ಸಂದೀಪ್ ವಾಗ್ಲೆ
ಕನ್ನಡಪ್ರಭ ವಾರ್ತೆ ಮಂಗಳೂರುಹಣ ಕೊಟ್ಟು ಕೊಳ್ಳುವ ವಸ್ತು ಬಳಕೆ ಯೋಗ್ಯವಿಲ್ಲದಿದ್ದರೆ ವಾಪಸ್ ನೀಡಲು ಗ್ರಾಹಕರಿಗೆ ಹಕ್ಕಿದೆ. ಗ್ರಾಹಕ ನ್ಯಾಯದ ಈ ನಿಯಮ ಕುಡ್ಲದ ಹೆದ್ದಾರಿಗಳಿಗೆ ಮಾತ್ರ ಅನ್ವಯಿಸೋದೆ ಇಲ್ಲ! ಅದರಲ್ಲೂ ಮಂಗಳೂರು- ಸುರತ್ಕಲ್ ರಾಷ್ಟ್ರೀಯ ಹೆದ್ದಾರಿಯು ಉದ್ದಕ್ಕೂ ಬಾಯ್ದೆರೆದು ಯಮರೂಪಿಯಾಗಿದ್ದರೂ ಬಡಪಾಯಿ ಜನರು ಟೋಲ್ ಕೊಟ್ಟು ಸಂಚರಿಸಲೇಬೇಕು!ಬಿಕರ್ನಕಟ್ಟೆ- ಕಾರ್ಕಳ, ಬಿ.ಸಿ.ರೋಡ್- ಗುಂಡ್ಯ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ಉಂಟಾಗಿರುವ ಸಂಚಾರದ ಗೋಳನ್ನು ಜಿಲ್ಲೆಯ ಬಹುತೇಕರು ಅನುಭವಿಸಿಯೇ ಇರುತ್ತಾರೆ. ಆದರೆ ಕಾಮಗಾರಿ ಎಂದೋ ಮುಗಿದು ಟೋಲ್ ಕೊಟ್ಟು ಸಂಚರಿಸುವ ಬಿ.ಸಿ.ರೋಡ್- ಸುರತ್ಕಲ್ ಹೆದ್ದಾರಿ ವ್ಯಥೆ ಎಂದೂ ಮುಗಿಯದ ಗೋಳಾಗಿ ಕಾಡಿದೆ.ನುಚ್ಚುನೂರಾದ ಹೆದ್ದಾರಿ!: ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು- ಸುರತ್ಕಲ್ ಭಾಗದಲ್ಲಿ ಗುಂಡಿಗಳ ನಡುವೆ ರಸ್ತೆಯನ್ನು ಹುಡುಕುವುದೇ ದೊಡ್ಡ ಸವಾಲು. ಇದೊಂದೇ ಸ್ಟ್ರೆಚ್‌ನಲ್ಲಿ ಒಂದಲ್ಲ, ಎರಡಲ್ಲ, ನೂರಾರು ಗುಂಡಿಗಳೆದ್ದಿವೆ. ಒಂದು ಗುಂಡಿ ತಪ್ಪಿಸಿ ಉಸಿರು ಬಿಡುವಷ್ಟರಲ್ಲಿ ಮತ್ತೊಂದು ಗುಂಡಿ! ಗುಂಡಿ ತಪ್ಪಿಸಲು ಹೋಗಿ ಅದೆಷ್ಟೋ ಅವಘಡಗಳು ಈ ರಸ್ತೆಯಲ್ಲಿ ನಿತ್ಯವೂ ಸಂಭವಿಸುತ್ತಲೇ ಇವೆ. ಕೆಲ ವಾರಗಳಿಂದ ಹೆದ್ದಾರಿ ಇಷ್ಟು ಹದಗೆಟ್ಟು ಹೋಗಿದ್ದರೂ ಇನ್ನೂ ಕೂಡ ಜನರ ಗೋಳಿಗೆ ಮುಕ್ತಿ ಸಿಕ್ಕಿಲ್ಲ.
