ಮಲ್ಲಿಪಟ್ಟಣ ಏತನೀರಾವರಿ ಯೋಜನೆ ಪೂರ್ಣಕ್ಕೆ ಸೂಚನೆ

KannadaprabhaNewsNetwork | Published : Apr 21, 2025 12:47 AM

ಸಾರಾಂಶ

ಏತನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿಲ್ಲ ಹಾಗೂ ಯೋಜನೆಗೆ ಜಮೀನು ವಶಪಡಿಸಿಕೊಂಡ ರೈತರಿಗೆ ಪರಿಹಾರದ ಮೊತ್ತ ನೀಡಿಲ್ಲ ಎಂಬ ದೂರುಗಳಿfದ್ದ ಹಿನ್ನೆಲೆಯಲ್ಲಿ ಕಂದಾಯ, ನೀರಾವರಿ, ಅರಣ್ಯ, ಸೆಸ್ಕ್ ಸೇರಿದಂತೆ ಸಂಬಂಧಿಸಿದ ಇಲಾಖೆ ಮತ್ತು ರೈತರ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ರೈತರಿಗೆ ಅಗತ್ಯ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಭೂಮಿ ದಾಖಲೆಗಳು ಮತ್ತು ಒಡೆತನದ ಸಮಸ್ಯೆಇರುವ ಕಡೆ ಸಮಸ್ಯೆ ಬಗೆಹರಿಸಿ ಪರಿಹಾರ ನೀಡಲು ಸೂಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ಬಹು ನಿರೀಕ್ಷಿತ ಮಲ್ಲಿಪಟ್ಟಣ ಏತನೀರಾವರಿ ಯೋಜನೆ ಮೊದಲ ಹಂತದ ಕಾಮಗಾರಿ ವೇಗ ಪಡೆದುಕೊಂಡಿದ್ದು, ಬರುವ ಆಗಸ್ಟ್ ತಿಂಗಳ ಅಂತಿಮಕ್ಕೆ ಕಾಮಗಾರಿ ಪೂರ್ಣಗೊಳಿಸಿ ನಿಗದಿಯಾಗಿರುವ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕೆಲಸವನ್ನು ತ್ವರಿತವಾಗಿ ಮಾಡಬೇಕೆಂದು ಶಾಸಕ ಎ.ಮಂಜು ಎಂಜಿನಿಯರ್ ಹಾಗೂ ಗುತ್ತಿಗೆದಾರಗೆ ಸೂಚನೆ ನೀಡಿದರು.

ಕಟ್ಟೇಪುರದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಏತನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿಲ್ಲ ಹಾಗೂ ಯೋಜನೆಗೆ ಜಮೀನು ವಶಪಡಿಸಿಕೊಂಡ ರೈತರಿಗೆ ಪರಿಹಾರದ ಮೊತ್ತ ನೀಡಿಲ್ಲ ಎಂಬ ದೂರುಗಳಿfದ್ದ ಹಿನ್ನೆಲೆಯಲ್ಲಿ ಕಂದಾಯ, ನೀರಾವರಿ, ಅರಣ್ಯ, ಸೆಸ್ಕ್ ಸೇರಿದಂತೆ ಸಂಬಂಧಿಸಿದ ಇಲಾಖೆ ಮತ್ತು ರೈತರ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ರೈತರಿಗೆ ಅಗತ್ಯ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಭೂಮಿ ದಾಖಲೆಗಳು ಮತ್ತು ಒಡೆತನದ ಸಮಸ್ಯೆಇರುವ ಕಡೆ ಸಮಸ್ಯೆ ಬಗೆಹರಿಸಿ ಪರಿಹಾರ ನೀಡಲು ಸೂಚಿಸಲಾಗಿದೆ. ರೈತರು ಮುಂದೆ ಬರದಿದ್ದರೆ ಖಾತೆ ದಾರನ ಹೆಸರಿನಲ್ಲಿ ಹಣವನ್ನು ಠೇವಣಿಮಾಡಿ ಸಮಸ್ಯೆ ಬಗೆಹರಿದ ಬಳಿಕ ನಿಜವಾದ ಫಲಾನುಭವಿಗೆ ಹಣಸಂದಾಯ ಮಾಡುವಂತೆಯೂ ಸೂಚಿಸಲಾಗಿದೆ. ಸಣ್ಣಪುಟ್ಟ ಸಮಸ್ಯೆ ಇದ್ದರೆ ರೈತರು ಕಾಮಗಾರಿಗೆ ತೊಂದರೆ ನೀಡಬಾರದು. ಅಧಿಕಾರಿಗಳನ್ನಾಗಲಿ, ತಮ್ಮನ್ನಾಗಲಿ ಸಂಪರ್ಕಿಸಿದರೆ ಸಮಸ್ಯೆ ಬಗೆಹರಿಸಿಕೊಡುವುದಾಗಿ ಹೇಳಿದರು.

