ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ನಗರಕ್ಕೆ ವರ್ತುಲ ರಸ್ತೆ ನಿರ್ಮಾಣ ವಿಷಯ ಆಗಾಗ ಸದ್ದು ಮಾಡುತ್ತಲೇ ಬರುತ್ತಿದೆ. ಮತ್ತೆ ಈಗ ಅದು ಮುನ್ನಲೆಗೆ ಬಂದಿದೆ. ಕೇಂದ್ರ ಸಚಿವ ಹಾಗೂ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ೯೦೦ ಕೋಟಿ ರು. ವೆಚ್ಚದಲ್ಲಿ ವರ್ತುಲ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ಆದರೆ, ವರ್ತುಲ ರಸ್ತೆಗೆ ರೂಪಿಸಿರುವ ಎರಡು ನೀಲಿ ನಕಾಶೆಗಳಲ್ಲಿ ಯಾವುದು ಜಾರಿಗೆ ಬರಲಿದೆ ಎನ್ನುವುದು ಈಗ ಎಲ್ಲರ ಕುತೂಹಲ ಕೆರಳಿಸಿದೆ.
೨೦೦೬ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದ ಸಮಯದಲ್ಲೇ ಬೈಪಾಸ್ ರಸ್ತೆಯನ್ನು ಹೆದ್ದಾರಿಯ ಎಡಭಾಗದಿಂದ ನಿರ್ಮಿಸಲು ಉದ್ದೇಶಿಸಿ ನೀಲಿ ನಕಾಶೆಯನ್ನೂ ಸಿದ್ಧಪಡಿಸಲಾಗಿತ್ತು. ಆ ವೇಳೆ ರಸ್ತೆಯ ಉದ್ದ ೧೧.೫ ಕಿ.ಮೀ. ಇದ್ದ ಕಾರಣ ವೆಚ್ಚ ಹೆಚ್ಚಾಗುತ್ತದೆ ಎಂಬ ಕಾರಣವೊಡ್ಡಿ ಕೈಬಿಡಲಾಗಿತ್ತು. ಆ ನಂತರದಲ್ಲಿ ಬಲಭಾಗದಿಂದ ಹೊಸ ಬೈಪಾಸ್ ರಸ್ತೆಯನ್ನು ನಿರ್ಮಿಸಲಾಗಿತ್ತು.ಇದೀಗ ಹಳೇ ರಸ್ತೆಗೆ ಮರುಜೀವ ನೀಡಿ ವರ್ತುಲ ರಸ್ತೆಯನ್ನಾಗಿ ಪರಿವರ್ತಿಸಲು ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ೯೦೦ ಕೋಟಿ ರು. ವೆಚ್ಚದ ಪರಿಷ್ಕೃತ ಯೋಜನೆಯನ್ನು ಅವರ ಮುಂದಿಟ್ಟಿದ್ದಾರೆ. ಭೂ ಸ್ವಾಧೀನಕ್ಕೆ ೫೫೦ ಕೋಟಿ ರು. ಹಾಗೂ ರಸ್ತೆ ನಿರ್ಮಾಣಕ್ಕೆ ೩೫೦ ಕೋಟಿ ರು. ಅವಶ್ಯವಿರುವುದಾಗಿ ಹೇಳಿದ್ದು, ಗಡ್ಕರಿ ಕೂಡ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ವರ್ತುಲ ರಸ್ತೆಗೆ ಎರಡು ನೀಲಿ ನಕಾಶೆ:ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ವರ್ತುಲ ರಸ್ತೆಗೆ ಎರಡು ನೀಲಿ ನಕಾಶೆ ಸಿದ್ಧಪಡಿಸುತ್ತಿದೆ. ಮೊದಲನೆಯದು ೨೦೦೬ರ ನೀಲಿ ನಕ್ಷೆ. ಎರಡನೆಯದು ಹೊಸದಾಗಿ ಮಾರ್ಪಾಡುಗೊಳಿಸಲಾಗುತ್ತಿರುವ ನೀಲಿ ನಕ್ಷೆ. ಹೊಸ ನೀಲಿನಕ್ಷೆ ತಯಾರಿ ಕೆಲಸ ಶೇ.೯೦ರಷ್ಟು ಪೂರ್ಣಗೊಂಡಿರುವುದಾಗಿ ಮುಡಾ ಅಧಿಕಾರಿ ವರ್ಗದವರಿಂದ ತಿಳಿದುಬಂದಿದೆ.
