ಬೇಸಿಗೆಯ ಆರಂಭದಲ್ಲೇ ಬರಿದಾದ ಮಲಪ್ರಭಾ ನದಿ!

KannadaprabhaNewsNetwork | Published : Mar 22, 2025 2:02 AM

ಸಾರಾಂಶ

ತಾಲೂಕಿನ ಕಣಕುಂಬಿ ಗ್ರಾಮದ ಬಳಿ ಹುಟ್ಟಿ ಪಶ್ಚಿಮ ಘಟ್ಟದ ದಟ್ಟ ಅರಣ್ಯದಲ್ಲಿ ಹರಿದು ನವಿಲುತೀರ್ಥದಲ್ಲಿ ಸಂಗ್ರಹಗೊಂಡು ಮುಂದೆ ಕೃಷ್ಣೆಯನ್ನು ಸಂಗಮಿಸಲು ಕೂಡಲ ಸಂಗಮದತ್ತ ಧಾವಿಸುವ ಮಲಪ್ರಭಾ ನದಿ 4 ಜಿಲ್ಲೆಗಳ ನೂರಾರು ಊರುಗಳ ಜನ, ಜಾನುವಾರುಗಳ ದಾಹ ನೀಗಿಸುವ ಮಹತ್ಕಾರ್ಯ ಕೈಗೊಂಡಿದೆ.

ವಿಶೇಷ ವರದಿ

ಕನ್ನಡಪ್ರಭ ಖಾನಾಪುರ

ತಾಲೂಕಿನ ಕಣಕುಂಬಿ ಗ್ರಾಮದ ಬಳಿ ಹುಟ್ಟಿ ಪಶ್ಚಿಮ ಘಟ್ಟದ ದಟ್ಟ ಅರಣ್ಯದಲ್ಲಿ ಹರಿದು ನವಿಲುತೀರ್ಥದಲ್ಲಿ ಸಂಗ್ರಹಗೊಂಡು ಮುಂದೆ ಕೃಷ್ಣೆಯನ್ನು ಸಂಗಮಿಸಲು ಕೂಡಲ ಸಂಗಮದತ್ತ ಧಾವಿಸುವ ಮಲಪ್ರಭಾ ನದಿ 4 ಜಿಲ್ಲೆಗಳ ನೂರಾರು ಊರುಗಳ ಜನ, ಜಾನುವಾರುಗಳ ದಾಹ ನೀಗಿಸುವ ಮಹತ್ಕಾರ್ಯ ಕೈಗೊಂಡಿದೆ.

