- ಹೊಸ ಕಳೆಗಟ್ಟಿದ್ದ ಚಿತ್ರಸಂತೆ- ತಮಗಿಷ್ಟದ ಚಿತ್ರ ಖರೀದಿಸಿದ ಚಿತ್ರ ರಸಿಕರುಕನ್ನಡಪ್ರಭ ವಾರ್ತೆ ಮೈಸೂರು
ಪ್ರವಾಸೋದ್ಯಮ ಇಲಾಖೆಯು ಮೈಸೂರು ಹಬ್ಬದ ಭಾಗವಾಗಿ ಆಯೋಜಿಸಿದ್ದ ಚಿತ್ರಸಂತೆಯು ಗಂಗೋತ್ರಿಗೆ ಹೊಸ ಕಳೆ ಕಟ್ಟಿಕೊಟ್ಟಿತು. ಚಿತ್ರ ಸಂತೆ ವೀಕ್ಷಿಸಲು ಸೇರಿದ್ದ ಚಿತ್ರಕಲಾ ರಸಿಕರು, ವರ್ಣಮಯ ಚಿತ್ರಗಳನ್ನು ಕಣ್ತುಂಬಿಕೊಂಡರು. ತಮಗಿಷ್ಟವಾದ ಚಿತ್ರಗಳನ್ನು ಖರೀದಿಸಿದರು. ಮತ್ತೆ ಕೆಲವರು ತಮ್ಮ ಚಿತ್ರವನ್ನು ತಾವೇ ಬಿಡಿಸಿಕೊಂಡು ಖುಷಿಪಟ್ಟರು.
ವರ್ಣಮಯ ಚಿತ್ರಗಳು, ಕಪ್ಪು ಬಿಳುಪಿನ ಚಿತ್ರಗಳನ್ನು ನೋಡಿದ ಸಾರ್ವಜನಿಕರು ಒಂದೊಂದೇ ಫೋಟೋವನ್ನು ಖರೀದಿಸತೊಡಗಿದರು. ಅನೇಕಾರು ಕಲಾವಿದರು ಮೈಸೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು.ಉಡುಪಿಯ ರೂಪಾ ವಸುಂಧರ ಆಚಾರ್ಯ ಅವರು ಕಸದಲ್ಲಿಯೂ ಚಿತ್ರ ಅರಳಿರಿಸಿದ್ದು ಗಮನ ಸೆಳೆಯಿತು. ಒಣಗಿದ ಎಲೆ, ಹೂಗಳನ್ನು ಬಳಸಿಕೊಂಡು ನವಿಲು, ಗಿಡ, ಮರ, ಪರಿಸರ, ಸಾಗರ, ಸರೋವರ ಸೇರಿದಂತೆ ನಾನಾ ಕಲಾಕೃತಿಗಳನ್ನು ನಿರ್ಮಿಸಿ ಪ್ರದರ್ಶನಕ್ಕಿರಿಸಿದ್ದರೆ ಬುಡಕಟ್ಟು ಕಲೆಯ ಭಾಗವಾದ ಟೊಟಮ್ಸ್ ಮಾದರಿಯ ಕಲಾಕೃತಿಗಳನ್ನು ಬೆಂಗಳೂರಿನ ಬಿ.ಎನ್. ನಾಗರಾಜು ನಿರ್ಮಿಸಿದ್ದರು.
ಕಲಾವಿದೆ ವೀಣಾ ಚಂದನ್ ಅವರು ಮೈಸೂರು ಪಾರಂಪರಿಕ, ಗಂಜೀಫ, ಮಧು ಬನಿ, ತಂಜವೂರು ಪೇಟಿಂಗ್, ಪಟ್ ಚಿತ್ರ, ರಾಜಸ್ತಾನಿ ಪೈಟಿಂಗ್, ವರ್ಲಿ ಚಿತ್ರ, ಕೇರಳದ ಮ್ಯೂರಲ್ ಸೇರಿದಂತೆ 20ಕ್ಕೂ ಹೆಚ್ಚು ಚಿತ್ರ ಕಲಾ ಮಾದರಿಯ 100ಕ್ಕೂ ಹೆಚ್ಚು ಚಿತ್ರಪಟಗಳನ್ನು ಸಂತೆಯಲ್ಲಿ ಪ್ರದರ್ಶನಕ್ಕೆ ಇರಿಸಲಾಗಿತ್ತು.
ಚಿತ್ರ ಸಂತೆ ವೀಕ್ಷಣೆಗೆ ಆಗಮಿಸಿದ್ದ ಕಲಾ ರಸಿಕರು, ತಮಗಿಷ್ಟವಾದ ಚಿತ್ರಗಳನ್ನು ಖರೀದಿಸುವದರೊಂದಿಗೆ ತಮ್ಮ ಚಿತ್ರಗಳನ್ನು ಕಲಾವಿದರ ಕುಂಚದಲ್ಲಿ ಚಿತ್ರಿಸಿಕೊಂಡು ಸಂಭ್ರಮದಿಂದ ತೆರಳಿದ್ದು ಸಾಮಾನ್ಯವಾಗಿತ್ತು.
ರೇಷ್ಮೆ ಸೀರೆ, ತಿಂಡಿ ತಿನಿಸು
ಸಮೀಪದಲ್ಲಿಯೇ ಫುಡ್ ಕೋರ್ಟ್ನಲ್ಲಿ ಮೇಲುಕೋಟೆ ಪುಳಿಯೋಗರೆ, ಬುಡಕಟ್ಟು ಶೈಲಿಯ ಬೊಂಬು ಬಿರಿಯಾನಿ ಸೇರಿದಂತೆ ತರಹೆವಾರಿ ತಿನಿಸುಗಳು ಕೂಡ ಲಭ್ಯವಿತ್ತು.