ಮನುಷ್ಯನಿಗೆ ಮುಕ್ತಿ ಪಡೆಯುವುದು ಗುರಿಯಾಗಬೇಕು: ನಿರ್ಮಲಾನಂದನಾಥ ಶ್ರೀಗಳು

KannadaprabhaNewsNetwork | Published : Mar 19, 2024 12:51 AM

ಸಾರಾಂಶ

ಮುಕ್ತಿ ಎಂಬ ಪರಮಧ್ವಜವನ್ನು ನೆಟ್ಟ ಮೇಲೆ ಅದರ ಕಡೆಗೆ ಸಾಧನೆ ಪ್ರಾರಂಭವಾಗಬೇಕು. ಮುಕ್ತಿಯ ಗುರಿ ತಲುಪಬೇಕೆಂದರೆ ಹಲವು ಆಚರಣೆಗಳನ್ನು ಮಾಡಬೇಕು. ಬದುಕಿನಗಮ್ಯವನ್ನು ತಲುಪಲಿಕ್ಕೋಸ್ಕರ ಧರ್ಮಧ್ವಜ ಸ್ಥಾಪಿಸಿ ಆರಂಭಿಸಿರುವ 9 ದಿನಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲಮನುಷ್ಯ ಭೂಮಿ ಮೇಲೆ ಹುಟ್ಟಿ ಬಂದ ಮೇಲೆ ಅವನ ಪಯಣ ಅಜ್ಞಾನದಿಂದ ಪ್ರಾರಂಭವಾಗಿ ಸುಜ್ಞಾನದ ಕಡೆಗೆ ಹೋಗಿ ಮುಕ್ತಿ ಪಡೆಯುವುದು ಗುರಿಯಾಗಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಶ್ರೀಗಳು ತಿಳಿಸಿದರು.

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಧರ್ಮಧ್ವಜ ಸ್ಥಾಪನೆ ಮತ್ತು ನಾಂದಿ ಪೂಜೆ ಮೂಲಕ 9 ದಿನಗಳ ಕಾಲ ನಡೆಯುವ ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಬೆಳಗ್ಗೆ ಚಾಲನೆ ನೀಡಿದ ನಂತರ ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಮುಕ್ತಿ ಎಂಬ ಪರಮಧ್ವಜವನ್ನು ನೆಟ್ಟ ಮೇಲೆ ಅದರ ಕಡೆಗೆ ಸಾಧನೆ ಪ್ರಾರಂಭವಾಗಬೇಕು. ಮುಕ್ತಿಯ ಗುರಿ ತಲುಪಬೇಕೆಂದರೆ ಹಲವು ಆಚರಣೆಗಳನ್ನು ಮಾಡಬೇಕು. ಬದುಕಿನಗಮ್ಯವನ್ನು ತಲುಪಲಿಕ್ಕೋಸ್ಕರ ಧರ್ಮಧ್ವಜ ಸ್ಥಾಪಿಸಿ ಆರಂಭಿಸಿರುವ 9 ದಿನಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದರು.

ಒಂದೊಂದು ರಾಷ್ಟ್ರಕ್ಕೆ ತನ್ನದೇ ಆದ ಸಂಸ್ಕೃತಿ ಮತ್ತು ನಾಗರೀಕತೆ ಇರುತ್ತದೆ. ಯಾವ ದೇಶದ ನಾಗರೀಕತೆಗಳು ಶ್ರೇಷ್ಠ ಎಂದು ಹೇಳಲು ಹೊರಟರೆ ನಮ್ಮ ಅಪ್ಪ ಅಮ್ಮನೇ ಶ್ರೇಷ್ಠ ಎನ್ನುತ್ತೇವೆ. ಅದೇ ರೀತಿ ಪೋಷಕರಿಗೆ ತಮ್ಮ ಮಕ್ಕಳೇ ಶ್ರೇಷ್ಠರಾಗಿರುತ್ತಾರೆ ಎಂದರು.

ಜಗತ್ತಿನಲ್ಲಿ ಹಲವು ಸಂಸ್ಕೃತಿಗಳು ಇಂದಿನ ಪರಿಸ್ಥಿತಿಗೆ ತಮ್ಮದೇ ಆದ ಕೊಡುಗೆಗಳನ್ನು ಕೊಟ್ಟಿವೆ. ಗ್ರೀಕ್, ಚೈನಾ, ಈಜಿಫ್ಟ್, ಸಿಂಧೂ ಹಿಂದೂ ನಾಗರೀಕತೆಗಳಿರಬಹುದು ಎಲ್ಲಾ ದೇಶಗಳೂ ಸಹ 450 ಕೋಟಿ ವರ್ಷಗಳ ಇತಿಹಾಸವುಳ್ಳ ಈ ಭೂಮಿಯ ಮೇಲೆ ಮನುಷ್ಯ ಹುಟ್ಟಿದ ನಂತರದಲ್ಲಿ ಹಲವಾರು ನಾಗರೀಕತೆಗಳನ್ನು ಕಂಡಿದೆ ಎಂದರು.

