ಹಾರನ್‌ ಮಾಡಿದ್ದಕ್ಕೆ ಸಿಟ್ಟಿಗೆದ್ದು ಬೈಕ್‌ಗೆ ಕಾರು ಗುದ್ದಿಸಿದವ ಸೆರೆ

KannadaprabhaNewsNetwork |  
Published : Nov 14, 2025, 04:30 AM ISTUpdated : Nov 14, 2025, 08:09 AM IST
Arrest

ಸಾರಾಂಶ

ರಸ್ತೆಯಲ್ಲಿ ಹಾರನ್ ಮಾಡಿದ ಸಂಬಂಧ ನಡೆದ ಗಲಾಟೆಯಿಂದ ಸಿಟ್ಟಿಗೆದ್ದು ದ್ವಿಚಕ್ರ ವಾಹನಕ್ಕೆ ಕಾರು ಗುದ್ದಿಸಿ ಪರಾರಿ ಆಗಿದ್ದ ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ರಸ್ತೆಯಲ್ಲಿ ಹಾರನ್ ಮಾಡಿದ ಸಂಬಂಧ ನಡೆದ ಗಲಾಟೆಯಿಂದ ಸಿಟ್ಟಿಗೆದ್ದು ದ್ವಿಚಕ್ರ ವಾಹನಕ್ಕೆ ಕಾರು ಗುದ್ದಿಸಿ ಪರಾರಿ ಆಗಿದ್ದ ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊಡಿಗೇಹಳ್ಳಿ ಸಮೀಪದ ಬಾಲಾಜಿ ಲೇಔಟ್ ನಿವಾಸಿ ಸುಕೃತ್‌ ಬಂಧಿತನಾಗಿದ್ದು, ಆರೋಪಿಯಿಂದ ಕಾರು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನ್ಯೂ ಬಿಇಎಲ್‌ ರಸ್ತೆಯ ರಾಮಯ್ಯ ಸಿಗ್ನಲ್ ಸಮೀಪ ದ್ವಿಚಕ್ರ ವಾಹನಕ್ಕೆ ಕಾರು ಗುದ್ದಿಸಿ ಆರೋಪಿ ಪರಾರಿಯಾಗಿದ್ದ. ಈ ಬಗ್ಗೆ ಸಂತ್ರಸ್ತ ವಿನುತ್‌ ಎಂಬುವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ನಂಬರ್ ಗೊತ್ತಿಲ್ಲದ ಕಾರು ಚಾಲಕ, ಬೈಕ್‌ಗೆ ಗುದ್ದಿಸಿ ಪರಾರಿ

ಅ.26ರಂದು ರಾತ್ರಿ ಖಾಸಗಿ ಕಂಪನಿ ಉದ್ಯೋಗಿ ವಿನುತ್‌ ತನ್ನ ಪತ್ನಿ ಅಂಕಿತಾ ಹಾಗೂ ಮಗಳ ಜತೆ ನ್ಯೂ ಬಿ.ಇ.ಎಲ್ ರಸ್ತೆಯ ರಾಮಯ್ಯ ಸಿಗ್ನಲ್ ಬಸ್ ನಿಲ್ದಾಣದ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದರು. ಆಗ ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ ಕಡೆಗೆ ಹೋಗುತ್ತಿರಬೇಕಾದರೆ ಎಂ.ಎಸ್‌.ರಾಮಯ್ಯ ಸಿಗ್ನಲ್‌ನ ಬಸ್ ಸ್ಟಾಪ್ ಬಳಿ ಅದೇ ರಸ್ತೆಯಲ್ಲಿ ಹಿಂದಿನಿಂದ ಬಂದ ನಂಬರ್ ಗೊತ್ತಿಲ್ಲದ ಕಾರು ಚಾಲಕ, ಬೈಕ್‌ಗೆ ಗುದ್ದಿಸಿ ಪರಾರಿಯಾಗಿದ್ದಾನೆ. ಈ ಘಟನೆಯಲ್ಲಿ ಬೈಕ್‌ನಲ್ಲಿದ್ದ ಮೂವರಿಗೆ ಗಂಭೀರ ಪೆಟ್ಟಾಗಿತ್ತು. ಆದರೆ ಕೃತ್ಯ ಎಸಗಿದ ಬಳಿಕ ಕಾರು ನಿಲ್ಲಿಸದೆ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹಾರನ್‌ ವಿಚಾರಕ್ಕೆ ಗಲಾಟೆ:

ಎಂ.ಎಸ್‌. ರಾಮಯ್ಯ ಜಂಕ್ಷನ್‌ನಲ್ಲಿ ಫ್ರೀ ಲೆಫ್ಟ್‌ ತೆಗೆದುಕೊಳ್ಳುವ ವಿಚಾರವಾಗಿ ಸುಕೃತ್‌ ಹಾಗೂ ಬೈಕ್‌ನಲ್ಲಿದ್ದ ವಿನುತ್‌ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೆರಳಿದ ಸುಕೃತ್‌, ದುರುದ್ದೇಶದಿಂದಲೇ ಅತಿವೇಗವಾಗಿ ಹೋಗಿ ಬೈಕ್‌ಗೆ ಕಾರು ಗುದ್ದಿಸಿ ಪರಾರಿಯಾಗಿದ್ದ. ಆರಂಭದಲ್ಲಿ ಅಪಘಾತ ಎಂದು ಭಾವಿಸಲಾಗಿತ್ತು.

 ಆದರೆ ಘಟನೆ ನಡೆದ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಪರಿಶೀಲಿಸಿದಾಗ ಹಿಂಬಾಲಿಸಿ ಬಂದು ಬೈಕ್‌ಗೆ ಸುಕೃತ್ ಕಾರು ಗುದ್ದಿಸಿರುವುದು ಗೊತ್ತಾಯಿತು. ಹಾಗಾಗಿ ಸಂಚಾರ ಠಾಣೆಯಿಂದ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಲಾಯಿತು. ಈಗ ಕೊಲೆ ಯತ್ನ ಆರೋಪದ ಮೇರೆಗೆ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on

Recommended Stories

ಮೊಬೈಲ್‌ ಬಳಕೆ : ಉಗ್ರ, ವಿಕೃತ ಕಾಮಿಗೀಗ ಗ್ರಿಲ್‌
ಸುಪ್ರೀಂನಲ್ಲಿ ರಾಜ್ಯಕ್ಕೆ ಮೇಕೆದಾಟು ವಿಜಯ - ಯೋಜನೆ ಪ್ರಶ್ನಿಸಿದ್ದ ತಮಿಳುನಾಡು ಅರ್ಜಿ ವಜಾ