ಜನರ ದೂರಿನ ಆಧಾರದಲ್ಲಿ ‘ಕನ್ನಡಪ್ರಭ’ ಪ್ರತಿನಿಧಿ ಬುಧವಾರ ಪಡೀಲ್ ರೈಲ್ವೆ ಅಂಡರ್‌ಪಾಸ್‌ನಿಂದ ಸುರತ್ಕಲ್‌ವರೆಗೆ ಸಂಚರಿಸಿ ನೋಡಿದಾಗ ಹೆದ್ದಾರಿಯ ‘ನಿಜರೂಪ’ ದರ್ಶನವಾಯಿತು. ನಂತೂರಿನ ಕಥೆಯಂತೂ ಹೇಳಿ ಮುಗಿಯದ ಕಾದಂಬರಿ. ಮೊದಲೇ ಇಲ್ಲಿ ಟ್ರಾಫಿಕ್ ಜ್ಯಾಂ, ಜತೆಗೆ ರಸ್ತೆ ಹೊಂಡಗಳ ನಡುವೆ ವಾಹನಗಳು ಸಂಚರಿಸಲು ಪರದಾಡಿ ಮತ್ತಷ್ಟು ವಾಹನ ದಟ್ಟಣೆಗೆ ಕಾರಣವಾಗುತ್ತಿದೆ. ನಂತೂರಿನಿಂದ ಕೊಟ್ಟಾರವರೆಗೆ ಅಲ್ಲಲ್ಲಿ ಗುಂಡಿಗಳಿದ್ದರೂ ಸಂಚಾರ ಅಷ್ಟೊಂದು ತ್ರಾಸದಾಯಕವಾಗಿಲ್ಲ. ಆದರೆ ಕೊಟ್ಟಾರದಿಂದ ಸುರತ್ಕಲ್‌ವರೆಗೆ ರಸ್ತೆ ಸಂಪೂರ್ಣ ದಯನೀಯ ಸ್ಥಿತಿ ತಲುಪಿದೆ.ಯಮ ಸೃಷ್ಟಿಸಿದ ಹೆದ್ದಾರಿ!:ಈ ಹೆದ್ದಾರಿಯಲ್ಲಿ ನಿತ್ಯ ಸಂಚರಿಸುವ ಬೈಕಂಪಾಡಿಯ ರಮೇಶ್ ಕುಮಾರ್ ಪ್ರಕಾರ ಇದು ಯಮನೇ ಸೃಷ್ಟಿಸಿದ ಹೆದ್ದಾರಿ! ‘ನಾನು ಪ್ರತಿದಿನ ಇದೇ ಹೆದ್ದಾರಿಯಲ್ಲಿ ಅನಿವಾರ್ಯವಾಗಿ ಸಂಚರಿಸುವವನು. ಸಾಮಾನ್ಯವಾಗಿ ಒಳರಸ್ತೆಗಳಲ್ಲಿ ಗುಂಡಿ ಹೆಚ್ಚಿರೋದು ಸಾಮಾನ್ಯ. ಆದರೆ ಇಲ್ಲಿ ಹೆದ್ದಾರಿಯೇ ಮರಣಕೂಪವಾಗಿದೆ. ನಿತ್ಯ ಸಂಚಾರ ಮಾಡುತ್ತಿದ್ದರೂ ಎಷ್ಟೋ ಸಲ ನನ್ನ ಬೈಕ್ ಹೊಂಡಕ್ಕೆ ಬಿದ್ದು ಸಾಯುವ ಪರಿಸ್ಥಿತಿ ಬಂದಿದೆ. ಪ್ರತಿ ದಿನ ಹೊಸ ಹೊಸ ಹೊಂಡಗಳೇಳುತ್ತಿವೆ. ಎಷ್ಟೋ ಅವಘಡಗಳು ಕಣ್ಣೆದುರೇ ಸಂಭವಿಸಿದ್ದನ್ನು ನೋಡುತ್ತಲೇ ಇದ್ದೇನೆ. ಪರಿಸ್ಥಿತಿ ಇಷ್ಟು ಚಿಂತಾಜನಕವಾಗಿದ್ದರೂ ರಸ್ತೆ ರಿಪೇರಿ ಮಾಡಲು ಏನಡ್ಡಿ? ಸಂಗ್ರಹಿಸುವ ಟೋಲ್‌ನಲ್ಲಿ ಶೇ.5ರಷ್ಟು ಖರ್ಚು ಮಾಡಿದರೂ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಬಹುದು’ ಎನ್ನುತ್ತಾರವರು.
