ಯಕ್ಷಗಾನ ಕಲೆಗೆ ಅಕಾಡೆಮಿಕ್‌ ಟಚ್‌: ಮಂಗಳೂರು ವಿವಿ ಚಿಂತನೆ

KannadaprabhaNewsNetwork |  
Published : Jul 21, 2025, 12:00 AM IST
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್‌.ಧರ್ಮ | Kannada Prabha

ಸಾರಾಂಶ

ಕರಾವಳಿಯ ತುಳು ಭಾಷೆ ಬಳಿಕ ಈಗ ನಾಡಿನ ಹೆಮ್ಮೆಯ ಕಲೆ ಯಕ್ಷಗಾನಕ್ಕೂ ಅಕಾಡೆಮಿಕ್‌ ಟಚ್‌ ನೀಡಲು ಮಂಗಳೂರು ವಿಶ್ವವಿದ್ಯಾಲಯ ಚಿಂತನೆ ನಡೆಸಿದೆ. ಯಕ್ಷಗಾನ ಬಗ್ಗೆ ವಿವಿಧ ಕೋರ್ಸ್‌ ನಡೆಸಲು ಮಂಗಳೂರು ವಿವಿ ಪೂರ್ವಭಾವಿ ಸಿದ್ಧತೆ ನಡೆಸುತ್ತಿದೆ. ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಯಕ್ಷಗಾನ ಬಗ್ಗೆ ವಿಶೇಷ ಕೋರ್ಸ್‌ ಆರಂಭವಾಗಲಿದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿಯ ತುಳು ಭಾಷೆ ಬಳಿಕ ಈಗ ನಾಡಿನ ಹೆಮ್ಮೆಯ ಕಲೆ ಯಕ್ಷಗಾನಕ್ಕೂ ಅಕಾಡೆಮಿಕ್‌ ಟಚ್‌ ನೀಡಲು ಮಂಗಳೂರು ವಿಶ್ವವಿದ್ಯಾಲಯ ಚಿಂತನೆ ನಡೆಸಿದೆ. ಯಕ್ಷಗಾನ ಬಗ್ಗೆ ವಿವಿಧ ಕೋರ್ಸ್‌ ನಡೆಸಲು ಮಂಗಳೂರು ವಿವಿ ಪೂರ್ವಭಾವಿ ಸಿದ್ಧತೆ ನಡೆಸುತ್ತಿದೆ. ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಯಕ್ಷಗಾನ ಬಗ್ಗೆ ವಿಶೇಷ ಕೋರ್ಸ್‌ ಆರಂಭವಾಗಲಿದೆ. ಈ ಹಿಂದೆ ಕುಂಬ್ಳೆ ಸುಂದರ ರಾವ್‌ ಅವರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಇಂತಹ ಪ್ರಯತ್ನ ನಡೆದಿತ್ತು. ಯಕ್ಷಗಾನ ಪಠ್ಯವನ್ನು ಹೊರತಂದು ವಿಶ್ವವಿದ್ಯಾಲಯ ಮಟ್ಟದಲ್ಲಿ ಅನುಷ್ಠಾನಕ್ಕೆ ತರಲು ಎಲ್ಲ ರೀತಿಯ ಸಿದ್ಧತೆಗಳು ನಡೆದಿತ್ತು. ಆದರೆ ಕೊನೆಕ್ಷಣದಲ್ಲಿ ಅದು ಕೈಗೂಡಿರಲಿಲ್ಲ.

ಅದಕ್ಕಾಗಿಯೇ ಜೂನಿಯರ್‌, ಸೀನಿಯರ್‌, ವಿದ್ವತ್‌ ಪೂರ್ವ ಮತ್ತು ವಿದ್ವತ್‌ ಅಂತಿಮ ಈ ನಾಲ್ಕು ಹಂತಗಳ ಯಕ್ಷಗಾನ ಪಠ್ಯಕ್ರಮ ಸಿದ್ಧಪಡಿಸಲಾಗಿತ್ತು. ಇವೆಲ್ಲವೂ ಯಕ್ಷಗಾನ ಅಕಾಡೆಮಿ ನೇತೃತ್ವದಲ್ಲೇ ಸಿದ್ಧಗೊಂಡಿತ್ತು. ಈ ಪಠ್ಯಗಳು ಯಕ್ಷಗಾನ ಅಕಾಡೆಮಿಯ ಸುಪರ್ದಿಯಲ್ಲಿದೆ. ಯಕ್ಷಗಾನ ಅಕಾಡೆಮಿ ಮಾತ್ರವಲ್ಲ, ಉಡುಪಿಯ ಯಕ್ಷಗಾನ ವಿದ್ವಾಂಸರೊಬ್ಬರು, ಪಟ್ಲ ಯಕ್ಷ ಶಿಕ್ಷಣ ವತಿಯಿಂದಲೂ ಯಕ್ಷಗಾನ ಕಲಿಕೆಗೆ ಸಂಬಂಧಿಸಿ ಸಿಲೆಬಸ್‌ ರಚನೆಯ ಕೆಲಸ ನಡೆದಿದೆ.

