ಹಾನಗಲ್ಲ: ಬಸಾಪುರ ಏತ ನೀರಾವರಿ ಯೋಜನೆ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಶಾಸಕ ಶ್ರೀನಿವಾಸ ಮಾನೆ, ನೀರು ಹರಿಸಲು ವಿಳಂಬ ಮಾಡುತ್ತಿರುವ ಯುಟಿಪಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಜು. 15ರ ಒಳಗಾಗಿ ನೀರು ಹರಿಸಿ, ಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ತಾಕೀತು ಮಾಡಿದರು.
ಜನರೇಟರ್, ಜೆಸಿಬಿ ಕೆಲಸಕ್ಕೆ ಹಣ ಇಲ್ಲ ಎಂದು ಕೈಚೆಲ್ಲದಿರಿ. ನೀರು ಹಾಯಿಸುವ ಮೊದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಿ. ಹಣದ ಅವಶ್ಯಕತೆ ಇದ್ದರೆ ಗಮನಕ್ಕೆ ತನ್ನಿ. ಅನುದಾನಕ್ಕೆ ಕಾಯೋದು ಬೇಡ. ಸದ್ಯಕ್ಕೆ ತಾತ್ಕಾಲಿಕವಾಗಿ ಅಭಿಯಂತರು, ಸಿಬ್ಬಂದಿ ನೇಮಕ ಮಾಡಿಕೊಳ್ಳಿ. ಅವರಿಗೂ ಬೇಕಿದ್ದರೆ ನಾನೇ ವೇತನ ಕೊಡುತ್ತೇನೆ. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಆಗಬಾರದು ಎಂದು ಸೂಚಿಸಿದರು.
ಸಿಬ್ಬಂದಿ ಕೊರತೆ ಇದೆ ಎನ್ನುವುದನ್ನು ಯುಟಿಪಿ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಗಮನಕ್ಕೆ ತಂದಾಗ ಗರಂ ಆದ ಶಾಸಕ ಶ್ರೀನಿವಾಸ ಮಾನೆ, ಮೊನ್ನೆ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ನಡೆಸಿದ ಸಭೆಯಲ್ಲಿ, ಹಾವೇರಿಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ವಿಷಯ ಏಕೆ ಗಮನಕ್ಕೆ ತರಲಿಲ್ಲ? ಸಚಿವರು ಇದ್ದಾಗ ಎಲ್ಲದಕ್ಕೂ ತಲೆಯಾಡಿಸುತ್ತೀರಿ. ಈಗ ಸಮಸ್ಯೆ ಹೇಳುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ಮಂಗಳವಾರ ಉಪ ಮುಖ್ಯಮಂತ್ರಿ ಮತ್ತು ಎಂಡಿ ಭೇಟಿ ಮಾಡಿಸುವುದಾಗಿ ಭರವಸೆ ನೀಡಿದರು.ಕಾಲುವೆ ಎಲ್ಲೆಲ್ಲಿ ಬ್ಲಾಕೇಜ್ ಇದೆ ಗಮನಿಸಿ ಈಗಲೇ ಸರಿಪಡಿಸಿ. ನೀರು ಹಾಯಿಸುವ ಸಮಯದಲ್ಲಿ ಯಾವುದೇ ತೊಂದರೆ ಆಗದೇ ಸರಳವಾಗಿ ನೀರು ಹಾಯಬೇಕು. ಕೆಲವೆಡೆ ನೀರು ಬಹಳ ಸುತ್ತಿ ಸುತ್ತಿ ಹರಿಯುತ್ತಿರುವ ಬಗ್ಗೆ ದೂರುಗಳಿವೆ. ಯೋಜನೆಯ ಅಕ್ಕಪಕ್ಕದ ಗ್ರಾಮಗಳ ಕೆಲವು ಕೆರೆಗಳನ್ನು ತುಂಬಿಸಲು ಗಮನ ಹರಿಸಿ ಎಂದು ಶಾಸಕ ಮಾನೆ ಸೂಚಿಸಿದರು.