ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಮ್ಮ ಕಲೆಗೆ ಪ್ರಕೃತಿಯೆ ಸ್ಪೂರ್ತಿ, ಅದಕ್ಕಿಂತ ದೊಡ್ಡದು ಯಾವುದು ಇಲ್ಲ ಎಂಬುದಕ್ಕೆ ಮಳೆ ಮತ್ತು ಬರಗಾಲದ ರೂಪದಲ್ಲಿ ನಮ್ಮ ಮುಂದೆ ಬರುತ್ತಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.ಇಲ್ಲಿನ ಈಡಿಗರ ಭವನದಲ್ಲಿ ಭಾನುವಾರ ಧೀರ ದೀವರ ಬಳಗ, ಹಳೇಪೈಕಿ ದೀವರ ಸಂಸ್ಕೃತಿ ಸಂವಾದ ಬಳಗದಿಂದ ಆಯೋಜಿಸಿದ್ದ ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿದತ್ತ ಸಂಪತ್ತಿನ ಒಳಗೆ ಜಾನಪದ ಕಲೆಗಳು ಮತ್ತು ನಮ್ಮ ಮುಂದಿನ ಪೀಳಿಗೆ ನೋಡುವ ಶಕ್ತಿ, ಯುಕ್ತಿ, ಮಾರ್ಗದರ್ಶನ ಎಲ್ಲವೂ ಪ್ರಕೃತಿಯಲ್ಲಿದೆ ಎಂದರು.
ನಮ್ಮ ಚಿತ್ತಾರ ಕಲೆ, ಬುದ್ಧಿವಂತಿಕೆ ಸಂಸ್ಕೃತಿಯನ್ನು ಕಲಿತಿರುವುದು ಈ ಪ್ರಕೃತಿಯಿಂದಲೆ. ಅಕ್ಷರ ಕಲಿಯುವುದಕ್ಕಿಂತ ಮೊದಲು ಮಾತುಗಳು ಬರುತ್ತಿದ್ದವು. ಅದಕ್ಕಿಂತ ಮೊದಲು ಸ್ವರ ಜ್ಞಾನವನ್ನು ದೇವರು ಸ್ವಾಭಾವಿಕವಾಗಿ ನೀಡಿದ್ದ. ಒಳ್ಳೆಯದು, ಕೆಟ್ಟದ್ದು ತೂಗುವ ಶಕ್ತಿ ಮನುಷ್ಯನಿಗಿದೆ. ಆದರೆ ಅದನ್ನು ಕಲಿತಿದ್ದು ಮಾತ್ರ ಮಾತು ಬರದಿರುವ ಪ್ರಾಣಿ-ಪಕ್ಷಿ ಹಾಗೂ ಪ್ರಕೃತಿಯಿಂದ, ನದಿಯಿಂದ, ನೀರಿನ ನಿಶ್ಯಬ್ದತೆಯಿಂದ ಎಂದು ಹೇಳಿದರು.ಕಲೆಗಳು ಇಂದಿಗೂ ಸಹಿತ ನಮ್ಮ ಪ್ರಕೃತಿಯಲ್ಲಿ ಅಡಗಿವೆ. ಪ್ರಕೃತಿ ರೌದ್ರತೆ, ಶಾಂತವಾಗಿಯೂ ಇದೆ. ಆದ್ದರಿಂದ ಈ ಕಾರ್ಯಕ್ರಮವನ್ನು ಮುಂದಿನ ಪೀಳಿಗೆಗೆ ಹೋಗಬೇಕು ಎನ್ನುವ ಪ್ರಯತ್ನ ಅಭೂತಪೂರ್ವ. ಮನುಷ್ಯ ಸ್ವಾರ್ಥಿಯಾದ ಮೇಲೆ ಸಂಪ್ರದಾಯಗಳು ನಮಗೆ ಮಾತ್ರ ಎಂಬ ಭಾವನೆ ಬಂದಿದೆ. ಇದನ್ನು ಬಿಡಬೇಕು. ಸಮಾಜದ ಅನೇಕ ನಾಯಕರು ಸಮಾಜದ ಜೊತೆಗಿದ್ದು, ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಧೀರರ ಸಾಂಸ್ಕೃತಿಕ ವೈಭವದ ಸಂಚಾಲಕ ನಾಗರಾಜ ನೇರಿಗೆ ಪ್ರಾಸ್ತವಿಕವಾಗಿ ಮಾತಾಡಿದರು. ರಾಜಪ್ಪ ಮಾಸ್ತರ್, ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ್, ಚಲನಚಿತ್ರ ನಿರ್ದೇಶಕ ರಾಜಗುರು, ಧೀರ ದೀವರ ಬಳಗದ ಸಂಚಾಲಕ ಸುರೇಶ್ ಬಾಳೆಗುಂಡಿ, ಗಣಪತಿಯಪ್ಪ ಮಡೆನೂರು, ಕಣ್ಣೂರು ಟಾಕಪ್ಪ, ಲಕ್ಷ್ಮೀ ಗಡೆಮನೆ, ಮೋಹನ್ ಚಂದ್ರಗುತ್ತಿ, ತಬಲಿ ಬಂಗಾರಪ್ಪ, ಶ್ರೀಧರ್ ಹುಲ್ತಿಕೊಪ್ಪ, ಗೀತಾಂಜಲಿ ದತ್ತಾತ್ರೇಯ, ಐಎಎಸ್ ಅಧಿಕಾರಿ ಜಿ.ಜಗದೀಶ್, ಪುರುಷೋತ್ತಮ್, ಲಕ್ಷ್ಮಣ್ ಕೊಡಸೆ, ಜಿಪಂ ಉಪಕಾರ್ಯದರ್ಶಿ ಕೆ.ಆರ್.ಸುಜಾತಾ ಮತ್ತಿತರರು ಇದ್ದರು.ಸಚಿವ ಮಧು ಬಂಗಾರಪ್ಪರನ್ನು ಹೊಗಳಿದ ಕುಮಾರ್ ಬಂಗಾರಪ್ಪ
ನಮ್ಮ ಸಮಾಜದ ನನ್ನ ತಮ್ಮನೆ ಜಿಲ್ಲೆಗೆ ಸಚಿವರಾಗಿದ್ದಾರೆ. ಇದು ಸಂತೋಷದ ವಿಷಯ. ಅವರಿಂದ ನಮ್ಮ ಸಮಾಜಕ್ಕೆ, ಜಿಲ್ಲೆಗೆ ಸೇವೆ ಆಗಬೇಕು. ಅವರ ಅಧಿಕಾರವಧಿಯಲ್ಲಿ ದೀವರ ಸಮಾಜಕ್ಕೆ ಮಾತ್ರವಲ್ಲದೆ ಇಡೀ ಜಿಲ್ಲೆಗೆ ಅವರ ಕೊಡುಗೆ ಸಿಗಲಿ ಎಂದು ಆಶಿಸಿದರು. ಮುಂದಿನ ದಿನಗಳಲ್ಲಿ ಅರ್ಧಕ್ಕೆ ನಿಂತಿರುವ ಸಮಾಜದ ಸಮುದಾಯ ಭವನಗಳ ಅಭಿವೃದ್ಧಿಯನ್ನು ಸರ್ಕಾರ ಮಾಡಲಿ. ವಿದ್ಯಾರ್ಥಿ ನಿಲಯ, ನಾರಾಯಣಗುರು ವಸತಿ ಶಾಲೆಗಳನ್ನು ಮುಂದುವರೆಸಲಿ. ಮೀಸಲಿನ ಹಕ್ಕುಗಳು ಸಿಗುವಂತಾಗಲಿ ಎಂದರು.