೨೦೦೬ರಲ್ಲಿ ತಯಾರಾಗಿರುವ ನೀಲಿ ನಕ್ಷೆಯಂತೆ ರಸ್ತೆ ನಿರ್ಮಾಣ ಮಾಡಬೇಕಾದರೆ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ. ಏಕೆಂದರೆ, ರಸ್ತೆ ನಿರ್ಮಾಣ ವಿಳಂಬದಿಂದಾಗಿ ರಸ್ತೆ ನಿರ್ಮಾಣಕ್ಕೆ ಗುರುತಿಸಲಾದ ಜಾಗಗಳಲ್ಲಿ ಮನೆಗಳು ನಿರ್ಮಾಣಗೊಂಡಿವೆ. ಈ ಜಾಗಗಳಲ್ಲಿ ಮುಡಾ ಅನುಮತಿಯಿಲ್ಲದಿದ್ದರೂ ನೂರಾರು ಮನೆಗಳು ತಲೆಎತ್ತಿವೆ. ಈ ಜಾಗಗಳು ಅಲಿಲೇಷನ್ ಆಗದೆ ಇನ್ನೂ ಪಂಚಾಯ್ತಿ ಖಾತೆ, ಆರ್‌ಟಿಸಿಗಳಲ್ಲೇ ಚಾಲ್ತಿಯಲ್ಲಿರುವುದಾಗಿ ಹೇಳಲಾಗುತ್ತಿದೆ.ರಸ್ತೆಗೆ ಗುರುತಿಸಿದ ಜಾಗದಲ್ಲಿ ಮನೆಗಳು ನಿರ್ಮಾಣ:
ಹಳೆಯ ನಕ್ಷೆಯಂತೆಯೇ ರಸ್ತೆ ನಿರ್ಮಿಸಲು ಹೊರಟರೆ ರಸ್ತೆ ಹಾದುಹೋಗಿರುವ ಜಾಗಗಳಲ್ಲಿ ಮೇಲೆದ್ದಿರುವ ಮನೆಗಳನ್ನು ನೆಲಸಮಗೊಳಿಸಬೇಕಾಗುತ್ತದೆ. ಇದರಿಂದ ಭೂಸ್ವಾಧೀನಕ್ಕೆ ನೀಡಬೇಕಾದ ಪರಿಹಾರದ ಮೊತ್ತ ಹೆಚ್ಚಳವಾಗಲಿದೆ. ಜನರ ವಿರೋಧವನ್ನು ಎದುರಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಬಹುದು. ಹೊಸ ಬಡಾವಣೆಗಳು ನಿರ್ಮಾಣಗೊಂಡಿರುವುದರಿಂದ ರಸ್ತೆ ನಿರ್ಮಾಣಕ್ಕೆ ಸಾಕಷ್ಟು ಎಡರು ತೊಡರುಗಳು ಎದುರಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.೧೦೦ ರಿಂದ ೨೦೦ ಮೀ. ಮುಂದಕ್ಕೆ ವಿಸ್ತರಣೆ:
ಮತ್ತೊಂದೆಡೆ ಹಳೇ ನೀಲಿ ನಕಾಶೆಯನ್ನು ಪಕ್ಕಕ್ಕಿಟ್ಟು ಪರಿಷ್ಕೃತ ನಕಾಶೆಯೊಂದನ್ನು ವರ್ತುಲ ರಸ್ತೆಗೆ ಸಿದ್ಧಪಡಿಸಲಾಗುತ್ತಿದೆ. ಅದರ ಪ್ರಕಾರ ಹಳೇ ನೀಲಿ ನಕಾಶೆಯಲ್ಲಿ ಗುರುತಿಸಿರುವ ಜಾಗದಿಂದ ೧೦೦ ರಿಂದ ೨೦೦ ಮೀ. ಮುಂದಕ್ಕೆ ರಸ್ತೆಯನ್ನು ವಿಸ್ತರಿಸಿ ನಿರ್ಮಿಸಲು ವಿನ್ಯಾಸಗೊಳಿಸಲಾಗುತ್ತಿದೆ. ಅದರ ಕಾರ್ಯವೂ ಶೇ.೯೦ರಷ್ಟು ಪೂರ್ಣಗೊಂಡಿರುವುದಾಗಿ ತಿಳಿದುಬಂದಿದೆ.