ಮೋದಿ, ಬಿಜೆಪಿ ಅಲೆಯಲ್ಲಿ ತೇಲಿದ ಮಲ್ನಾಡು ನಗರಿ

KannadaprabhaNewsNetwork | Updated : Mar 19 2024, 11:39 AM IST

ಸಾರಾಂಶ

ಲೋಕಸಭೆ ಚುನಾವಣೆ ಪ್ರಚಾರ ನಿಮಿತ್ತ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಅವರನ್ನು ನೋಡಲು ದೊಡ್ಡ ಸಂಖ್ಯೆಯ ಜನ ಸೇರಿದ್ದರು. ಎಲ್ಲ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಜನರು ಸಮಾವೇಶಗೊಂಡರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ 

ಲೋಕಸಭೆ ಚುನಾವಣೆ ಪ್ರಚಾರ ನಿಮಿತ್ತ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಅವರನ್ನು ನೋಡಲು ದೊಡ್ಡ ಸಂಖ್ಯೆಯ ಜನ ಸೇರಿದ್ದರು. ಎಲ್ಲ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಜನರು ಸಮಾವೇಶಗೊಂಡರು.

ವಿಮಾನ ನಿಲ್ದಾಣದಿಂದ ಅಲ್ಲಮಪ್ರಭು ಮೈದಾನದವರೆಗೆ ಪ್ರಧಾನಿ ಮೋದಿ ಕಾರಿನಲ್ಲಿ ಶೂನ್ಯ ಸಂಚಾರ ವ್ಯವಸ್ಥೆಯಲ್ಲಿ ಆಗಮಿಸಿದರು. ಸೋಗಾನೆಯ ವಿಮಾನ ನಿಲ್ದಾಣದಿಂದ ಎಂ.ಆರ್‌.ಎಸ್‌. ವೃತ್ತ, ಬಿ.ಎಚ್‌. ರಸ್ತೆ, ಹೊಳೆ ಬಸ್‌ ಸ್ಟಾಪ್, ಎ.ಎ. ವೃತ್ತ, ಬಸ್‌ ನಿಲ್ದಾಣ ವೃತ್ತ, ಸರ್ಕ್ಯೂಟ್ ವೃತ್ತ, ಶುಭ ಮಂಗಳ ಕಲ್ಯಾಣ ಮಂದಿರ, ವಿನೋಬನಗರ ಪೊಲೀಸ್‌ ಚೌಕಿಯ ಮೂಲಕ ಅಲ್ಲಮ ಪ್ರಭು ಮೈದಾನದ ತಲುಪಿದರು.

ಅವರು ಸಾಗುವ ಮಾರ್ಗದುದ್ದಕ್ಕೂ ರಸ್ತೆಯ ಎರಡು ಬದಿಯಲ್ಲಿ ಜನ ಸೇರಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಕಾರು ಆಗಮಿಸುತ್ತಿದ್ದಂತೆ ಜನರು ಘೋಷಣೆ ಕೂಗಿದರು. ಪ್ರಧಾನಿ ಮೋದಿಯತ್ತ ಕೈ ಬೀಸಿದರು. ಇತ್ತ ಪ್ರಧಾನಿ ನರೇಂದ್ರ ಮೋದಿ ಕೂಡ ಜನರತ್ತ ಕೈ ಬೀಸಿದರು.

ಜನರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ: ಇನ್ನು, ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರೂ ಕೆಲವು ಕಡೆ ಜನರು ಬ್ಯಾರಿಕೇಡ್‌ನಿಂದ ಹೊರಬಂದು ನಿಂತಿದ್ದರು. 

ಅವರನ್ನು ನಿಯಂತ್ರಿಸಲು ಪೊಲೀಸರು ಪದೇಪದೆ ಮೈಕ್‌ನಲ್ಲಿ ಕೂಗುತ್ತಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳೇ ಜನರ ನಿಯಂತ್ರಿಸುತ್ತಿದ್ದರು.

ಪೆಂಡಾಲ್‌ ಮಧ್ಯೆ ತೆರೆದ ಜೀಪಿನಲ್ಲಿ ಸಾಗಿದ ಮೋದಿ: ಶಿವಮೊಗ್ಗದಲ್ಲಿ ನಡೆದ ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪೆಂಡಾಲ್‌ನಲ್ಲಿ ಜನರ ಮಧ್ಯೆ ಮೆರವಣಿಗೆ ಮಾಡಿದರು. 

