ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗೃಹ ಕಾರ್ಮಿಕರ ಧರಣಿ

KannadaprabhaNewsNetwork |  
Published : Jan 26, 2024, 01:49 AM IST
25ಕೆಎಂಎನ್ ಡಿ24ಮಂಡ್ಯ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆ ಕಾರ್ಯಕರ್ತರು  ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು

ಕನ್ನಡಪ್ರಭ ವಾರ್ತೆ ಮಂಡ್ಯ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಸರ್‌.ಎಂ. ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ನಡೆಸಿ ಕಾರ್ಯಕರ್ತರು ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಿ ಸರ್ಕಾರದ ಗಮನಕ್ಕೆ ತಂದು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಗೃಹ ಕಾರ್ಮಿಕರು ಲೈವ್ ಇನ್ ಕೆಲಸಗಾರರು ಪೂರ್ಣ ಪ್ರಮಾಣದ ಕೆಲಸಗಾರರು ಹಾಗೂ ಅರೆಕಾಲಿಕ ಕೆಲಸಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಭದ್ರತಾ ನಿವ್ವಳ ಮತ್ತು ಕೆಲಸದ ಸ್ಥಳದ ಪ್ರಯೋಜನಗಳನ್ನು ಒದಗಿಸುವುದು ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ ಎಂದು ದೂರಿದರು.

ಗೃಹ ಕಾರ್ಮಿಕರು ವಿವಿಧ ರೀತಿಗಳಲ್ಲಿ ತಾರತಮ್ಯ, ಶೋಷಣೆ, ಕಿರುಕುಳವನ್ನು ಎದುರಿಸುತ್ತಿದ್ದಾರೆ. ದೂರು ದಾಖಲಿಸಲು ಯಾವುದೇ ಮಾರ್ಗಗಳಿಲ್ಲ. ಉದ್ಯೋಗ ಭದ್ರತೆಯೂ ಇಲ್ಲ. ಮಾಲೀಕರು ಅವರ ಇಚ್ಛೆಯಂತೆ ಗೃಹ ಕಾರ್ಮಿಕರನ್ನು ಏಕಾಏಕಿ ವಜಾ ಮಾಡಬಹುದು. ಹೀಗಾಗಿ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಗೃಹ ಕಾರ್ಮಿಕರಿಗೆ ಸೂಕ್ತವಾದ ಕಾನೂನುಗಳೇ ಇಲ್ಲ ಎಂದು ಸಂಘಟನೆ ಜಿಲ್ಲಾಧ್ಯಕ್ಷೆ ಲಲಿತಮ್ಮ ದೂರಿದರು.

ಗೃಹ ಕಾರ್ಮಿಕರಿಗೆ ಇರುವ ಐಎಲ್‌ಒಸಿ 189 ನ್ನು ಬೆಂಬಲಿಸಿ ರಾಜ್ಯ ವಿಧಾನ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸುವುದು. ಇದನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು. ಗೃಹ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ಕಾನೂನಿನ ಮೂಲಕ ನೋಂದಣಿ, ಡಾಟಾ ಬೇಸ್ ರಚನೆ ಆಗಬೇಕು ಎಂದು ಒತ್ತಾಯಿಸಿದರು.

ಪ್ರತಿ ವರ್ಷ ಬಜೆಟ್‌ನಲ್ಲಿ ಗೃಹ ಕಾರ್ಮಿಕರಿಗೆ ಅನುದಾನ ಒದಗಿಸಬೇಕು. ಮುಖ್ಯವಾಗಿ ಪ್ಲೇಸ್‌ಮೆಂಟ್ ಏಜೆನ್ಸಿ ನಿಯಂತ್ರಣ ಕಾನೂನು ಜಾರಿಗೊಳಿಸಬೇಕಿದೆ. ಇದರಿಂದ ಮನೆ ಗೆಲಸಗಾರರಾಗಿ ಕೆಲಸ ಮಾಡಲು ಹುಡುಗಿಯರ ರಾಜ್ಯ, ಅಂತರಾಜ್ಯ, ಅಂತರಾಷ್ಟ್ರೀಯ ಕಳ್ಳಸಾಗಾಣೆಯನ್ನು ತಡೆಯಬಹುದು ಎಂದು ಹೇಳಿದರು.

ಗೃಹ ಕಾರ್ಮಿಕರ ವಿರುದ್ಧದ ಕಳ್ಳತನದ ಆರೋಪದ ಪ್ರಕರಣಗಳ ವಿಚಾರಣೆಗೆ ಪ್ರೋಟೋಕಾಲ್‌ಗಳನ್ನು ಸ್ಥಾಪಿಸಲು ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಬೇಕು. ಕೆಲಸದ ಸ್ಥಳದಲ್ಲಿ ಗೃಹ ಕಾರ್ಮಿಕರಿಗೆ ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಪರಿಹರಿಸುವಲ್ಲಿ ಸ್ಥಳೀಯ ದೂರುಗಳ ಸಮಿತಿ ಸಕ್ರಿಯಗೊಳಿಸಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ರಾಜ್ಯಾಧ್ಯಕ್ಷೆ ಜಯಮ್ಮ, ಪದಾಧಿಕಾರಿಗಳಾದ ನಾಗಮ್ಮ, ಆಶಾ, ಶೋಭಾ, ಮಮತಾ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