ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರಿನ ಉಪ ನೋಂದಣಿ ಕಚೇರಿಯಲ್ಲಿ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ಕೊಟ್ಟಿರುವ ಗ್ರಾಹಕರ ಬ್ಯಾಂಕ್ ಖಾತೆಗಳಿಂದ ಹಣ ಕೀಳುವ ಸೈಬರ್ ಕನ್ನ ನಿರಂತರ ಮುಂದುವರಿದಿದೆ. ವಂಚನೆ ಪ್ರಕರಣವನ್ನು ಗಂಭೀರ ಪರಿಗಣಿಸಿದ ಮಂಗಳೂರು ಪೊಲೀಸರು ಬಿಹಾರ ಮೂಲದ ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಪೊಲೀಸರು ಈ ಬಗ್ಗೆ ಅಧಿಕೃತ ವಿವರವಾದ ಮಾಹಿತಿ ನೀಡಿಲ್ಲ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಎಎಸ್‌ಐ ಆಗಿರುವ ಆಲ್ಬರ್ಟ್ ಲಾಸ್ರಾದೋ ಹಣ ಕಳಕೊಂಡವರಲ್ಲಿ ಒಬ್ಬರಾಗಿದ್ದು ವಂಚನೆ ಬಗ್ಗೆ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಲಸ್ರಾದೋ ಅವರ ಎಸ್‌ಬಿಐ ಬ್ಯಾಂಕ್ ಖಾತೆಯಿಂದ ಆಗಸ್ಟ್ 23ರಂದು 4,990 ರು., 24ರಂದು 8,500 ರು., ಸೆ.6 ರಿಂದ 9ರ ನಡುವೆ 10 ಸಾವಿರ ರು., 10 ಸಾವಿರ ರು. ಮತ್ತು 3,400 ರು. ಹಣ ಕಡಿತಗೊಂಡಿತ್ತು. ಒಟ್ಟು 36,890 ರು. ಮೊತ್ತ ಇವರ ಖಾತೆಯಿಂದ ಕಡಿತಗೊಂಡಿದ್ದು, ಇವರು ಯಾವುದೇ ಒಟಿಪಿಯನ್ನು ಯಾರಿಗೂ ಕೊಟ್ಟಿರಲಿಲ್ಲ. ಬ್ಯಾಂಕ್ ಕಚೇರಿಯಲ್ಲಿ ವಿಚಾರಿಸಿದಾಗ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ಸೋರಿಕೆಯಾಗಿ ಯಾರೋ ಅನಧಿಕೃತವಾಗಿ ತೆಗೆದಿರುವುದು ಪತ್ತೆಯಾಗಿದೆ. ಹಣವನ್ನು ಆಲ್ಬರ್ಟ್ ಲಸ್ರಾದೋ ಅವರು ಆ. 2 ರಂದು ಮಂಗಳೂರಿನ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜಾಗ ಮಾರಾಟದ ಬಗ್ಗೆ ಹೆಬ್ಬೆರಳಿನ ಗುರುತು ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ನೀಡಿದ್ದರು. ಅಪರಿಚಿತರು ಈ ತಂತ್ರಾಂಶವನ್ನು ಬಳಸಿಕೊಂಡು ತನ್ನ ಬ್ಯಾಂಕ್ ಖಾತೆಯಿಂದ ಹಣ ಕಿತ್ತುಕೊಂಡಿದ್ದಾರೆ ಎಂದು ಅವರು ಸೈಬರ್ ಅಪರಾಧ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೇ ರೀತಿ ಇತರ ಏಳು ಮಂದಿ ಜಾಗ ರಿಜಿಸ್ಟ್ರೇಶನ್ ವಿಚಾರದಲ್ಲಿ ಮಂಗಳೂರಿನ ಉಪ ನೋಂದಣಿ ಕಚೇರಿಗೆ ಆಧಾರ್ ಕಾರ್ಡ್ ಮತ್ತು ಬೆರಳಚ್ಚು ನೀಡಿದವರು ಹಣ ಕಳಕೊಂಡಿದ್ದಾರೆ. ಈ ರೀತಿ ಎಂಟು ಪ್ರಕರಣ ಕಳೆದ ಒಂದು ತಿಂಗಳಲ್ಲಿ ದಾಖಲಾಗಿದೆ. ಸೊಸೈಟಿಯಲ್ಲೂ ಆಧಾರ್ ಸೋರಿಕೆ: ನೀರುಮಾರ್ಗ ನಿವಾಸಿ ಮ್ಯಾಕ್ಸಿಂ ಎಂಬವರು ಸೊಸೈಟಿ ಒಂದಕ್ಕೆ ಆಧಾರ್ ಕಾರ್ಡ್ ಮತ್ತು ಬೆರಳಚ್ಚು ನೀಡಿ ಹಣ ಕಳೆದುಕೊಂಡಿದ್ದಾರೆ. ಸಾಲದ ವಿಚಾರದಲ್ಲಿ ಗುರುಪುರದ ಸೊಸೈಟಿಯೊಂದಕ್ಕೆ ತೆರಳಿದ್ದ ಅವರು ಅಲ್ಲಿ ಆಧಾರ್ ಮತ್ತು ಬೆರಳಚ್ಚು ನೀಡಿದ್ದರು. ಅಕ್ಟೋಬರ್ ತಿಂಗಳ ಆರಂಭದಲ್ಲಿ ದಿನಕ್ಕೆ 5,000 ರು.ನಂತೆ ಮೂರು ದಿನ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆ. ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದಾಗ, ಆಧಾರ್ ಕಾರ್ಡ್ ಸೋರಿಕೆಯಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮ್ಯಾಕ್ಸಿಂ ಕುಟಿನೋ ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಬ್ ರಿಜಿಸ್ಟ್ರೇಶನ್ ಕಚೇರಿಯಲ್ಲಿ ಕಾವೇರಿ- 2 ತಂತ್ರಾಂಶ ಎನ್ನುವ ಹೊಸ ಸಾಫ್ಟ್ವೇರನ್ನು ಕಳೆದ ವರ್ಷ ಅಳವಡಿಸಲಾಗಿತ್ತು. ಅದನ್ನು ಹ್ಯಾಕ್ ಮಾಡಿ, ಗ್ರಾಹಕರ ಬೆರಳಚ್ಚು ಮತ್ತು ಆಧಾರ್ ಮಾಹಿತಿಯನ್ನು ಕದಿಯುತ್ತಿದ್ದಾರೆ ಎನ್ನುವ ಸಂಶಯ ಸಂತ್ರಸ್ತರನ್ನು ಕಾಡುತ್ತಿದೆ. ಇದನ್ನು ಸರ್ಕಾರವಾಗಲೀ, ಜಿಲ್ಲಾಡಳಿತವಾಗಲೀ ಗಂಭೀರ ಪರಿಗಣಿಸಿಲ್ಲ. ಮಂಗಳೂರು ದಕ್ಷಿಣ ಶಾಸಕರು ಈ ಬಗ್ಗೆ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದ್ದು ಬಿಟ್ಟರೆ ಬೇರೇನೂ ಆಗಿಲ್ಲ.