ಮಲ್ಲಿಕಾರ್ಜುನ ಖರ್ಗೆ ಕಲ್ಬುರ್ಗಿಗೆ ಬರಲು‌ ಚಿಂಚೋಳಿ ಎಂಪಿ ಅನುಮತಿ ಬೇಕಿಲ್ಲ

KannadaprabhaNewsNetwork | Published : May 1, 2024 1:15 AM

ಸಾರಾಂಶ

ಮಲ್ಲಿಕಾರ್ಜುನ ಖರ್ಗೆ ಅವರು ಎರಡು ಸಲ‌ ಕಲಬುರಗಿಯಿಂದ ಲೋಕಸಭೆ ಸದಸ್ಯರಾಗಿದ್ದವರು. ಈಗ ರಾಜ್ಯಸಭೆ ವಿರೋಧ ಪಕ್ಷದ ನಾಯಕರು. ಅವರು ಕಲಬುರಗಿಗೆ ಬರಲು ಚಿಂಚೋಳಿ ಎಂಪಿ ಅವರ ಅನುಮತಿ ಬೇಕಿಲ್ಲ: ಪ್ರಿಯಾಂಕ್ ಖರ್ಗೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಸೋಲಿನ ಭೀತಿಯಿಂದಾಗಿ ಖರ್ಗೆ ಕಲಬುರಗಿಗೆ ಪದೇ ಪದೇ ಬರುತ್ತಿದ್ದಾರೆ ಎನ್ನುವ ಸಂಸದ ಉಮೇಶ್ ಜಾಧವ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಅವರು ಎರಡು ಸಲ‌ ಕಲಬುರಗಿಯಿಂದ ಲೋಕಸಭೆ ಸದಸ್ಯರಾಗಿದ್ದವರು. ಈಗ ರಾಜ್ಯಸಭೆ ವಿರೋಧ ಪಕ್ಷದ ನಾಯಕರು. ಅವರು ಕಲಬುರಗಿಗೆ ಬರಲು ಚಿಂಚೋಳಿ ಎಂಪಿ ಅವರ ಅನುಮತಿ ಬೇಕಿಲ್ಲ ಎಂದು ತಿರುಗೇಟು ನೀಡಿದರು.

ಕಲಬುರಗಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿಂಚೋಳಿ ಎಂಪಿಯವರೇ ನೀವು ಕೂಡಾ ಮೋದಿ, ಅಮಿತ್ ಶಾ, ಯಡಿಯೂರಪ್ಪ, ವಿಜಯೇಂದ್ರ, ಸಿ.ಟಿ. ರವಿ ಸೇರಿದಂತೆ ಹಲವಾರು ನಾಯಕರನ್ನು‌ ಕರೆಸಿದ್ದೀರಲ್ಲ ಯಾಕೆ? ನಿಮಗೂ ಸೋಲಿನ ಭೀತಿ ಆವರಿಸಿದೆಯಾ? ಎಂದು ಪ್ರಶ್ನಿಸಿದರು.

ಬಿಜೆಪಿಯವರು ಹತಾಶೆರಾಗಿದ್ದಾರೆ, ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಅವರು ಕಲಬುರಗಿಗೆ ಬರುತ್ತಿದ್ದಾರೆ. ಪ್ರಿಯಾಂಕ್ ಹಾಗೂ ಶರಣಪ್ರಕಾಶ ಪಾಟೀಲ್ ಗ್ರಾಪಂಗಳಿಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ ಎಂದು‌ ಜಾಧವ ಹೇಳುತ್ತಾರೆ. ಹೌದು, ಪ್ರತಿಯೊಬ್ಬರು ಗೆಲ್ಲಬೇಕೆಂದೆ ಪ್ರಚಾರ ಮಾಡುತ್ತಾರೆ‌. ಚುನಾವಣೆಯನ್ನ ಚುನಾವಣೆಯನ್ನಾಗಿ ಎದುರಿಸಿ, ವೈಯಕ್ತಿಕ ಟೀಕೆ ಮಾಡಿದರೆ ನಾವೂ ಕೂಡಾ ಹಾಗೆ ಉತ್ತರ ಕೊಡಬೇಕಾಗುತ್ತದೆ. ಬೇವಿನ ಬೀಜ ಬಿತ್ತಿ ಮಾವು ಬೆಳೆಯಲು ಆಗುವುದಿಲ್ಲ ಎಂದರು.

ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎನ್ನುವ ಬಿಜೆಪಿ ನಾಯಕರ ಮಾತಿಗೆ ಸಿಡಿಮಿಡಿಗೊಂಡ ಖರ್ಗೆ, ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲವೇ? ನಮ್ಮ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಜಾಧವ್ ತಮ್ಮ ಮಗನಿಗೆ ಚಿಂಚೋಳಿಯಲ್ಲಿ ಶಾಸಕನನ್ನಾಗಿ ಮಾಡಿಲ್ಲವೇ? ಇದೇ ಪ್ರಶ್ನೆಯನ್ನು ಯಡಿಯೂರಪ್ಪ, ಅಮಿತ್ ಶಾ ಮುಂದೆ ಮಾತ‌ನಾಡಲಿ ಎಂದರು.ಹಳ್ಳಿಯಿಂದ ದಿಲ್ಲಿಯವರೆಗೆ ಬಿಜೆಪಿ ನಾಯಕರು ಕಾಂಗ್ರೆಸ್ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ‌. ಇವರ ಡಿಎನ್‌ಎ ಟೆಸ್ಟ್ ಮಾಡಿಸಬೇಕಿದೆ. ನಾನೇ ನನ್ನ‌ ಸ್ವಂತ ಖರ್ಚಿನಲ್ಲಿಯೇ ವ್ಯವಸ್ಥೆ ಮಾಡಿಸುತ್ತೇನೆ ಬಿಜೆಪಿ ನಾಯಕರು ಟೆಸ್ಟ್ ಮಾಡಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ನನ್ನ ಎಜುಕೇಷನ್ ಕ್ವಾಲಿಫಿಕೇಷನ್ ಬಗ್ಗೆ ಪ್ರಶ್ನೆ ಮಾಡುವ ಜಾಧವ ಅವರೇ ಮೊದಲು ನಿಮ್ಮ ಪ್ರಧಾನಿಯ ಕ್ವಾಲಿಫಿಕೇಷನ್ ಏನು ಎಂದು ಜನರಿಗೆ ತಿಳಿಸಿ. ಈ ಹಿಂದೆ ಕೇಜ್ರಿವಾಲ್ ಪ್ರಧಾನಿ ಕ್ವಾಲಿಫಿಕೆಷನ್ ಬಗ್ಗೆ ಮಾಹಿತಿ ಕೇಳಿದಾಗ ಕೊಟ್ಟಿಲ್ಲ. ನಾನು ಎನಿಮೇಷನ್‌ನಲ್ಲಿ ಡಿಪ್ಲೊ‌ಮಾ ಮಾಡಿದ್ದೇನೆ. ಶಾಸಕನಾಗಲು ಸಂವಿಧಾನ‌ಬದ್ಧ ಅರ್ಹತೆ ಪಡೆದಿದ್ದೇನೆ. ಈ ಬಗ್ಗೆ ಅಫಡವಿಟ್ ಹಾಕುತ್ತೇನೆ. ನಿಮ್ಮ ಮೋದಿ ಅವರಿಗಿಂತ ಹೆಚ್ಚಿಗೆ ನಾನು ಕ್ವಾಲಿಫೈಡ್‌ ಆಗಿದ್ದೇನೆ. ನಮ್ಮ ನಾಯಕ ರಾಹುಲ್ ಗಾಂಧಿ‌ ಅವರು ವಿದೇಶದ ಯೂನಿವರ್ಸಿಟಿಯಲ್ಲಿ ಎಕಾನಾಮಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೋದಿ ಅವರು ಕೂಡಾ ಸಂವಿಧಾನ ಬದ್ದವಾಗಿ ಅರ್ಹರಾಗಿರಬಹುದು. ಆದರೆ, ಯಾವುದಾದರೂ ಕ್ವಾಲಿಫಿಕೇಷನ್ ಪಡೆದಿದ್ದರೆ ಅಫಡವಿಟ್ ಹಾಕಿ ಎಂದರು.