ತೆರೆದ ಜೀಪ್‌ನಲ್ಲಿ ಮೋದಿ ಅವರು ಸಭಿಕರತ್ತ ಕೈ ಮುಗಿದು, ಕೈ ಬೀಸುತ್ತ ಸಾಗಿದರು. ಜನರು ಪ್ರಧಾನಿ ಮೋದಿ ಅವರತ್ತ ಕೈ ಬೀಸಿ, ಘೋಷಣೆ ಕೂಗಿದರು. ತಮ್ಮ ಮೊಬೈಲ್‌ಗಳಲ್ಲಿ ಮೋದಿ ಅವರ ಭಾವಚಿತ್ರ ತೆಗೆದುಕೊಂಡು ಖುಷಿಪಟ್ಟರು.

ಬಿಜೆಪಿ ಬೈಕ್ ರ್ಯಾಲಿ ತಡೆದ ಪೊಲೀಸರು: ಭದ್ರಾವತಿಯ ಬಿಜೆಪಿ ಮುಖಂಡರಾದ ಮಂಗೋಟೆ ರುದ್ರೇಶ್ ಹಾಗೂ ಧರ್ಮಪ್ರಸಾದ್ ನೇತೃತ್ವದಲ್ಲಿ ಭದ್ರಾವತಿಯಿಂದ ಬಿಜೆಪಿ ಕಾರ್ಯಕರ್ತರು ಬೈಕ್ ರಾಲಿ ಮೂಲಕ ಬಂದಿದ್ದು, ಪೊಲೀಸರು ರ್ಯಾಲಿಯನ್ನು ತಡೆದ ಹಿನ್ನೆಲೆ ಮೋದಿ ಪರ ಘೋಷಣೆ ಹಾಕಿ, ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಅನಂತರ ಪೊಲೀಸರಿಂದ ಪ್ರವೇಶ ನಿರಾಕರಣೆ ಹಿನ್ನೆಲೆ ವಾಪಸಾದರು.

ಇನ್ನೂ ಕಾರ್ಯಕ್ರಮ ಶುರುವಾಗುವುದಕ್ಕೂ ಮುನ್ನವೇ ಕಾರ್ಯಕರ್ತರು ಮೋದಿ, ಮೋದಿ ಎಂದು ಹರ್ಷೋದ್ಗಾರ ಮೊಳಗಿಸಿದರು. ಕಾರ್ಯಕ್ರಮ ಆರಂಭದ ಬಳಿಕ ತಡವಾದ ಮಹಾನಗರ ಪಾಲಿಕೆ ಮಾಜಿ ಸದಸ್ಯರೊಬ್ಬರಿಗೆ ವಿವಿಐಪಿ ಗ್ಯಾಲರಿಯಲ್ಲಿ ಕುರ್ಚಿ ಸಿಗದ ಕಾರಣ, ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೆ ನಾಲ್ಕು ಜಿಲ್ಲೆಯ ಕಾರ್ಯಕರ್ತರು ಆಗಮಿಸಿದ್ದು, ಇವರಿಗಾಗಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ವ್ಯವಸ್ಥೆ ಮಾಡಲಾಗಿತ್ತು. ನೀತಿ ಸಂಹಿತೆ ಜಾರಿ ಹಿನ್ನೆಲೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಿಗೆ ಊಟದ ವ್ಯವಸ್ಥೆ ಇರಲಿಲ್ಲ. ಆದರೆ ನೀರು ಮತ್ತು ಮಜ್ಜಿಗೆಯನ್ನು ವಿತರಿಸಲಾಯಿತು.

ಗಮನ ಸೆಳೆದ ವೇಷಭೂಷಣ: ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ನಡೆದ ಪ್ರಧಾನಿ ಪ್ರಚಾರ ಸಮಾವೇಶದಲ್ಲಿ ಕೇಸರಿ ಪೇಟ, ಶಾಲು ಹಾಗೂ ಬಿಜೆಪಿ ಟೋಪಿ ಧರಿಸಿ ಕಾರ್ಯಕ್ರರ್ತರು ಆಗಮಿಸಿದ್ದರು. ಬಂಜಾರ ಸಮುದಾಯದ ಮಹಿಳೆಯರು ಅವರ ಸಾಂಪ್ರದಾಯಕ ಉಡುಗೆಯಾದ ಲಂಬಾಣಿ ವೇಷಭೂಷಣ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. 