120 ಕೋಟಿ ರು. ವೆಚ್ಚದ ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸೆಪ್ಟೆಂಬರ್‌ನಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವುದಾಗಿ ಗುತ್ತಿಗೆದಾರರು ಹೇಳಿದ್ದಾರೆ. ಈ ಯೋಜನೆಯಿಂದ ಸೋಮವಾರಪೇಟೆ ತಾಲೂಕಿನ ಕೆಲಭಾಗ, ಮಲ್ಲಿಪಟ್ಟಣ, ದೊಡ್ಡಮಗ್ಗೆ ಮತ್ತು ಕೊಣನೂರು ಹೋಬಳಿಗಳ ರೈತರಿಗೆ ಅನುಕೂಲವಾಗಲಿದೆ ಎಂದರು.

77 ಕೋಟಿ ರು. ವೆಚ್ಚದ ಎರಡನೆ ಹಂತದ ಯೋಜನೆಯಲ್ಲಿ 85 ಕಿ. ಮೀ. ಕೊಳವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಂಡಿದ್ದು, ಈ ಯೋಜನೆಯಲ್ಲಿ ಕೊಣನೂರು ಮತ್ತು ಮಲ್ಲಿಪಟ್ಟಣ ಹೋಬಳಿ ವ್ಯಾಪ್ತಿಯ ಎಲ್ಲ ಕೆರೆಗಳಿಗೆ ನೀರು ಹರಿಯಲಿದೆ. ಕಣಿಯಾರು ಭಾಗದ ಕೆರೆಗಳಿಗೆ ನೀರು ಹರಿಸಲು 11.80 ಕೋಟಿ ರು. ವೆಚ್ಚದ ಯೋಜನೆ ರೂಪಿಸಲಾಗಿದೆ. ಈ ಎಲ್ಲ ಯೋಜನೆಗಳಿಂದ ತಾಲೂಕಿನ ಎಲ್ಲ ಭಾಗದ ಕೆರೆಕಟ್ಟೆಗಳು ತುಂಬಿ ಅಂತರ್ಜಲ ಹೆಚ್ಚಿ ರೈತರ ಕೊಳವೆಬಾವಿಗಳು ಮರುಪೂರ್ಣ ಗೊಳ್ಳುವುದರಿಂದ ರೈತರ ಬದುಕು ಹಸನಾಗಲಿದೆ ಎಂದರು.

ಈ ಯೋಜನೆ ವ್ಯಾಪ್ತಿಗೆ 79 ಹಳ್ಳಿಗಳ ಕೆರೆ ಕಟ್ಟೆಗಳನ್ನು ಗುರುತಿಸಲಾಗಿದೆ. ಅಲ್ಲದೆ ಉಳಿದ ಎಲ್ಲಾ ಗ್ರಾಮಗಳ ಕೆರೆಗಳನ್ನು ಬಳಕೆ ಮಾಡಿಕೊಂಡು ನೀರು ತುಂಬಿಸುವ ಕೆಲಸ ಕೂಡ ನಡೆಯಲಿದೆ. ಸೋಮವಾರ ಪೇಟೆ ತಾಲೂಕಿನ 20 ಕೆರೆಕಟ್ಟೆಗಳು ಸಹ ಸೇರಿವೆ. ಅಂದು ಆರಂಭಿಕವಾಗಿ ರಾಜ್ಯ ಸರಕಾರ 120 ಕೋಟಿ ರು. ಹಣ ಬಿಡುಗಡೆ ಮಾಡಿ ಕಾಮಗಾರಿಯನ್ನು 18 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರೊಂದಿಗೆ ಕರಾರು ಮಾಡಿಕೊಂಡಿತ್ತು. ಆದರೆ ಕೆಲಸ ಮಾತ್ರ ಕೇವಲ ಪೈಪ್‌ಲೈನ್ ಅಳವಡಿಕೆಯಲ್ಲಿಯೇ ಸಾಗಿತ್ತು. ಹಿನ್ನೀರಿನಲ್ಲಿ ಜಾಕ್‌ವೆಲ್ ನಿರ್ಮಾಣ ಕೆಲಸ ಆರಂಭದಲ್ಲಿಯೇ ನೆನಗುದಿಗೆ ಬಿದ್ದಿತ್ತು. ಕಳೆದ ಜನವರಿಯಲ್ಲಿ ಜಾಕ್‌ವೆಲ್ ಕೆಲಸಕ್ಕೆ ಚಾಲನೆ ನೀಡಿ ಈಗಾಗಲೇ ಅದು ಮುಗಿಯುವ ಹಂತಕ್ಕೆ ಬಂದಿದೆ. ಅಲ್ಲದೆ ಮೋಟಾರ್ ಸೇರಿದಂತೆ ಇತರೆ ಉಪಕರಣಗಳು ಬಂದಿವೆ ಎಂದರು.

