- ಜಿಲ್ಲೇಲಿ 6 ಪ್ರಕರಣ ಪತ್ತೆ: ಮಲೇಬೆನ್ನೂರಲ್ಲಿ ಡಾ.ಗಂಗಾಧರ್ ಮಾಹಿತಿ
- - -ಮಲೇಬೆನ್ನೂರು: ಡೆಂಘೀಜ್ವರ, ಚಿಕೂನ್ ಗುನ್ಯಾ ಮತ್ತು ಮೆದುಳುಜ್ವರ, ಮಲೇರಿಯಾ ಕಾಯಿಲೆಗಳು ವಿವಿಧ ಜಾತಿಯ ಸೊಳ್ಳೆಗಳಿಂದ ಹರಡುತ್ತವೆ. ಆದ್ದರಿಂದ ಮನೆಗಳು, ಕಟ್ಟಡಗಳ ಮುಂಭಾಗ ಕೊಳಚೆ ನೀರು ನಿಲ್ಲದಂತೆ ನಿಗಾ ವಹಿಸಬೇಕು. ಸೊಳ್ಳೆ ಉತ್ಪತ್ತಿ ಆಗಬಲ್ಲ ತಾಣಗಳನ್ನು ನಾಶ ಮಾಡಬೇಕು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಗಂಗಾಧರ್ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಸಂಜೆ ಖಾಸಗಿ ವೈದ್ಯರು, ಔಷಧಿ ಅಂಗಡಿ, ಪ್ರಯೋಗಾಲಯ ಸಿಬ್ಬಂದಿಗೆ ಹಮ್ಮಿಕೊಂಡಿದ್ಡ ಮಲೇರಿಯಾ ಕೀಟಜನ್ಯ ರೋಗಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಜಿಲ್ಲೆಯ ಆಯ್ದ ೧೯ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಮಾತ್ರ ಖಾಸಗಿಯವರಿಗೆ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಜುಲೈ ಮಾಹೆಯಲ್ಲಿ ಡೆಂಘೀ ಮಾಸಾಚರಣೆ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ೨೦೦೩ರಿಂದ ಮಲೇರಿಯಾ ನಿಯಂತ್ರಣ ಕಾರ್ಯಕ್ರಮ ಜಾರಿಯಾಗಿದೆ. ಆರೋಗ್ಯ ಇಲಾಖೆ ೨೦೨೫ಕ್ಕೆ ಮಲೇರಿಯಾ ನಿವಾರಣಾ ಗುರಿ ಹಾಕಿಕೊಂಡಿದೆ. ಜಿಲ್ಲೆಯಲ್ಲಿ ಆರು ಮಲೇರಿಯಾ ಪ್ರಕರಣ ಕಂಡುಬಂದಿವೆ ಎಂದರು.
ತೀವ್ರಜ್ವರ, ತಲೆನೋವು, ಕಣ್ಣುಗಳ ನೋವು, ಕೀಲುಗಳಲ್ಲಿ ನೋವು ಡೆಂಘೀಜ್ವರ ಲಕ್ಷಣಗಳು. ಕೀಲುಗಳಲ್ಲಿ ಊತ ಕಾಣಿಸಿಕೊಳ್ಳುವುದು ಚಿಕೂನ್ ಗುನ್ಯಾ ಲಕ್ಷಣಗಳಾಗಿವೆ. ಸೋಂಕು ಹೊಂದಿದ ಈಡಿಸ್ ಸೊಳ್ಳೆಗಳ ಕಚ್ಚುವಿಕೆಯಿಂದ ಡೆಂಘೀಜ್ವರ ಮತ್ತು ಚಿಕೂನ್ ಗುನ್ಯಾ ರೋಗಗಳು ಉಂಟಾಗುತ್ತವೆ. ಹಾಗಾಗಿ ನೀರು ನಿಂತ ಚಿಪ್ಪು, ತೆಂಗಿನ ಮಟ್ಟೆ, ತೊಟ್ಟಿ, ಟೈರ್, ಹಳೆಯ ನೀರಿನ ಬಾಟಲಿಗಳು ಮತ್ತಿತರೆ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಆಗಾಗ ನಾಶ ಮಾಡಬೇಕು. ಮುಖ್ಯವಾಗಿ ಖಾಸಗಿ ವೈದ್ಯರ ಬಳಿ ಬರುವ ರೋಗಿಗಳಿಗೆ ಮಲೇರಿಯಾ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಸರ್ಕಾರಿ ಆಸ್ಪತ್ರಗೆ ಕಳಿಸಿಕೊಡಬೇಕು ಎಂದು ತಿಳಿಸಿದರು.ಪುರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಡಾ ಲಕ್ಷ್ಮೀದೇವಿ, ಆಪ್ತ ಸಮಾಲೋಚಕಿ ಶೈಲಜಾ, ಹಿರಿಯ ಅಧಿಕಾರಿ ಉಮ್ಮಣ್ಣ, ಕ್ಷೇತ್ರ ಆರೋಗ್ಯ ನಿರೀಕ್ಷಣಾಧಿಕಾರಿ ಕಿರಣ್, ಶುಷ್ರೂಶಕಿ ನಳಿನಾ, ಯಾಸ್ಮೀನ್, ಸಮಾಜ ಸೇವಕ ಬೆಣ್ಣೆಹಳ್ಳಿ ಬಸವರಾಜ್ ಹಾಗೂ ಖಾಸಗಿ ವೈದ್ಯರು, ಔಷಧಿ ಅಂಗಡಿ ಮಾಲಿಕರು ಇದ್ದರು.
- - --ಚಿತ್ರ-೧: ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಗಂಗಾಧರ್ ಕಾರ್ಯಾಗಾರ ಉದ್ಘಾಟಿಸಿದರು.