ಉದ್ದೇಶ ಪೂರ್ವಕವಾಗಿ‌ ದಿಶಾ ಸಭೆ ಕರೆಯಲಿಲ್ಲ ಎಂದು ಜಾಧವ್ ಆರೋಪಿಸಿರುವ ಕುರಿತು ಪತ್ರಕರ್ತರು ಕೇಳಿದಾಗ, ಖರ್ಗೆ ಸಾಹೇಬರು ಸಭೆಯ ಅಧ್ಯಕ್ಷರಾಗಿದ್ದಾರೆ. ಕಾರಣಾಂತರಗಳಿಂದ ಸಭೆ ನಡೆಸಲಾಗಿಲ್ಲ ಇದರಲ್ಲಿ ಉದ್ದೇಶಪೂರ್ವಕವಾಗಿಲ್ಲ.‌ ನಾನು ಸಚಿವನಾಗಿ ಇದೂವರೆಗೆ ಮೂರು‌ ಬಾರಿ ಜನಸ್ಪಂದನೆ ಕಾರ್ಯಕ್ರಮ‌ ಮಾಡಿದ್ದೇನೆ.‌ ಸಂಸದರಾಗಿ ನೀವೆಷ್ಟು ಸಲ ಮಾಡಿದ್ದೀರಿ ಹೇಳಿ ಎಂದು ಒತ್ತಾಯಿಸಿದರು.

ಸಿಟಿ ರವಿ ಅವರೇ ಮೊದ್ಲು ನೀವು ಸೆಟಲ್‌ ಆಗೋದನ್ನ ಯೋಚಿಸಿ: ಪ್ರಿಯಾಂಕ್ ಖರ್ಗೆ ಸೆಟಲ್ ಆಗಿದ್ದಾರೆ. ಈಗ ಅಳಿಯನನ್ನು ಸೆಟಲ್ ಮಾಡಲು ಖರ್ಗೆ ಅವರು‌ ಕಣ್ಣೀರು ಹಾಕಿದ್ದಾರೆ ಎಂದು ಸಿ.ಟಿ‌. ರವಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್, ನಿಜ ನಾನು ಸೆಟಲ್ ಆಗಿದ್ದೇನೆ. ರಾಧಾಕೃಷ್ಣ ಅವರ ಸೆಟಲ್ ಮಾಡುವ ಬಗ್ಗೆ ಕಲಬುರಗಿ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ, ಚಿಕ್ಕಮಗಳೂರಿನ ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ. ಪಕ್ಷದಲ್ಲಿಯೂ ಯಾವುದೇ ಹುದ್ದೆ ಹೊಂದಿಲ್ಲ. ರವಿ ಅವರೇ ನಮ್ಮ ಸೆಟಲ್ ಬಗ್ಗೆ ಯೋಚಿಸದೇ ನೀವು ಸೆಟಲ್ ಆಗುವ ಬಗ್ಗೆ ಯೋಚಿಸಿ. ಯಡಿಯೂರಪ್ಪ ಹಾಗೂ ಅವರ ಮಗನಿಂದ ಬಿಜೆಪಿಯನ್ನು ಸ್ವಚ್ಚ ಗೊಳಿಸಲು ಹೋರಾಡುವುದಾಗಿ ಯತ್ನಾಳ ಹಾಗೂ ಈಶ್ವರಪ್ಪ ಹೇಳುತ್ತಿದ್ದಾರೆ. ಅವರನ್ನು ನೋಡಿ, ಅವರಂತೆ ಮಾತನಾಡುವುದನ್ನು ಕಲಿಯಿರಿ. ಮೊದಲೇ ಜನರು ನಿಮ್ಮನ್ನು ಪುಕ್ಕಲ ಎನ್ನುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಸಾಮಾನ್ಯರಿಗೆ ಟಿಕೆಟ್‌ ಕೊಡಬಹುದಿತ್ತಲ್ಲ: ಸಾಮಾನ್ಯ ದಲಿತನಿಗೆ ಟಿಕೇಟ್ ನೀಡಬೇಕಿತ್ತು ಎಂದು ಸಿ.ಟಿ‌. ರವಿ ಹೇಳಿರುವ ಕುರಿತು ಹೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ತೇಜಸ್ವಿ ಸೂರ್ಯ ಹಾಗೂ ಜಗದೀಶ್ ಶೆಟ್ಟರ್ ಬದಲು ಸಾಮಾನ್ಯ ಬ್ರಾಹ್ಮಣ, ಲಿಂಗಾಯತನಿಗೆ ಟಿಕೇಟು ಕೊಡಬೇಕಿತ್ತಲ್ಲ. ಇನ್ನೂ‌ ಚುನಾವಣೆಗೆ ಪ್ರಚಾರ ಕೊನೆಗೊಳ್ಳಲು ಐದು ಆರು‌ದಿನವಿದೆ ಬಿಜೆಪಿ ನಾಯಕರು ನಮ್ಮ ಹಾಗೂ ನಮ್ಮ ಕುಟುಂಬದ ಮೇಲೆ ಹೀಗೆ ವೈಯಕ್ತಿಕ ದಾಳಿ ಮಾಡುತ್ತಾರೆ. ನಾವೂ ಕೂಡಾ ಅಂತಹ ಮಾತುಗಳಿಗೆ ಸೂಕ್ತ ಉತ್ತರ ಕೊಡಬೇಕಾಗುತ್ತದೆ ಎಂದು ಮಾರುತ್ತರ ನೀಡಿದರು.