ತಾಲೂಕಿನ ಮುಸವತ್ತೂರು ಬಳಿ ಬೃಹತ್ ನೀರಿನ ತೊಟ್ಟಿ ಸ್ಥಾಪಿಸಿ ಅಲ್ಲಿಂದ ಕೆರೆಗಳಿಗೆ ತುಂಬಿಸುವ ಯೋಜನೆ ಇದಾಗಿದೆ. ಹೇಮಾವತಿ ಹಿನ್ನೀರು ಬಳಿ ಜಾಕ್‌ವೆಲ್‌ನಿಂದ ನೀರಿನ ತೊಟ್ಟಿತನಕ 10ಕಿ.ಮೀ.ವರೆಗೆ ಮಾತ್ರ ರೇಸಿಂಗ್ ಮೇನ್ ಪೈಪ್ ಅಳವಡಿಸುವ ಕೆಲಸ ನಡೆಸಿದ್ದು ಇನ್ನೂ ಇನ್ನು 2 ಅಥವಾ ಮೂರು ಕಿ.ಮೀ. ಕೆಲಸ ಬಾಕಿ ಇದೆ. ಇಂದು ರೈತರು, ಅಧಿಕಾರಿಗಳೊಂದಿಗೆ ಮುಕ್ತವಾಗಿ ಸಮಾಲೋಚನೆ ನಡೆಸಿದ್ದು, ರೇಸಿಂಗ್ ಮೇನ್ ಪೈಪ್ ಅಳವಡಿಸುವ ಕೆಲಸ ಸುಗಮವಾಗಿ ನಡೆಯಲಿದೆ. ಮುಸವತ್ತೂರು ಬಳಿ ನೀರಿನ ತೊಟ್ಟಿ ನಿರ್ಮಾಣದ ಕಾಮಗಾರಿ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ ಎಂದು ಹೇಳಿದರು.

ಒಟ್ಟು 11.50 ಎಕರೆ ಭೂಸ್ವಾಧೀನ ಪಡೆದ ರೈತರಿಗೆ ಪರಿಹಾರ ನೀಡಲು ಅಗತ್ಯವಾದ 9 ಕೋಟಿ ರು. ಹಣವನ್ನು ಮೀಸಲಿರಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಫಲಾನುಭವಿ ರೈತರ ದಾಖಲೆಗಳನ್ನು ಸಿದ್ಧಪಡಿಸಿ ಕೊಡುವ ಕಾರ್ಯವನ್ನು ತುರ್ತಾಗಿ ಮಾಡಲಿದ್ದಾರೆ. ಈ ಯೋಜನೆಯಿಂದ ಮಳೆಗಾಲದಲ್ಲಿ 120 ದಿನ ನೀರು ತುಂಬಿಸುವ ಕಾರ್ಯ ನಡೆಯಲಿದೆ. ಬರುವ ಮೇ ಅಂತ್ಯಕ್ಕೆ ಜಾಕ್‌ವೆಲ್, ನೀರಿನ ತೊಟ್ಟಿ ಕೆಲಸ ಪೂರ್ಣಗೊಳಿಸಿ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಕಡ್ಡಾಯವಾಗಿ ನಡೆಯಬೇಕೆಂದು ಕಟ್ಟುನಿಟ್ಟಿನ ಸೂಚನೆಯನ್ನು ಕೊಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್‌ಗಳಾದ ಸೌಮ್ಯ, ಕೃಷ್ಣಮೂರ್ತಿ, ಅಧೀಕ್ಷಕ ಎಂಜಿನಿಯರ್ ರಘುಪತಿ, ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಆರ್‌ಎಫ್‌ಒ ಯಶ್ಮಮಾಚಮ್ಮ, ನೀರಾವರಿ ಇಲಾಖೆ ಎಂಜಿನಿಯರ್, ರೈತರು, ಗುತ್ತಿಗೆದಾರ ಹಾಗೂ ಸ್ಥಳೀಯರು ಹಾಜರಿದ್ದರು.

Share this article