ನಮ್ಮ ಮೆಟ್ರೋ ಹಸಿರು ಮಾರ್ಗದ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ರೈಲಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

KannadaprabhaNewsNetwork | Updated : Aug 04 2024, 10:55 AM IST

ಸಾರಾಂಶ

ನಮ್ಮ ಮೆಟ್ರೋ ಹಸಿರು ಮಾರ್ಗದ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ಶನಿವಾರ ಸಂಜೆ ವ್ಯಕ್ತಿಯೊಬ್ಬರು ಮೆಟ್ರೋ ರೈಲಿಗೆ ಎದುರಾಗಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಬೆಂಗಳೂರು:  ನಮ್ಮ ಮೆಟ್ರೋ ಹಸಿರು ಮಾರ್ಗದ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ಶನಿವಾರ ಸಂಜೆ ವ್ಯಕ್ತಿಯೊಬ್ಬರು ಮೆಟ್ರೋ ರೈಲಿಗೆ ಎದುರಾಗಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮೃತದೇಹ ರೈಲಿನಡಿ ಸಿಲುಕಿದ್ದ ಪರಿಣಾಮ, ಬರೋಬ್ಬರಿ ಮೂರು ಗಂಟೆ ಯಲಚೇನಹಳ್ಳಿ- ರೇಷ್ಮೆ ಸಂಸ್ಥೆ ಕಡೆಗೆ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು.ಮೂಲತಃ ಉತ್ತರಪ್ರದೇಶದ ಅಲಿಘಡ ನಿವಾಸಿಯಾದ ನವೀನ್‌ಕುಮಾರ್‌ ಅರೋರಾ (57) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ನಗರದಲ್ಲಿ ಹಾರ್ಡ್‌ವೇರ್‌ ಅಂಗಡಿ ಇಟ್ಟುಕೊಂಡಿದ್ದರು. ಕುಮಾರಸ್ವಾಮಿ ಲೇಔಟ್‌ನಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. 

ಕಳೆದ ಐದಾರು ವರ್ಷಗಳಿಂದ ಪತ್ನಿ ಹಾಗೂ ಮಕ್ಕಳು ಈತನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ನವೀನ್‌ಕುಮಾರ್‌ ಕೂಡ ಹಲವು ದಿನಗಳಿಂದ ನಗರದ ಲಾಡ್ಜ್‌ಗಳಲ್ಲಿ ವಾಸಿಸುತ್ತಿದ್ದರು. ಮಾನಸಿಕ ಖಿನ್ನತೆ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದ್ದು, ಮೃತನ ಬಳಿ ಯಾವುದೇ ಡೆತ್‌ ನೋಟ್‌ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮೂಲಕ ಇದೇ ವರ್ಷ ಮೆಟ್ರೋ ರೈಲಿಗೆ ಹಾರಿ ಇಬ್ಬರು ಮೃತಪಟ್ಟಂತಾಗಿದ್ದು, ಮೆಟ್ರೋ ಆರಂಭದಿಂದ ಒಟ್ಟಾರೆ ಮೂವರು ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಂತಾಗಿದೆ.

ಸಂಜೆ 5.45ರ ಸುಮಾರಿಗೆ ಘಟನೆ ನಡೆದಿದ್ದು, ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ನಿಲ್ಲಿಸಲಾಯಿತು. ಮೃತದೇಹ ರೈಲಿನಡಿ ಸಿಲುಕಿತ್ತು. ಹೀಗಾಗಿ ರೈಲ್ವೆ ಸಂಚಾರ ಸ್ಥಗಿತಗೊಂಡಿತು. ಯಲಚೇನಹಳ್ಳಿ ನಿಲ್ದಾಣದಿಂದ ರೇಷ್ಮೆ ಸಂಸ್ಥೆ ಕಡೆಗೆ ಮೆಟ್ರೊ ರೈಲು ಸಂಚಾರ ಬಂದ್‌ ಆದ ಕಾರಣ ಸಂಜೆ ಕಚೇರಿಯಿಂದ ಮನೆಗಳಿಗೆ ಹೋಗುವ ಪ್ರಯಾಣಿಕರು ಪರದಾಡಿದರು.

ನಾಗಸಂದ್ರದಿಂದ ಯಲಚೇನಹಳ್ಳಿವರೆಗೆ ಮೆಟ್ರೋ ಸಂಚಾರ ಎಂದಿನಂತೆ ಇತ್ತು. ಮಧ್ಯ ಭಾಗದಲ್ಲಿ ಸಂಚಾರ ಇಲ್ಲದ್ದರಿಂದ ಹೆಚ್ಚಿನವರಿಗೆ ತೊಂದರೆ ಉಂಟಾಯಿತು. ಮೂರು ಗಂಟೆಯಲ್ಲಿ 20ಕ್ಕೂ ಹೆಚ್ಚಿನ ರೈಲುಗಳ ಆವರ್ತನ ರದ್ದಾಯಿತು. ಹೀಗಾಗಿ ಪ್ರಯಾಣಿಕರು ಆಟೋರಿಕ್ಷಾ, ಬಸ್‌, ಖಾಸಗಿ ವಾಹನದಲ್ಲಿ ಪ್ರಯಾಣಿಸುವ ಅನಿವಾರ್ಯತೆ ಎದುರಿಸಿದರು.

ಮೂರನೇ ಆತ್ಮಹತ್ಯೆ

ಇದೇ ವರ್ಷ ಮಾರ್ಚ್‌ನಲ್ಲಿ ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದಲ್ಲಿ ಮಹಾರಾಷ್ಟ್ರ ಮೂಲಕ ಕಾನೂನು ವಿದ್ಯಾರ್ಥಿ ಧ್ರುವ ಎಂಬಾತ ಹಾರಿ ಜೀವ ಕಳೆದುಕೊಂಡಿದ್ದ. 2012ರಲ್ಲಿ ಯುವಕನೊಬ್ಬ ಹಾರಿ ಮೃತಪಟ್ಟಿದ್ದ. ಈ ವರ್ಷ ಮೆಟ್ರೊ ಹಳಿಗೆ ಹಾರಿದ 5ನೇ ಘಟನೆ ಇದಾಗಿದೆ. ಜನವರಿಯಲ್ಲಿ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಕೇರಳದ ಯುವಕ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಇಂದಿರಾನಗರ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಕೆಳಗೆ ಬಿದ್ದ ಮೊಬೈಲ್ ಎತ್ತಿಕೊಳ್ಳಲು ಹಳಿಗೆ ಹಾರಿದ್ದರು. ಜೂನ್‌ನಲ್ಲಿ ಹೊಸಹಳ್ಳಿ ನಿಲ್ದಾಣದಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದ. ಎರಡು ದಿನಗಳ ಹಿಂದಷ್ಟೇ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ನಾಲ್ಕು ವರ್ಷದ ಬಾಲಕನೊಬ್ಬ ಆಯತಪ್ಪಿ ಹಳಿಗೆ ಬಿದ್ದು ಗಾಯಗೊಂಡ ಘಟನೆ ನಡೆದಿತ್ತು.

Share this article