ಈ ಜೀವನದಿ ಈ ವರ್ಷ ಬೇಸಿಗೆಯ ಅಬ್ಬರಕ್ಕೆ ಮಾರ್ಚ್ ತಿಂಗಳಾಂತ್ಯಕ್ಕೆ ಬಹುತೇಕ ಬತ್ತಿದ ಸ್ಥಿತಿ ತಲುಪಿದೆ. ಜನ್ಮಸ್ಥಾನ ಕಣಕುಂಬಿಯಿಂದ ಎಂ.ಕೆ.ಹುಬ್ಬಳ್ಳಿ ಪಟ್ಟಣದರೆಗೆ ಮಲಪ್ರಭೆಯಲ್ಲಿ ನೀರಿರಲಿ ಅಥವಾ ಇಲ್ಲದಿರಲಿ ಈ ಭಾಗದ ಜನರು ಭಕ್ತಿಯ ಹೆಸರಿನಿಂದ ನದಿಯಲ್ಲಿ ನಿರಂತರವಾಗಿ ತ್ಯಾಜ್ಯವೆಂಬ ವಿಷಪ್ರಾಶನವನ್ನು ಮಾಡುವುದರಿಂದ ನದಿಯ ನೀರು ದಿನೇ ದಿನೇ ಕಲುಷಿತಗೊಳ್ಳುತ್ತಿದೆ. ಉತ್ತರ ಕರ್ನಾಟಕದ ಲಕ್ಷಾಂತರ ಜನರ ಜೀವನಾಡಿಯಾಗಿರುವ ಈ ನದಿಗೆ ಪ್ರಸ್ತುತ ಸ್ವಚ್ಛತೆಯ ಭಾಗ್ಯ ಅತ್ಯವಶ್ಯವಾಗಿದೆ.ಮಲಪ್ರಭಾ ನದಿಗೆ ಭೇಟಿ ನೀಡುವ ಜನಸಾಮಾನ್ಯರಲ್ಲಿ ಸ್ವಚ್ಛತೆಯ ಬಗ್ಗೆ ಮತ್ತು ನದಿಯ ಮಹತ್ವದ ಬಗ್ಗೆ ಜಾಗೃತಿ ಇಲ್ಲದ ಕಾರಣ ನದಿತಟದಲ್ಲಿ ಶವಸಂಸ್ಕಾರ, ನದಿಯಲ್ಲಿ ಅಸ್ಥಿ ವಿಸರ್ಜನೆ, ಚರಂಡಿ ನೀರು, ಶೌಚಾಲಯದ ನೀರನ್ನು ನದಿಗೆ ಹರಿಸುವುದು, ಪ್ಲಾಸ್ಟಿಕ್, ಹೂವು, ದೇವರ ಫೋಟೋ ಮತ್ತಿತರ ತ್ಯಾಜ್ಯವಸ್ತುಗಳನ್ನು ನದಿಗೆ ಎಸೆಯುವುದು, ನದಿದಡದಲ್ಲಿ ವಾಹನ ಹಾಗೂ ಬಟ್ಟೆ ತೊಳೆಯುವುದು, ನದಿಯಿಂದ ಉಸುಕು ತೆಗೆಯುವುದು, ಕಾರ್ಖಾನೆಯ ರಾಸಾಯನಿಕ ತ್ಯಾಜ್ಯವನ್ನು ನೀರಿಗೆ ಸೇರಿಸುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ನದಿ ಕಲುಷಿತಗೊಂಡಿದೆ. ಹೀಗಾಗಿ ನದಿಯಲ್ಲಿ ನೀರು ಕಡಿಮೆಯಾದ ನಂತರ ನದಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಕಸ ಕಂಡುಬರುತ್ತಿದೆ. ಸಾಂಕ್ರಾಮಿಕ ರೋಗಗಳ ಭೀತಿ:

ನದಿಯ ಒಂದು ಬದಿಯಲ್ಲಿ ಪಟ್ಟಣದ ಚರಂಡಿ ನೀರು ನದಿಗೆ ಸೇರುವ ಕಾರಣ ನದಿ ಹಾಗೂ ನದಿತೀರ ದುರ್ನಾತ ಬೀರುತ್ತಿದೆ. ಆದರೆ, ಇದ್ಯಾವುದರ ಅರಿವು ಇಲ್ಲದ ತಾಲೂಕಿನ ನಾಗರಿಕರು ನದಿತೀರದಲ್ಲಿ ನದಿಯ ಪಾವಿತ್ರ್ಯತೆಗೆ ಧಕ್ಕೆ ಬರುವ ರೀತಿಯ ಅನೇಕ ಘಟನೆಗಳು ದಿನನಿತ್ಯ ಸಂಭವಿಸುತ್ತಿದ್ದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸುತ್ತಿಲ್ಲ. ಇದರಿಂದಾಗಿ ಜನ ಜಾನುವಾರುಗಳಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ಇನ್ನಾದರೂ ಅಮಾಯಕ ಜೀವಿಗಳ ದಾಹವನ್ನು ನೀಗಿಸುವ ನದಿ ನೀರಿಗೆ ಅಹಿತಕರ ವಸ್ತುಗಳನ್ನು ಬಿಡುವುದನ್ನು ನಿಲ್ಲಿಸಬೇಕೆಂದು ಹಾಗೂ ನದಿಯನ್ನು ಕಲುಷಿತಗೊಳಿಸುವವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಪರಿಸರವಾದಿಗಳ ಆಗ್ರಹ.ನದಿ ತೀರದ ಗ್ರಾಮಗಳಾದ ಪಾರಿಶ್ವಾಡ, ಖಾನಾಪುರ, ಯಡೋಗಾ, ಅಸೋಗಾ ಸೇರಿದಂತೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಜನರು ನದಿಯ ನೀರನ್ನು ಸೇವಿಸದೇ ಅಂತರ್ಜಲದಿಂದ ಹೊರಹೊಮ್ಮುವ ಬೋರವೆಲ್ ನೀರನ್ನು ಜನರು ಕುಡಿಯುತ್ತಿದ್ದಾರೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಂತರ್ಜಲ ನೀರಿನ ಮಟ್ಟ ಉತ್ತಮವಾಗಿರುವ ಕಾರಣ ಭೂಗರ್ಭದಿಂದ ಹೊರಹೊಮ್ಮುವ ಶುದ್ಧ ನೀರನ್ನು ಸೇವಿಸುವ ಜನರು ಆರೋಗ್ಯವಾಗಿದ್ದಾರೆ. ಹೀಗಾಗಿ ತಮ್ಮೂರಿನ ಬಳಿಯಲ್ಲೇ ಹರಿದುಹೋಗುವ ಮಲಪ್ರಭಾ ನದಿಯ ಪಾವಿತ್ರ್ಯತೆಯ ಬಗ್ಗೆ ತಾಲೂಕಿನ ಜನರು ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ, ಬೈಲಹೊಂದಲ, ಸವದತ್ತಿ ಹಾಗೂ ಇತರೆ ತಾಲೂಕುಗಳಲ್ಲಿ ಜನರು ಈ ನದಿಯ ನೀರನ್ನೇ ನೇರವಾಗಿ ಕುಡಿಯುತ್ತಿರುವ ಕಾರಣ ಕಲುಷಿತ ನೀರು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಂಭವವಿದೆ.

