ರ ಆರಂಭಿಸಲು ಮೊದಲು ಜಾಗದ ಕೊರತೆ ಇತ್ತು. 2009ರಲ್ಲಿಯೇ ಹಲಗತ್ತಿ ಸಮೀಪದ ಜಾಗದಲ್ಲಿ ನೀರು ಶುದ್ಧೀಕರಣ ಕೇಂದ್ರ ಮಾಡಲು ಮುಂದಾಗಿ ಕೇಂದ್ರ ಸಿದ್ಧವಾಗಿದೆ. ಆದರೆ, ಚರಂಡಿ ನೀರನ್ನು ಇಲ್ಲಿಗೆ ಜೋಡಣೆ ಮಾಡಲು ಸ್ಥಳೀಯರ ವಿರೋಧದಿಂದ ಜೋಡಣಾ ಕಾರ್ಯ ಮಾತ್ರ ಬಾಕಿ ಉಳಿದು ಯೋಜನೆ ನೆನೆಗುದಿಗೆ ಬಿದ್ದಿದೆ. ಶಾಸಕರ ವಿಶೇಷ ಕಾಳಜಿಯಿಂದ ಈ ಬಾರಿಯಾದರೂ ಸಮಸ್ಯೆ ನಿವಾರಣೆಯಾಗಬಹುದು ಎನ್ನುವುದು ಸಾರ್ವಜನಿಕರ ನಿರೀಕ್ಷೆ.-----------

ಕೋಟ್‌...

ಮಲಪ್ರಭಾ ನದಿಗೆ ಸೇರುವ ಚರಂಡಿ ನೀರಿಗೆ ಪ್ರತ್ಯೇಕ ವ್ಯವಸ್ಥೆ ಮೂಲಕ ಹಲಗತ್ತಿ ಹತ್ತಿರ ನಿರ್ಮಿಸಿದ ಒಳಚರಂಡಿ ಶುದ್ಧೀಕರಣ ಘಟಕಕ್ಕೆ ಸೇರಿಸಲು ಕ್ರಿಯಾಯೋಜನೆ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

-ಅಶೋಕ ಮ.ಪಟ್ಟಣ, ಸರ್ಕಾರದ ಮುಖ್ಯ ಸಚೇತಕರು, ಶಾಸಕರು.

--------ಮಲಪ್ರಭೆಗೆ ನಗರದ ಚರಂಡಿ ನೀರು ಸೇರುತಿರುವುದು ಹೊಸದೇನಲ್ಲ. ಆದರೆ, ಅಂದು ಕೇವಲ ಸ್ನಾನದ ನೀರು ಮಾತ್ರ ಸೇರುತ್ತಿತ್ತು. ಇಂದು ಸ್ನಾನದ ನೀರಿನ ಜೊತೆ ಎಲ್ಲ ರೀತಿ ಕಲ್ಮಶವಾದ ನೀರು ನದಿಗೆ ಸೇರಿ ನದಿಯ ಪರಿಸರ ಸಂಪೂರ್ಣ ಕಲುಷಿತಗೊಂಡಿದೆ. ಒಳ ಚರಂಡಿ ಕಾಮಗಾರಿ ಕೈಗೊಂಡಿರುವ ಇಲಾಖೆ ಬೇಗನೆ ಮುಗಿಸಬೇಕು.

-ಈರಣ್ಣ ಗುಡದಾರಿ, ಮುಖ್ಯಾಧಿಕಾರಿ ಪುರಸಭೆ.

--------ಜಿಲ್ಲೆಯ ಹಲವು ತಾಲೂಕಿನ ಜೀವನದಿಯೆಂದೇ ಖ್ಯಾತಿಯಾದ ಮಲಪ್ರಭಾ ನದಿಗೆ ಒಳಚರಂಡಿ ನೀರು ಬಂದು ಕಲುಷಿತವಾಗಿರುವುದು ನಮ್ಮೆಲ್ಲರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹಲಗತ್ತಿ ಸಮೀಪದ ಜಾಗದಲ್ಲಿರುವ ನೀರು ಶುದ್ಧೀಕರಣ ಕೇಂದ್ರಕ್ಕೆ ರಾಮದುರ್ಗ ಪಟ್ಟಣದ ಒಳಚರಂಡಿ ನೀರು ಜೋಡಿಸಿ ನೀರು ಶುದ್ಧೀಕರಿಸುವ ಕಾರ್ಯ ಸುಮಾರು ವರ್ಷಗಳ ಹಿಂದೆಯೇ ಆಗಬೇಕಾಗಿತ್ತು. ಆದರೆ, ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಚಾಶಕ್ತಿಯ ಜತೆ ಜನರ ಸಹಕಾರದ ಕೊರತೆಯಿಂದ ಮಲಪ್ರಭಾ ನದಿಗೆ ಇಂತಹ ದುಸ್ಥಿತಿ ಬಂದಿದೆ. ಚರಂಡಿ ಕಾಮಗಾರಿ ಶೀಘ್ರ ಪೂರ್ಣಗೊಂಡು ಶುದ್ಧೀಕರಣ ಕೇಂದ್ರಕ್ಕೆ ಜೋಡಣೆಯಾಗುವುದರೊಂದಿಗೆ ಜೀವನದಿಯ ಜಲಕಳೆ ಹೆಚ್ಚಿಸುವಂತಾಗಬೇಕು.

-ಡಾ.ಕೆ.ವಿ.ಪಾಟೀಲ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ.

----------------ಜೀವ ನದಿ ಮಲಪ್ರಭೆಯು ಚರಂಡಿ ನೀರು ಹರಿದು ಬಂದು ಕಲ್ಮಶಗೊಂಡಿದ್ದು, ಚರಂಡಿ ನೀರು ನದಿಗೆ ಸೇರದಂತೆ ಜನಪ್ರತಿನಧಿಗಳು ಮತ್ತು ಅಧಿಕಾರಿಗಳು ಇಚ್ಛಾಶಕ್ತಿಯಿಂದ ಮುಂದಾಗುವ ಅವಶ್ಯಕತೆ ಇದೆ.

-ಶಿವಾನಂದ ಸಾಗಶೆಟ್ಟಿ, ಮುಖಂಡರು.

Share this article