ಹಳೇ ನಕಾಶೆಯಲ್ಲಿರುವ ಜಾಗದಿಂದ ಮುಂದಕ್ಕೆ ರಸ್ತೆಯನ್ನು ವಿಸ್ತರಿಸಿ ಪರಿಷ್ಕೃತ ಯೋಜನೆ ರೂಪಿಸುವುದರಿಂದ ಹಾಲಿ ಇರುವ ಮನೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕೃಷಿ ಭೂಮಿ ಸಿಗುವುದರಿಂದ ಪರಿಹಾರದ ಮೊತ್ತವೂ ಕಡಿಮೆಯಾಗಲಿದೆ. ಯೋಜನಾಬದ್ಧವಾಗಿ ರಸ್ತೆ ನಿರ್ಮಿಸುವುದಕ್ಕೆ ಅನುಕೂಲವಾಗಲಿದೆ. ಇದರಿಂದ ಸಾರ್ವಜನಿಕರು ಮನೆ ಕಳೆದುಕೊಳ್ಳಬಹುದೆಂಬ ಆತಂಕವನ್ನೂ ದೂರ ಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ದೂರ ಹೆಚ್ಚಾಗುವ ಸಾಧ್ಯತೆ:ಹೊಸ ನೀಲಿ ನಕಾಶೆಯಂತೆ ವರ್ತುಲ ರಸ್ತೆಗೆ ಹೆಚ್ಚುವರಿ ಭೂಮಿ ಬೇಕಾಗುತ್ತದೆ. ಹಳೇ ನಕಾಶೆಯಲ್ಲಿರುವ ೧೧.೫ ಕಿ.ಮೀ.ಗಿಂತ ದೂರ ಹೆಚ್ಚಾಗುವ ಸಾಧ್ಯತೆಗಳಿವೆ. ಜನರ ವಿರೋಧಕ್ಕೆ ಎಡೆಮಾಡಿಕೊಡದಂತೆ ಬಲಭಾಗದಲ್ಲಿ ಸುಗಮವಾಗಿ ಬೈ-ಪಾಸ್ ರಸ್ತೆ ನಿರ್ಮಾಣ ಮಾಡಿದಂತೆ ಈ ಭಾಗದಲ್ಲಿ ಮಾಡಬಹುದು. ಆದರೆ, ಪ್ರಾಧಿಕಾರ ಸಿದ್ಧಪಡಿಸುವ ಹೊಸ ನೀಲಿ ನಕ್ಷೆಯಾಧಾರಿತ ವರ್ತುಲ ರಸ್ತೆಗೆ ಕ್ಯಾಬಿನೇಟ್ ಒಪ್ಪಿಗೆ ಪಡೆಯಬೇಕಾದ ಅವಶ್ಯಕತೆ ಇದೆ. ಇದಕ್ಕೆ ರಾಜ್ಯ ಸರ್ಕಾರದ ಅನುಮೋದನೆ ಬೇಕಿರುವುದರಿಂದ ಯೋಜನೆ ಕಾರ್ಯಗತವಾಗುವ ಬಗ್ಗೆ ಹಲವರಲ್ಲಿ ಅನುಮಾನಗಳು ಮೂಡಿವೆ.
ನಿರೀಕ್ಷಿತ ಪರಿಹಾರ ಸಿಗುವುದು ಅನುಮಾನ:ಹಳೇ ನೀಲಿ ನಕಾಶೆಯನ್ನೇ ವರ್ತುಲ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಿದರೆ ನಕ್ಷೆಯಲ್ಲಿ ಗುರುತಿಸಲಾದ ಜಾಗಗಳಲ್ಲಿ ಕನಿಷ್ಠ ೪೦ ರಿಂದ ೧ ಕೋಟಿ ರು. ವೆಚ್ಚ ಮಾಡಿ ಮನೆ ಕಟ್ಟಿರುವವರಿದ್ದಾರೆ. ಹಲವು ಮನೆಗಳು ಪಂಚಾಯ್ತಿ ಖಾತೆ, ಅಲಿಲೇಷನ್ ಆಗದೆ ಆರ್‌ಟಿಸಿಯಲ್ಲೇ ಇದ್ದರೆ ನಿರೀಕ್ಷಿತ ಪ್ರಮಾಣದ ಪರಿಹಾರ ಸಿಗುವುದು ಕಷ್ಟವಾಗಲಿದೆ. ಇದರಿಂದ ಅವರಿಗೆ ಮನೆ ಕಳೆದುಕೊಂಡು ನಷ್ಟ ಅನುಭವಿಸಬೇಕಾದ ಸ್ಥಿತಿ ಎದುರಾಗಬಹುದು. ಹೀಗಾಗಿ ವರ್ತುಲ ರಸ್ತೆ ನಿರ್ಮಾಣಕ್ಕೆ ಕುಮಾರಸ್ವಾಮಿ ಅವರು ಆಯ್ಕೆ ಮಾಡುವ ಮಾಸ್ಟರ್ ಪ್ಲಾನ್ ಯಾವುದು ಎಂಬ ಬಗ್ಗೆ ಕುತೂಹಲ ಮೂಡಿಸಿದೆ.