ಸರ್ಕಾರದ ಪರವಾಗಿ ಮಾತನಾಡಲೆಂದೇ ಸಿಎಂ ನಮ್ಮನ್ನ ನೇಮಿಸಿದ್ದಾರೆ: ಪ್ರಿಯಾಂಕ್ ಖರ್ಗೆ ಸರಕಾರದಿಂದ ಪವರ್ ಆಫ್ ಅಟಾರ್ನಿ ಪಡೆದುಕೊಂಡಿದ್ದಾರೆ. ಹಾಗಾಗಿ ಎಲ್ಲ ಖಾತೆಗಳಿಗೆ ಸಂಬಂಧಿಸಿದ ವಿಚಾರ ಮಾತನಾಡುತ್ತಾರೆ ಎನ್ನುವ ಸಿ.ಟಿ. ರವಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್, ಹೌದು‌ ನಾನು, ದಿನೇಶ್ ಗುಂಡುರಾವ್, ಸಂತೋಷ ಲಾಡ್ ಹಾಗೂ ಕೃಷ್ಣ ಭೈರೇಗೌಡ ಅಧಿಕೃತ ವಕ್ತಾರರು. ಸರ್ಕಾರದ ಪರವಾಗಿ ಮಾತನಾಡಲಿ ಅಂತ ಸಿಎಂ ನಮಗೆ ನೇಮಿಸಿದ್ದಾರೆ. ಸರ್ಕಾರಕ್ಕಾಗಲೀ ಅಥವಾ ಜನರಿಗಾಗಲೀ ಇದರಿಂದ ಏನು ತೊಂದರೆಯಾಗಿಲ್ಲ. ಬಿಜೆಪಿಗೆ ಅಥವಾ ರವಿಗೆ ತೊಂದರೆಯಾದರೆ ನನಗೆ ಅದು ಸಂಬಂಧಿಸಿಲ್ಲ ಎಂದರು.

ಬಹಿರಂಗ ಚರ್ಚೆಗೆ ಜಾಧವ್ ಆವ್ಹಾನ ನೀಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಷಯಾಧಾರಿತ ಚರ್ಚೆ ಮಾಡೋಣ ಬನ್ನಿ. ನಾನೇ ವೇದಿಕೆ ಸಿದ್ಧಪಡಿಸುತ್ತೇನೆ. ರೇಲ್ವೆ ವಲಯ, ಜವಳಿ ಪಾರ್ಕ್, ನಿಮ್ಜ್ ನಂತಹ ಯೋಜನೆಗಳು ಯಾಕೆ ವಾಪಸ್ ಹೋದವು ಎನ್ನುವುದಕ್ಕೆ ಅಲ್ಲಿ ನೀವು ಉತ್ತರ ಕೊಡಿ. ಕಾನೂನು ಸುವ್ಯವಸ್ಥೆ ಕೆಟ್ಟಿದೆ ಎಂದಿದ್ದೀರಿ, ಕಲಬುರಗಿಯಲ್ಲಿ ನಿಮ್ಮನ್ನು ಹೊರತುಪಡಿಸಿದರೆ ಎಲ್ಲರೂ ಆರಾಮಾಗಿ ಓಡಾಡುತ್ತಿದ್ದಾರೆ. ನಿಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಒಬ್ಬ ಉಸ್ತುವಾರಿ ಸಚಿವರನ್ನ ತರಲು ಯೋಗ್ಯತೆ ಇರಲಿಲ್ಲ. ಮೂರು ವರ್ಷದಲ್ಲಿ ಮೂವರು ಸಚಿವರು ಬದಲಾದರು. ನೀವು ನಮಗೆ ಪಾಠ ಮಾಡಲು ಬರುತ್ತೀರಾ ಎಂದರು.

Share this article