ಕನ್ನಡಪ್ರಭ ವಾರ್ತೆ ಮೈಸೂರುದೇಶದಲ್ಲಿ ಮೂರು ಸಾವಿರ ವರ್ಷದ ಇತಿಹಾಸವಿರುವ ವೇದ, ಶಾಸ್ತ್ರ, ಪುರಾಣ, ಆಗಮವೆಂಬ ವೈದಿಕ ಸಂಸ್ಕೃತಿಯ ವಿರುದ್ಧ ಹೋರಾಡಿದ್ದು ಬಸವ ಧರ್ಮ ಎಂದು ವಿಮರ್ಶಕ ರಂಜಾನ್ ದರ್ಗಾ ಹೇಳಿದರು.ಮಾನಸ ಗಂಗೋತ್ರಿಯ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಅಧ್ಯಯನ ಹಾಗೂ ವಿಸ್ತರಣ ಕೇಂದ್ರ ಆಯೋಜಿಸಿರುವ ಮಹಾಮನೆ ಪ್ರಾರಂಭೋತ್ಸವ ಮತ್ತು ಸರಣಿ ಉಪನ್ಯಾಸ ಮಾಲಿಕೆಯ ಉದ್ಘಾಟನೆಯಲ್ಲಿ ವೇದ, ಶಾಸ್ತ್ರ, ಪುರಾಣ, ಆಗಮ ಕುರಿತ ಶರಣರ ಚಿಂತನೆಗಳು ಕುರಿತು ಅವರು ಮಾತನಾಡಿದರು. ಲೋಕಾಯತ, ಬೌದ್ಧ ಧರ್ಮವನ್ನು ಮನು ಸಂಸ್ಕೃತಿ ಇಲ್ಲವಾಗಿಸಿತು. ಲೋಕಾಯತ ಸಾಹಿತ್ಯ ದೇವಿಪ್ರಸಾದ ಚಟ್ಟೋಪಾಧ್ಯಾಯ ಬರುವವರೆಗೂ ಸಿಕ್ಕಿರಲೇ ಇಲ್ಲ. ದೇಶದಲ್ಲಿ ನಾಶಗೊಂಡಿದ್ದ ಬೌದ್ಧ ಸಾಹಿತ್ಯ ಸಿಕ್ಕಿದ್ದು ನೇಪಾಳ, ಟಿಬೆಟ್, ಶ್ರೀಲಂಕಾದಲ್ಲಿ. ಒಳಗೊಳ್ಳುವ ಲೋಕಾಯತ, ಬೌದ್ಧ, ಲಿಂಗಾಯತ ಧರ್ಮದ ವಿರುದ್ಧ ಹೊರಹಾಕುವ ಸಂಸ್ಕೃತಿಯವರು ಶಸ್ತ್ರ ಹೋರಾಟ ನಡೆಸಿದ್ದಾರೆ. ಹೀಗಾಗಿಯೇ 12ನೇ ಶತಮಾನದಲ್ಲಿ ಲಕ್ಷದ ತೊಂಬತ್ತಾರು ಸಾವಿರ ಶರಣರು ಜೀವ ಉಳಿಸಿಕೊಳ್ಳಲು ಹರಿದು ಹಂಚಿ ಹೋಗಬೇಕಾಯಿತು ಎಂದು ಅವರು ಉದಾಹರಿಸಿದರು.ಮಹಾಭಾರತ ಯುದ್ಧ ಬೇಡವೆಂದ ಲೋಕಾಯತರ ಮಾತನ್ನು ಕೌರವರು ಹಾಗೂ ಪಾಂಡವರು ಕೇಳಲಿಲ್ಲ. ಗೆದ್ದವರು ಲೋಕಾಯತರನ್ನೇ ನಾಶಗೊಳಿಸಿದರು. ಬೌದ್ಧ ಬಿಕ್ಕುಗಳನ್ನು, 12ನೇ ಶತಮಾನದಲ್ಲಿ ಶರಣರನ್ನೂ ಕೊಲೆ ಮಾಡಿದ್ದು ಮನು ಸಂಸ್ಕೃತಿ ಎಂದರು.ಜಗತ್ತಿನಲ್ಲಿ ವೈಜ್ಞಾನಿಕವಾದ, ಬಯಲು ತತ್ವ ಪ್ರತಿಪಾದಿಸಿದ ಬಸವ ಧರ್ಮಕ್ಕೆ ಗಡಿರೇಖೆಗಳಿಲ್ಲ. ಅದು ಎಲ್ಲರನ್ನೂ ಒಳಗೊಳ್ಳುವ ಧರ್ಮ. ಒಳಗೊಳ್ಳುವ ಹಾಗೂ ಹೊರಹಾಕುವ ಎಂಬ ಎರಡು ಸಂಸ್ಕೃತಿಗಳಿವೆ. ಇವುಗಳಿಗೆ ಸಾವಿರಾರು ಭಾಗಗಳಿವೆ. ಅದರಲ್ಲಿ ಕಲಾವಿದರು, ವಿಜ್ಞಾನಿಗಳು, ರಾಜನೀತಿಜ್ಞರೂ ಇದ್ದಾರೆ ಎಂದರು.ಇತಿಹಾಸದುದ್ದಕ್ಕೂ ಶಾಸ್ತ್ರದ ಮಾತನ್ನು ಶಸ್ತ್ರ ಕೇಳುತ್ತದೆ. ಶಾಸ್ತ್ರವನ್ನು ಹೇಳುವವರು ಯಾರು? ವೈದಿಕರೇ ಆಗಿರುತ್ತಾರೆ. ಸಾಂಸ್ಕೃತಿಕ ಸಂಘರ್ಷಗಳ ಮಂಥನದಲ್ಲಿ ಒಡಮೂಡಿದ್ದೇ ಅಂಬೇಡ್ಕರರ ಸಂವಿಧಾನ. ಲೋಕಾಯತರು ಭೂಮಿ ಹಸನು ಮಾಡಿದರೆ, ಗೌತಮ ಬುದ್ಧ ಬೀಜ ಬಿತ್ತಿದ, ಬಸವಣ್ಣ ನೀರು ಹಾಯಿಸಿದ, ಸಂವಿಧಾನದ ಫಲವನ್ನು ಅಂಬೇಡ್ಕರ್ ನೀಡಿದ್ದಾರೆ ಎಂದು ಅವರು ವಿಶ್ಲೇಷಿಸಿದರು.ಮೈ,ಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಸಂದರ್ಶಕ ಪ್ರಾಧ್ಯಾಪಕ ಡಾ. ಅರವಿಂದ ಮಾಲಗತ್ತಿ, ಡಾ ಮೈಲಹಳ್ಳಿ ರೇವಣ್ಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ ಇದ್ದರು.