ಎಷ್ಟೋ ನಾಗರೀಕತೆಗಳು ಶಿಖರಪ್ರಾಯವಾಗಿ ಬೆಳೆದು ಅಷ್ಟೇ ಅದಃಪತನವನ್ನೂ ಕೂಡ ತಲುಪಿವೆ. ಆದರೆ, ಎತ್ತರಕ್ಕೆ ಬೆಳೆದು ಬೇರೆಯವರ ದಬ್ಬಾಳಿಕೆಯ ನಡುವೆಯೂ ಸಹ ಅಷ್ಟೇ ಜಟನವಾಗಿ ಉಳಿಸಿ ಬೆಳೆಸಿಕೊಂಡು ಬಂದಿರುವ ನಮ್ಮನಾಗರೀಕತೆ ಬಹಳ ಇಷ್ಟವಾಗುತ್ತದೆ ಎಂದರು.

ಇಂತಹ ನಾಗರೀಕತೆಯ ತೊಟ್ಟಿಲಿನಲ್ಲಿ ಬೆಳೆದಿರುವ ನಮ್ಮ ನಿಮ್ಮೆಲ್ಲರಿಗೂ ಒಂದಿಷ್ಟು ಶಕ್ತಿ ಬರಬೇಕೆಂದರೆ ನಾವು ಸೇವಿಸುವ ಆಹಾರ ಸಂಸ್ಕೃತಿ ಉತ್ತಮವಾಗಿರಬೇಕು. ಮುಕ್ತಿಯ ಗುರಿ ತಲುಪಬೇಕೆಂದರೆ ಹಲವಾರು ಆಚರಣೆಗಳನ್ನು ಮಾಡಬೇಕು. ಈ ಆಚರಣೆಗಳನ್ನು ನಾವು ಚಾಚೂ ತಪ್ಪದೆ ಆಚರಸಿದ್ದೇ ಅದರೆ ಒಂದು ದಿನ ಧರ್ಮಧ್ವಜ ಮಾನಸಿಕ ಸಂಕಲ್ಪವಾಗಿ ಅನುಷ್ಠಾನಗೊಳ್ಳುತ್ತದೆ. ಧರ್ಮಧ್ವಜ ಸ್ಥಾಪಿಸಿದ 9ನೇ ದಿನ ಅವಭೃತ ಸ್ನಾನ ಮಾಡಿದರೆ ನಮ್ಮಉದ್ದೇಶ ಸಾಕಾರವಾಗುತ್ತದೆ ಎಂದರು.

ದೇಹ ಉತ್ತಮವಾಗಿದ್ದರೆ ಧರ್ಮ ಸಾಧನೆ ಮಾಡಲು ಸಾಧ್ಯವೆಂಬ ಕಾರಣಕ್ಕೆ ಹಲವು ಬಗೆಯ ಆಟೋಟಗಳು, ಒಳ್ಳೆಯ ಮನಸ್ಸಿರಬೇಕೆಂಬ ಕಾರಣಕ್ಕೆ ಧಾರ್ಮಿಕ ಮತ್ತು ಸರ್ವಧರ್ಮದ ಕಾರ್ಯಕ್ರಮಗಳು, ಸೇವೆಯನ್ನು ಭಾಗವಾಗಿಟ್ಟುಕೊಂಡು ಜ್ಞಾನ, ಉಪಾಸನಾ ಕಾರ್ಯಕ್ರಮಗಳು ಸೇರಿದಂತೆ ಹಲವು ಬಗೆಯ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಈ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಲಾಗಿದೆ. 9 ದಿನಗಳ ಈ ಜಾತ್ರಾ ಮಹೋತ್ಸವ ಅತ್ಯಂತ ಯಶಸ್ವಿಯಾಗಲೆಂದು ಆಶಿಸಿದರು.

ಈ ವೇಳೆ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶ್ರೀಮಠದ ಚೈತನ್ಯನಾಥ ಸ್ವಾಮೀಜಿ, ದೇವಾಲಯ ಸಂವರ್ಧನ ಸಮಿತಿಯ ಸಂಯೋಜಕ ಮನೋಹರ್‌ ಮಠದ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎ. ಶೇಖರ್, ಪುಟ್ಟರಂಗಪ್ಪ ಸೇರಿದಂತೆ ವಿವಿಧ ಶಾಖಾಮಠಗಳ ಶ್ರೀಗಳು ಮತ್ತು ಶ್ರೀಮಠದ ಭಕ್ತರು ಪಾಲ್ಗೊಂಡಿದ್ದರು.

Share this article