ಬಲಭಾಗದಲ್ಲಿ ಸುಗಮವಾಗಿ ಮುಗಿದ ರಸ್ತೆ:ಬೆಂಗಳೂರು-ಮೈಸೂರು ಷಟ್ಪಥ ಹೆದ್ದಾರಿ ನಿರ್ಮಿಸುವಾಗ ಬಲಭಾಗಕ್ಕೆ ಬೈ-ಪಾಸ್ ರಸ್ತೆ ನಿರ್ಮಿಸಲಾಯಿತು. ಆ ಭಾಗದಲ್ಲಿ ಕೃಷಿ ಭೂಮಿ ಹೆಚ್ಚಾಗಿದ್ದರಿಂದ ಬಹಳ ಸುಗಮವಾಗಿ ಕಡಿಮೆ ಅವಧಿಯಲ್ಲಿ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಆದರೆ, ಎಡಭಾಗದಲ್ಲಿ ನಗರ ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ. ಪ್ರಭಾವಿಗಳು ಜಾಗಗಳನ್ನು ಹೊಂದಿದ್ದು, ಅವರು ತಮ್ಮ ಆಸ್ತಿಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಎಡಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದರು.
ಇದೀಗ ವರ್ತುಲ ರಸ್ತೆ ಹೆಸರಿನಲ್ಲಿ ಎಡಭಾಗದಲ್ಲೂ ರಸ್ತೆ ನಿರ್ಮಿಸುವುದಕ್ಕೆ ಸಂಸದ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ನಿರೀಕ್ಷೆಯಂತೆ ಯೋಜನೆ ನಿಗದಿತ ಅವಧಿಯಲ್ಲಿ ನಿರ್ಮಾಣಗೊಳಿಸಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಯೋಜನಾ ವೆಚ್ಚ ಮತ್ತಷ್ಟು ಅಧಿಕವಾಗುವುದು ನಿಶ್ಚಿತವಾಗಲಿದೆ.ಮಂಡ್ಯ ವರ್ತುಲ ರಸ್ತೆ ರಾಜ್ಯ ಬಜೆಟ್‌ನಲ್ಲಿ ಸೇರಿದೆ. ಅದನ್ನು ಮಾಡುವುದಕ್ಕೂ ಸಿದ್ಧರಿದ್ದೇವೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಕೊಟ್ಟಂತೆ ನಮ್ಮ ರಾಜ್ಯಕ್ಕೂ ಅನುದಾನ ಕೊಡುತ್ತದೆ. ಅದಲ್ಲದೆ ವಿಶೇಷ ಅನುದಾನವನ್ನು ತಂದರೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮಂಡ್ಯ ರಿಂಗ್ ರಸ್ತೆಗೆ, ಹೊಸ ರಾಷ್ಟ್ರೀಯ ಹೆದ್ದಾರಿ ಮಾಡುವುದಕ್ಕೂ ಸಹಕಾರ ಕೊಡುತ್ತೇವೆ. ಇದರ ಜೊತೆಗೆ ಮೈಸೂರು, ಪಾಂಡವಪುರ, ನಾಗಮಂಗಲ ಮಾರ್ಗವಾಗಿ ರೈಲು ಮಾರ್ಗವನ್ನು ಮಂಜೂರು ಮಾಡಿಸಲಿ.
- ಎನ್.ಚಲುವರಾಯಸ್ವಾಮಿ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವವರ್ತುಲ ರಸ್ತೆ ನಿರ್ಮಾಣವೇ ಅನುಮಾನವಾಗಿದೆ. ರಸ್ತೆಗೆ ಗುರುತಿಸಿದ್ದ ಜಾಗದಲ್ಲೆಲ್ಲಾ ಮನೆಗಳು ನಿರ್ಮಾಣವಾಗಿವೆ. ೫೦ ಲಕ್ಷದಿಂದ ೧ ಕೋಟಿ ರು.ವರೆಗೆ ವೆಚ್ಚದಲ್ಲಿ ಮನೆ ಕಟ್ಟಿದ್ದಾರೆ. ನೆಲಸಮಗೊಳಿಸಿದರೆ ಅಷ್ಟೊಂದು ಪರಿಹಾರ ಜನರಿಗೆ ಸಿಗುವುದೂ ಇಲ್ಲ. ಹೊಸ ನಕ್ಷೆ ಪ್ರಕಾರ ೧೦೦ ರಿಂದ ೨೦೦ ಮೀ. ಮುಂದಕ್ಕೆ ಹೋಗಿ ರಸ್ತೆ ನಿರ್ಮಿಸಿದರೆ ದೂರ ಆಗಲಿದೆ. ಕ್ಯಾಬಿನೆಟ್‌ನಿಂದ ಒಪ್ಪಿಗೆ ಪಡೆದುಕೊಳ್ಳಬೇಕಿದೆ. ಇಷ್ಟೊಂದು ಸಮಸ್ಯೆಗಳ ನಡುವೆ ವರ್ತುಲ ರಸ್ತೆ ನಿರ್ಮಾಣ ಹೇಗೆ ಸಾಧ್ಯ ಎನ್ನುವುದು ಪ್ರಶ್ನೆಯಾಗಿದೆ.- ಕೆ.ಆರ್.ರವೀಂದ್ರ, ಸಾಮಾಜಿಕ ಕಾರ್ಯಕರ್ತ