ಮಲಪ್ರಭಾ ನದಿಯಲ್ಲಿ ಮತ್ತು ನದಿ ತೀರದಲ್ಲಿ ಸಂಗ್ರಹಗೊಂಡ ಕಸವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ವಿವಿಧ ಸಂಘ-ಸಂಸ್ಥೆಗಳು, ವಿವಿಧ ಇಲಾಖೆಗಳು, ತಾಲೂಕು ಆಡಳಿತ, ತಾಲೂಕು ಪಂಚಾಯತಿ ಮತ್ತು ಪಟ್ಟಣ ಪಂಚಾಯತಿಗಳ ವತಿಯಿಂದ ಹಲವು ಬಾರಿ ಸ್ವಚ್ಛತಾ ಶಿಬಿರ ಆಯೋಜಿಸಿ ನದಿ ಮತ್ತು ನದಿತೀರವನ್ನು ಸ್ವಚ್ಛಗೊಳಿಸಲಾಗಿದೆ. ಆದರೆ, ಶಿಬಿರದ ಬಳಿಕ ಕೆಲದಿನಗಳ ಮಾತ್ರ ಸ್ವಚ್ಛವಾಗಿರುವ ನದಿ ಅಮವಾಸ್ಯೆ ಮತ್ತು ವಿಶೇಷ ಹಬ್ಬ ಹರಿದಿನಗಳಂದು ನದಿತೀರಕ್ಕೆ ಭೇಟಿ ನೀಡುವ ಭಕ್ತರು ಮಾಡುವ ಪೂಜೆಗಳ ನಂತರ ಮತ್ತೆ ಕಲುಷಿತಗೊಳ್ಳುತ್ತಿದೆ. ನದಿಯ ಪಾವಿತ್ರ್ಯತೆ ಕಾಪಾಡುವಂತೆ ಹಲವಾರು ಬಾರಿ ಜನಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನಮ್ಮ ಸಿಬ್ಬಂದಿ ನಿಯಮಿತವಾಗಿ ನದಿತೀರದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡು ನದಿ ಹಾಗೂ ಅಕ್ಕಪಕ್ಕದ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಶ್ರಮಿಸುತ್ತಾರೆ.

-ಮೀನಾಕ್ಷಿ ಬೈಲೂರಕರ,

ಅಧ್ಯಕ್ಷೆ, ಪಟ್ಟಣ ಪಂಚಾಯತಿ ಖಾನಾಪುರ.

Share this article