ಮೊದಲ ಬಾರಿ ಮತಚಲಾವಣೆ ಮಾಡಲಿರುವ ಯುವಕ-ಯುವತಿಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಿಯೊಬ್ಬರನ್ನೂ ಪೊಲೀಸರು ತಪಾಸಣೆ ನಡೆಸಿ ಒಳಗೆ ಬಿಟ್ಟರು. ವೇದಿಕೆ ಹಾಗೂ ವೇದಿಕೆ ಎದುರಿನ‌ ಸ್ಥಳವನ್ನು ಭದ್ರತಾ ಸಿಬ್ಬಂದಿ ಇಂಚಿಂಚೂ ತಪಾಸಣೆ ನಡೆಸಿದರು.

ಬಿಗಿ ಪೊಲೀಸ್‌ ಬಂದೋಬಸ್ತು: ಭಾನುವಾರ ರಾತ್ರಿಯಿಂದಲೇ ನಗರದಾದ್ಯಂತ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾದು ಹೋಗುವ ಹಾದಿಯನ್ನು ಸಂಪರ್ಕಿಸುವ ಬಹುತೇಕ ಸಂಪರ್ಕ ರಸ್ತೆಗಳನ್ನು ಬ್ಯಾರಿಕೇಡ್ ಮೂಲಕ ಬಂದ್‌ ಮಾಡಲಾಗಿತ್ತು. ಸಂಚಾರವನ್ನು ನಿಯಂತ್ರಿಸಲಾಗಿತ್ತು.

ಸಮಾವೇಶ ಹೈಲೈಟ್ಸ್‌

  • ವೇದಿಕೆಯಲ್ಲಿ ಅಭ್ಯರ್ಥಿಗಳಾದ ಬಿ. ವೈ. ರಾಘವೇಂದ್ರ, ಗಾಯತ್ರಿ ಸಿದ್ದೇಶ್‌, ಕೋಟಾ ಶ್ರೀನಿವಾಸ ಪೂಜಾರಿ, ಬ್ರಿಜೇಶ್‌ ಚೌಟಾಲ ಉಪಸ್ಥಿತಿ.
  • *ನಗರಸಭೆಯ ಸದಸ್ಯರೂ ಇಲ್ಲದ ಸಂದರ್ಭದಲ್ಲಿ ಯಡಿಯೂರಪ್ಪ ತಮ್ಮ ಯೌವ್ವನ ಸವೆಸಿ ಈ ಪಕ್ಷವನ್ನು ಈ ಮಟ್ಟಕ್ಕೆ ತಂದರು. ಇದು ಅವರ ತಪೋಭೂಮಿ ಎಂದು ಯಡಿಯೂರಪ್ಪನವರನ್ನುಶ್ಲಾಘಿಸಿದ ಮೋದಿ.
  • ಬಿಜೆಪಿ ಕಾರ್ಯಕ್ರಮದಲ್ಲಿ ಸದಾ ಮುಂದಿರುತ್ತಿದ್ದ ಈಶ್ವರಪ್ಪ ಗೈರು ಎದ್ದು ಕಾಣುತ್ತಿತ್ತು.
  • ಈ ಬಾರಿ ನಾನೂರು ಮೇಲೆ ಎಂದು ಪದೇಪದೇ ಜನರಿಂದ ಹೇಳಿಸಿದ ಪ್ರಧಾನಿ ಮೋದಿ.
  • ದಿಢೀರನೆ ವೇದಿಕೆಯಲ್ಲಿ ಕಾಣಿಸಿದ ಕುಮಾರ್‌ ಬಂಗಾರಪ್ಪ, ಅಭಿಮಾನಿಗಳಿಂದ ಹರ್ಷ್ಗೊದ್ಧಾರ!
  • ಕಾರ್ಯಕ್ರಮದಲ್ಲಿ ಮಾತನಾಡದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ.

Share this article