ಹೊನ್ನಾವರ: ತಾಲೂಕಿನ ಮಂಕಿಯಲ್ಲಿ ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೊರ್ವ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.ಮೃತ ವ್ಯಕ್ತಿ ಮಂಕಿಯ ವಿಜಯ ಆಸಿಸ್ ಡಾಯಸ್(43) ಎಂದು ಗುರುತಿಸಲಾಗಿದೆ. ಅವರು ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಮಂಕಿ ಗ್ರಾಮದಲ್ಲಿ ಬೇರೆ ಜಮೀನಿನಲ್ಲಿ ಬೆಳೆದಿರುವ ತೆಂಗಿನ ಮರ ಮತ್ತು ಅಡಕೆ ಮರಗಳನ್ನು ಹತ್ತಿ ಕಾಯಿ ಕಿತ್ತುಕೊಟ್ಟು ಅದರಿಂದ ಬಂದ ಹಣದಲ್ಲಿ ತನ್ನ ಕುಟುಂಬದ ನಿರ್ವಹಣೆಯನ್ನು ಮಾಡಿಕೊಂಡುಬಂದಿದ್ದರು.
ಭಾನುವಾರ ಮಂಕಿ ತಾಳಮಕ್ಕಿಯಲ್ಲಿರುವ ಮಾಬಳೇಶ್ವರ ಪುರುಸಯ್ಯ ನಾಯ್ಕ ಅವರ ಮನೆ ಕಾಂಪೌಂಡ್‌ನಲ್ಲಿರುವ ತೆಂಗಿನ ಮರವನ್ನು ಹತ್ತಿ ಕಡಕಮಣೆಯ ಮೇಲೆ ಕುಳಿತು ಕತ್ತಿಯಿಂದ ಒಣಗಿದ ಕಾಯಿಯನ್ನು ತೆಗೆಯುತ್ತಿದ್ದರು. ಕಡಕಮಣೆಯ ಕಟ್ಟಿಗೆ ತುಂಡು ಆಕಸ್ಮಾತ ತುಂಡಾಗಿದೆ. ಆಯತಪ್ಪಿ ಸುಮಾರು 40 ಅಡಿ ಎತ್ತರದ ತೆಂಗಿನ ಮರದಿಂದ ನೆಲದ ಮೇಲೆ ಬಿದ್ದಿದ್ದಾರೆ. ತಲೆ ಮತ್ತು ಮೈಯಲ್ಲಿ ಒಳಪೆಟ್ಟಾಗಿ ಮೂಗು ಮತ್ತು ಬಾಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಈ ಬಗ್ಗೆ ಮೃತರ ಚಿಕ್ಕಪ್ಪ ಪೇಲಿಜ ಸಾವೇರ ಡಾಯಸ್ ಅವರು ಮಂಕಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇಬ್ಬರು ಬಾಲಕಿಯರು ನಾಪತ್ತೆಶಿರಸಿ: ನಗರದ ಗೋಸಾವಿಗಲ್ಲಿಯ ಬಾಲಕಿಯರಿಬ್ಬರು ಕಾಣೆಯಾದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಲ್ಲಿನ ಗಣೇಶನಗರದ ಗೋಸಾವಿಗಲ್ಲಿಯ ೭ನೇ ತರಗತಿ ವಿದ್ಯಾರ್ಥಿನಿ ಸಂಜನಾ ಯುವರಾಜ ಗೋಸಾವಿ(14), ೩ನೇ ತರಗತಿಯ ಅರ್ಚನಾ ತಂದೆ ದಶರಥ ಗೋಸಾವಿ(೧೨) ನಾಪತ್ತೆಯಾದ ಬಾಲಕಿಯರಾಗಿದ್ದಾರೆ.
ಮೇ 11ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಗಣೇಶನಗರದ ಗೋಸಾವಿಗಲ್ಲಿಯಲ್ಲಿರುವ ಮನೆಯಲ್ಲಿ ಕಲಿಯುತ್ತಿರುವ ಕಾರವಾರದ ಬಾಲಮಂದಿರಕ್ಕೆ ಹೋಗುವುದಾಗಿ ಹೇಳಿ ಹೋದವರಿಗೆ ಯಾರೋ ಆರೋಪಿತರು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದು, ಅಪಹರಣ ಮಾಡಿಕೊಂಡು ಹೋದ ಮಗಳಿಗೆ ಹಾಗೂ ಮೈದುನನ ಮಗಳಿಗೆ ಪತ್ತೆ ಮಾಡಿ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶೋಭಾ ಯುವರಾಜ ಗೋಸಾವಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.