ಅಬ್ಬಬ್ಬಾ ಹೊಂಡಗಳೇ!:ಬೈಕಂಪಾಡಿ ಪ್ರದೇಶದಲ್ಲಿ ಸುಮಾರು 50 ಮೀ. ಉದ್ದಕ್ಕೆ ಕಾಂಕ್ರಿಟ್ ಕಾಮಗಾರಿ ನಡೆಯುತ್ತಿದೆ. ಅದರ ಬದಿಯಿಂದ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರೂ ಅದರಲ್ಲೂ ಏರು ತಗ್ಗು, ಹೊಂಡಗಳು. ಭಾರೀ ಟ್ರಕ್‌ಗಳು ಸಂಚರಿಸಲಾಗದೆ ಪರದಾಡುತ್ತಿವೆ. ಪರಿಣಾಮವಾಗಿ ಈ ಭಾಗದುದ್ದಕ್ಕೂ ಕೃತಕ ಟ್ರಾಫಿಕ್ ಜ್ಯಾಂ ಉಂಟಾಗುತ್ತಿದೆ. ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾಕ್ಕೆ ತೆರಳುವ ಸರ್ಕಲ್‌ನಲ್ಲಿ ಎರಡೂ ಬದಿಯಲ್ಲೂ ರಸ್ತೆಯೇ ಬಾಯ್ದೆರೆದು ನಿಂತಂತಿದೆ.
ಪ್ರತಿವರ್ಷವೂ ಇದೇ ಗೋಳು:ಕೂಳೂರು- ಬೈಕಂಪಾಡಿ- ಕುಳಾಯಿ ಪ್ರದೇಶ ಅತಿ ಹೆಚ್ಚು ಹದಗೆಟ್ಟಿದೆ. ಕಳೆದ ವರ್ಷ ಹಾಕಿದ ತೇಪೆ ರಸ್ತೆಯುದ್ದಕ್ಕೂ ಎದ್ದು ಸರ್ಕಸ್ ಮಾಡುತ್ತಾ ಸಂಚರಿಸಬೇಕು. ಇದು ಈ ಬಾರಿ ಮಾತ್ರ ಅಲ್ಲ, ಪ್ರತಿ ವರ್ಷದ ಗೋಳು. ಈಗಂತೂ ಎಂದೂ ಇಲ್ಲದಷ್ಟು ಭಾನಗಡಿ ಸೃಷ್ಟಿಯಾಗಿದೆ. ಆದರೂ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜನಪ್ರತಿನಿಧಿಗಳು ಎಚ್ಚೆತ್ತ ಲಕ್ಷಣ ಕಾಣುತ್ತಿಲ್ಲ.
