ಕನ್ನಡಪ್ರಭ ವಾರ್ತೆ ಮಂಡ್ಯ
೨೦೨೪- ೨೫ನೇ ಸಾಲಿನಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಸುಮಾರು ೩೩ ಕೋಟಿ ರು. ನಷ್ಟದಲ್ಲಿರುವುದು ಕಂಡುಬಂದಿದೆ. ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರು ಹೊರಡಿಸಿರುವ ಟಿಪ್ಪಣಿಯಲ್ಲಿ ಈ ಅಂಶ ದಾಖಲಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.೨೧.೦೨.೨೦೨೫ರಂದು ಕಾರ್ಖಾನೆಯ ೨೦೨೫- ೨೬ನೇ ಸಾಲಿನ ಕಬ್ಬು ನುರಿಸುವ ಸಂಬಂಧ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಭೆಯ ನಡವಳಿಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳು ಸಹಿ ಮಾಡಿ ಅಧ್ಯಕ್ಷರಿಗೆ ಮಾಹಿತಿಯನ್ನು ಸಲ್ಲಿಸಿದ್ದಾರೆ.
ಈ ಮಾಹಿತಿಯಲ್ಲಿ ೨೦೨೪- ೨೫ನೇ ಸಾಲಿನ ಕಬ್ಬು ನುರಿಸುವ ಹಂಗಾಮು ೨೪ ನವೆಂಬರ್ ೨೦೨೪ರಂದು ಮುಕ್ತಾಯಗೊಂಡಿದ್ದು, ೨೦೨೪- ೨೫ನೇ ಸಾಲಿನ ಮೆ.ಆರ್.ಬಿ.ಟೆಕ್‌ರವರ ಪ್ರಗತಿಯ ಬಗ್ಗೆ ತಾಂತ್ರಿಕ ಮುಖ್ಯಸ್ಥರೊಂದಿಗೆ ಚರ್ಚಿಸಿದಾಗ ಸುಮಾರು ೩೩ ಕೋಟಿ ರು. ನಷ್ಟವಾಗಿರುವುದು ಕಂಡುಬಂದಿರುತ್ತದೆ ಎಂದು ತಿಳಿಸಿರುವುದನ್ನು ದಾಖಲಿಸಲಾಗಿದೆ.೨೦೨೫- ೨೬ನೇ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ಪ್ರಾರಂಭಿಸಲು ಮೆ.ಆರ್.ಬಿ.ಟೆಕ್‌ನವರನ್ನು ಮುಂದುವರಿಸುವ ಸಂಬಂಧ ಸುದೀರ್ಘವಾಗಿ ಚರ್ಚಿಸಿ ತೀರ್ಮಾನಿಸಿ ಪರಿಶೀಲಿಸಬೇಕಿರುತ್ತದೆ ಎಂದು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ರೈತಸಂಘಟನೆಗಳು ಹಾಗೂ ಸಕ್ಕರೆ ಸಚಿವರು ಆರ್.ಬಿ.ಟೆಕ್‌ನವರ ಪ್ರಗತಿ ಬಗ್ಗೆ ಹಲವಾರು ಬಾರಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಅದೂ ಅಲ್ಲದೆ ೨೫ ಕೋಟಿ ರು. ದುಡಿಯುವ ಬಂಡವಾಳವನ್ನು ಪಡೆಯುವ ಸಂಬಂಧ ಸರ್ಕಾರಕ್ಕೆ ತಾವುಗಳು ಸಲ್ಲಿಸಿರುವ ಮಾಹಿತಿಗೆ ನನ್ನ ಒಪ್ಪಿಗೆಯನ್ನು ಪಡೆದಿರುವುದಿಲ್ಲವೆಂದು ಅಧ್ಯಕ್ಷರು ಬೇಸರ ವ್ಯಕ್ತಪಡಿಸಿರುವುದು ಕಂಡುಬಂದಿದೆ.
ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಗಮನಕ್ಕೂ ತರಲಾಗಿ ಅವರೂ ಅಸಹನೆಯನ್ನು ವ್ಯಕ್ತಪಡಿಸಿದ್ದು, ಸದ್ಯಕ್ಕೆ ಸರ್ಕಾರವು ಮೈಷುಗರ್ ಕಾರ್ಖಾನೆಗೆ ದುಡಿಯುವ ಬಂಡವಾಳವನ್ನು ಮಂಜೂರು ಮಾಡುವ ಪರಿಸ್ಥಿತಿಯಲ್ಲಿ ಇಲ್ಲವೆಂದು ಹೇಳಿರುತ್ತಾರೆ. ತುರ್ತಾಗಿ ಆರ್.ಬಿ.ಟೆಕ್ ಜೊತೆಗೆ ಕಂಪನಿಯ ಅಧ್ಯಕ್ಷರನ್ನೂ ಸಭೆಗೆ ಕರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.ಅಂತಿಮವಾಗಿ ಯಾವುದೇ ರೀತಿಯ ಆರ್ಥಿಕ ವ್ಯವಹಾರ ನಡೆಯಬಾರದೆಂದು ೨೨.೧.೨೦೨೫ರಂದು ಮುಖ್ಯ ಹಣಕಾಸು ಅಧಿಕಾರಿಗೆ ಕಂಪನಿಯ ನೌಕರರ ವೇತನವನ್ನು ಹೊರತುಪಡಿಸಿ ಉಳಿದ ಎಲ್ಲಾ ಆರ್ಥಿಕ ವ್ಯವಹಾರಗಳಿಗೆ ಧನಾದೇಶವನ್ನು ನೀಡುವುದಕ್ಕೆ ಮುಂಚಿತವಾಗಿ ಕಡ್ಡಾಯವಾಗಿ ಕಂಪನಿಯ ಅಧ್ಯಕ್ಷರ ಕಚೇರಿಗೆ ಮಾಹಿತಿ ಸಲ್ಲಿಸುವಂತೆ ಸೂಚಿಸಲಾಗಿರುತ್ತದೆ. ಇದನ್ನು ಮೀರಿ ಯಾರಾದರೂ ನಿರ್ಣಯ ಕೈಗೊಂಡಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಿ ಕ್ರಮ ಜರುಗಿಸುವುದು ಮತ್ತು ಮರುಪಾವತಿಗೆ ಸರ್ಕಾರಕ್ಕೆ ವರದಿ ನೀಡಬೇಕಾಗುತ್ತದೆ ಎಂದು ಟಿಪ್ಪಣಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಆರ್.ಬಿ.ಟೆಕ್ ಕಂಪನಿ, ಆಡಳಿತ ಮಂಡಳಿ ನಡುವೆ ಒಳಒಪ್ಪಂದ?:ಕಾರ್ಖಾನೆಯ ನಿರ್ವಹಣೆ ಮತ್ತು ಕಾರ್ಯಾಚರಣೆ ಹೊಣೆ ಹೊತ್ತಿರುವ ಆರ್.ಬಿ.ಟೆಕ್ ಕಂಪನಿ ಮತ್ತು ಮೈಷುಗರ್ ಆಡಳಿತ ಮಂಡಳಿಯವರ ನಡುವೆ ಮೇಲ್ನೋಟಕ್ಕೆ ಸಾಮರಸ್ಯವಿಲ್ಲದಿರುವಂತೆ ಕಂಡುಬಂದರೂ ಇಬ್ಬರ ನಡುವೆ ಒಳಒಪ್ಪಂದ ಏರ್ಪಟ್ಟಿರುವಂತೆ ಕಂಡುಬರುತ್ತಿದೆ ಎಂದು ಹಲವು ರೈತ ಮುಖಂಡರು ಅನುಮಾನ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಸರ್ಕಾರ ಆಡಳಿತ ಮಂಡಳಿಯವರ ವಿರೋಧದ ನಡುವೆಯೂ ನಿರ್ವಹಣೆ ಮತ್ತು ಕಾರ್ಯಾಚರಣೆಯ ಗುತ್ತಿಗೆಯನ್ನು ಆರ್.ಬಿ.ಟೆಕ್ ಕಂಪನಿಯವರಿಗೇ ನೀಡುತ್ತದೆ. ಮತ್ತೊಂದೆಡೆ ಆಡಳಿತ ಮಂಡಳಿಯವರು ಆರ್.ಬಿ.ಟೆಕ್‌ನವರಿಗೆ ನೀಡಬೇಕಾದ ಎಲ್ಲಾ ಹಣವನ್ನು ಪಾವತಿಸಿದೆ. ಜೊತೆಗೆ ಆರ್.ಬಿ.ಟೆಕ್ ಕಂಪನಿಯವರನ್ನು ಈ ಸಾಲಿನಲ್ಲಿ ಕೇವಲ ಉತ್ಸವಮೂರ್ತಿಯಂತೆ ಕೂರಿಸಿ ಕಾರ್ಖಾನೆಯ ಎಲ್ಲಾ ಕಾರ್ಯಕ್ಷೇತ್ರದ ಜವಾಬ್ದಾರಿಯನ್ನು ನಾವೇ ನಿರ್ವಹಿಸುತ್ತೇವೆ ಮತ್ತು ನೌಕರರನ್ನೂ ನಾವೇ ಕರೆತರುವುದಾಗಿ ಅಧ್ಯಕ್ಷರು ಹೇಳುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಶಂಕಿಸಿದ್ದಾರೆ.ಮೈಷುಗರ್ ಕಾರ್ಖಾನೆಯೊಳಗೆ ಯಂತ್ರೋಪಕರಣಗಳ ದುರಸ್ತಿ ಯಾವ ರೀತಿ ನಡೆಯುತ್ತಿದೆ. ದುರಸ್ತಿಗೆ ಖರ್ಚಾದ ಹಣವೆಷ್ಟು, ಬಾಯ್ಲಿಂಗ್ ಹೌಸ್ ಸ್ಥಿತಿ ಹೇಗಿದೆ, ಕಾರ್ಖಾನೆಯವರ ಬಳಿ ದುಡಿಯುವ ಬಂಡವಾಳ ಎಷ್ಟಿದೆ ಎಂಬ ಬಗ್ಗೆ ನಿಖರತೆ ಇಲ್ಲ. ಅದನ್ನು ಬಹಿರಂಗಪಡಿಸುತ್ತಲೂ ಇಲ್ಲ. ಇದೆಲ್ಲವನ್ನೂ ನೋಡಿದಾಗ ಸಹಜವಾಗಿಯೇ ಇಂತಹ ಅನುಮಾನಗಳು ಮೂಡುತ್ತವೆ ಎಂದಿದ್ದಾರೆ.