ಕನ್ನಡಪ್ರಭ ವಾರ್ತೆ ಪಾಂಡವಪುರ
ಡಿಂಕಾ ಹಾಲು ಉತ್ಪಾದಕರ ಸಹಕಾರ ಸಂಘವು ರಾಜ್ಯಕ್ಕೆ ಮಾದರಿ ಸಂಘವಾಗಿ ಮಂಗಳಮ್ಮ ಎಂಬ ರೈತ ಮಹಿಳೆ ದಕ್ಷಿಣ ಭಾರತದಲ್ಲಿಯೇ ಡೇರಿಗೆ ಅಧಿಕ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಬಣ್ಣಿಸಿದರು.ತಾಲೂಕಿನ ಡಿಂಕಾ ಡೇರಿಯಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಸಂಘ ಅಧಿಕ ಹಾಲು ಉತ್ಪಾದನೆ ಜತೆಗೆ ಉತ್ತಮ ಆರ್ಥಿಕ ವಹಿವಾಟಿನೊಂದಿಗೆ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ವಾರ್ಷಿಕ ಲಕ್ಷಾಂತರ ರು. ಲಾಭದ ಜತೆಗೆ ಉತ್ಪಾದಕರಿಗೆ ಬೋನಸ್ ಸಹ ವಿತರಿಸಿ ಜಿಲ್ಲೆಗೆ ಮಾದರಿಯಾಗಿದೆ ಎಂದರು.
ಮನ್ಮುಲ್ ಒಕ್ಕೂಟವು ಹಾಲು ಉತ್ಪಾದನೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನದಲ್ಲಿದೆ. ಸಂಘಗಳಲ್ಲಿ ಉತ್ಪಾದಕರಿಗೆ ಹಾಲಿನ ಬೆಣ್ಣೆ ಅಂಶದ ಆಧಾರದ ಮೇಲೆ ಉತ್ಪಾದಕರಿಗೆ ಹಣ ನೀಡಬೇಕು. ನಾನು ನಿರ್ದೇಶಕನಾಗಿ ಆಯ್ಕೆಯಾದ ಬಳಿಕ ತಾಲೂಕಿನ 70ಕ್ಕೂ ಹೆಚ್ಚು ಡೇರಿಗಳಿಗೆ ಭೇಟಿಕೊಟ್ಟು ಅಲ್ಲಿನ ಸ್ಥಿತಿಗತಿಗಳನ್ನು ಅವಲೋಕನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಒಕ್ಕೂಟದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸಂಘಗಳಿಗೆ ಒದಗಿಸಿಕೊಡುವ ಪ್ರಯತ್ನ ನಡೆಸಲಾಗುವುದು ಎಂದರು.ಉಪವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ಕಡ್ಡಾಯವಾಗಿ ಎಲ್ಲಾ ಡೇರಿಗಳು ಕಾಮನ್ ಸಾಪ್ಟವೇರ್ ಯಂತ್ರವನ್ನು ಅಳವಡಿಕೆ ಮಾಡಿಕೊಳ್ಳಬೇಕು. ತಾಲೂಕಿನ 148 ಡೇರಿಗಳ ಪೈಕಿ 112 ಡೇರಿಗಳಲ್ಲಿ ಕಾಮನ್ ಸಾಪ್ಟವೇರ್ ಅಳವಡಿಸಿಕೊಂಡಿದ್ದಾರೆ. ಜತೆಗೆ ಒಕ್ಕೂಟದಿಂದ ಶೀಘ್ರವೇ ಚಾಪಕ್ ಕಟ್ಟರ್, ಹಾಲು ಕರೆಯುವ ತಂತ್ರ, ರಬ್ಬರ್ ಮ್ಯಾಟ್‌ಗಳನ್ನು ವಿತರಿಸಲಾಗುವುದು ಎಂದರು.
ಪಶುಸಂಗೋಪನೆ ಸಹಾಯಕ ನಿರ್ದೇಶಕ ಮಹೇಂದ್ರ ಮಾತನಾಡಿ, ಇಲಾಖೆಯಿಂದ ರಾಸುಗಳಿಗೆ ಹಾಕುವ ಎಲ್ಲಾ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು. ಕೇಂದ್ರ ಸರಕಾರ 2030ಕ್ಕೆ ದಕ್ಷಿಣ ಭಾರತ ರಾಜ್ಯಗಳನ್ನು ಕಾಲುಬಾಯಿ ಜ್ವರ ಮುಕ್ತ ರಾಜ್ಯಗಳನ್ನಾಗಿ ಘೋಷಣೆ ಮಾಡಲು ತೀರ್ಮಾನಿಸಿದೆ. ಕಡ್ಡಾಯವಾಗಿ 8 ತಿಂಗಳ ಒಳಗಿನ ಹೆಣ್ಣು ಕರುಗಳಿಗೆ ಇದರ ಲಸಿಕೆ ಹಾಕಿಸಬೇಕು ಎಂದರು.ಇದೇ ವೇಳೆ ಅಧಿಕ ಹಾಲು ಪೂರೈಕೆ ಮಾಡಿದ ರೈತ ಮಹಿಳೆ ಮಂಗಳಮ್ಮ, ಮಂಜು, ಡಿ.ಇ.ಮಂಜು ಅವರನ್ನು ಸನ್ಮಾನಿಸಲಾಯಿತು.
ಡೇರಿ ಅಧ್ಯಕ್ಷ ಡಿ.ಈ.ಕಲಿಗಣೇಶ್, ಉಪಾಧ್ಯಕ್ಷೆ ಸೌಮ್ಯ, ಮಾರ್ಗ ವಿಸ್ತರಣಾಧಿಕಾರಿ ಉಷಾ, ನಾಗೇಂದ್ರ, ನಿರ್ದೇಶಕರಾದ ಗಿರೀಶ್, ಡಿ.ವಿ.ಶಿವಣ್ಣ, ಮಹದೇವಪ್ಪ, ಡಿ.ಎಂ.ಇಂದ್ರೇಶ್, ಶಿವಲಿಂಗಪ್ಪ, ಮಹೇಶ್, ಪ್ರೇಮಮ್ಮ, ಕೃಷ್ಣಶೆಟ್ಟಿ, ಡಿ.ಎಂ.ಪುಟ್ಟೇಗೌಡ, ಶ್ರೀನಿವಾಸಯ್ಯ, ರಮಾದೇವಿ, ಕಾರ್‍ಯದರ್ಶಿ ಡಿ.ಎಂ.ಶಿವಪ್ಪ, ಪರೀಕ್ಷಕ ಜಿ.ಕೇಶವಾಚಾರ್ ಸೇರಿದಂತೆ ಹಲವರು ಇದ್ದರು.