ನೆಲದ ಮೇಲಿನ ರಸ್ತೆಯಲ್ಲಿ ಗುಂಡಿಗಳಾಗೋದು ಸಾಮಾನ್ಯ, ಫ್ಲೈಓವರಲ್ಲೂ ಗುಂಡಿಗಳು ಸೃಷ್ಟಿಯಾಗಿರೋದು ಈ ಹೆದ್ದಾರಿಯ ಇನ್ನೊಂದು ಕುಖ್ಯಾತಿ! ಕೆಲ ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದಾಗ ನೈಸಾಗಿ ತೇಪೆ ಹಚ್ಚಿದ್ದ ರಸ್ತೆ, ಪ್ರಧಾನಿ ಬಂದು ಹೋದ ಕೆಲವೇ ದಿನಗಳಲ್ಲಿ ಗುಂಡಿಯೆದ್ದು ಸುದ್ದಿಯಾದದ್ದು ಕೂಡ ಇದೇ ಹೆದ್ದಾರಿ.ಇನ್ನು ಪಡೀಲ್ ರೈಲ್ವೆ ಅಂಡರ್‌ಪಾಸ್ ಬಳಿ ಭಾರೀ ಗಾತ್ರದ ಹೊಂಡ ಗುಂಡಿಗಳೆದ್ದು ಎಷ್ಟೋ ಅಪಘಾತಗಳು ಸಂಭವಿಸಿವೆ. ರಾತ್ರಿ ವೇಳೆ ಈ ಭಾಗದಲ್ಲಿ ಬೀದಿ ದೀಪಗಳಿಲ್ಲದೆ, ಹೊಸದಾಗಿ ಸಂಚರಿಸುವವರು ಬಿದ್ದು ಗಾಯ ಮಾಡಿಕೊಂಡ ಘಟನೆಗಳೆಷ್ಟೋ ನಡೆದಿವೆ. ಈಗಲೂ ಇದೇ ಪರಿಸ್ಥಿತಿ ಮುಂದುವರಿದಿದೆ.
ನಿತ್ಯ ಸಹಸ್ರಾರು ವಾಹನಗಳು ಸಂಚರಿಸುವ, ಅದರಲ್ಲೂ ಆರ್ಥಿಕತೆ ಹೆಚ್ಚಿರುವ ಭಾಗದ ಹೆದ್ದಾರಿಯನ್ನು ಈ ಮಟ್ಟಕ್ಕೆ ಹದಗೆಡಿಸಿ ಜನರ ನೆಮ್ಮದಿ ಹಾಳು ಮಾಡಿ, ಜನರ ಪ್ರಾಣದ ಮೇಲೆ ಚೆಲ್ಲಾಟವಾಡುವ ಕಣ್ಣಾಮುಚ್ಚಾಲೆ ಆಟ ಇನ್ನಾದರೂ ಕೊನೆಗೊಳ್ಳಬೇಕಾದ ಅಗತ್ಯವಿದೆ.ಕೇರಳ ಮಾದರಿ ಬಾಯಲ್ಲಿ ಮಾತ್ರ!ರಸ್ತೆಗೆ ಸಂಬಂಧಿಸಿದ ಸಭೆಗಳಲ್ಲಿ ಆಗಾಗ ಕೇರಳ ಮಾದರಿಯ ಚರ್ಚೆ ನಡೆಯುತ್ತದೆ. ತಲಪಾಡಿಯಿಂದಾಚೆ, ಸಪೂರವಾಗಿದ್ದ ರಸ್ತೆಯನ್ನು ಷಟ್ಪಥ ಮಾಡುವ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಅತ್ತ ನಡೆಯುತ್ತಿದ್ದರೂ ನಿತ್ಯ ಸಂಚರಿಸುವ ವಾಹನಗಳಿಗೆ ಅದರ ಬಿಸಿ ತಟ್ಟದಂತೆ ವ್ಯವಸ್ಥಿತ ರೀತಿಯಲ್ಲಿ ಕಾಮಗಾರಿ ನಡೆಯುತ್ತಿರುವುದನ್ನು ಪ್ರಸ್ತಾಪಿಸುತ್ತಲೇ ಇರುತ್ತಾರೆ. ಆದರೆ ದಕ್ಷಿಣ ಕನ್ನಡದಲ್ಲಿ ಅದರ ಒಂದಂಶದ ಅನುಷ್ಠಾನವೂ ಆಗುತ್ತಿಲ್ಲ ಎನ್ನುವುದಂತೂ ನಿಜ.