ತುಳು, ನೃತ್ಯ ಕೋರ್ಸ್‌ ಮಾದರಿಯಲ್ಲಿ ಜಾರಿ: ಮೈಸೂರಿನ ಗಂಗೂಬಾಯಿ ಹಾನಗಲ್‌ ಸಂಗೀತ, ನೃತ್ಯ, ತಾಳವಾದ್ಯ ವಿಶ್ವವಿದ್ಯಾಲಯ ನಡೆಸುವ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗಳ ಮಾದರಿಯಲ್ಲೇ ಯಕ್ಷಗಾನಕ್ಕೆ ಸಂಬಂಧಿಸಿದ ವಿಶೇಷ ಕೋರ್ಸ್‌ ಹಾಗೂ ಪರೀಕ್ಷೆ ನಡೆಸುವ ಬಗ್ಗೆ ಮಂಗಳೂರು ವಿವಿ ಯೋಚಿಸಿದ್ದು, ಪ್ರಾಥಮಿಕ ಹಂತದ ಸಿದ್ಧತೆಗೆ ಮುಂದಾಗಿದೆ. ಈ ನಡುವೆ ಮಂಗಳೂರು ವಿವಿ ನೇತೃತ್ವದಲ್ಲಿ ಈಗಾಗಲೇ ಹೈಸ್ಕೂಲ್‌ ಹಾಗೂ ಪದವಿ ತರಗತಿಗಳಲ್ಲಿ ತುಳು ಭಾಷೆಯನ್ನು ಕೋರ್ಸ್‌ ಆಗಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಂಗಳೂರು ವಿವಿ ಕುಲಪತಿ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರದ ಮುತುವರ್ಜಿಯಲ್ಲಿ ಈ ಬಗ್ಗೆ ಚಿಂತನ, ಮಂಥನ ಆರಂಭವಾಗಿದೆ. ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ, ಮುಂದಿನ ಶೈಕ್ಷಣಿಕ ವರ್ಷದಿಂದ ವಿಶೇಷ ಕೋರ್ಸ್‌ ಆಗಿ ಯಕ್ಷಗಾನ ಅಕಾಡೆಮಿಕ್‌ ಟಚ್‌ ಪಡೆದುಕೊಳ್ಳಲಿದೆ.

ಪಠ್ಯ ಆಯ್ಕೆ ಸುಲಭ:

ಈಗಾಗಲೇ ಯಕ್ಷಗಾನ ಅಕಾಡೆಮಿ, ಉಡುಪಿಯ ವಿದ್ವಾಂಸರು ಹಾಗೂ ಪಟ್ಲ ಯಕ್ಷ ಶಿಕ್ಷಣ ಮತ್ತಿತರರು ಸಿಲೆಬಸ್‌ ಮಾದರಿ ರಚಿಸಿರುವುದರಿಂದ ಅದನ್ನೇ ವಿವಿ ಅಕಾಡೆಮಿಕ್‌ಗೆ ಬೇಕಾದಂತೆ ಪಠ್ಯ ಕ್ರಮ ರಚಿಸಬೇಕಾಗುತ್ತದೆ. ಹೀಗಾಗಿ ಸಿಲೆಬಸ್‌ ರಚಿಸುವ ಹಾದಿ ವಿವಿಗೆ ಸುಲಭವಾಗಲಿದೆ. ವಿದ್ವಾಸರು ಸೇರಿದಂತೆ ಯಕ್ಷಗಾನದ ಪ್ರಮುಖರ ಸಲಹೆ, ಸೂಚನೆಗಳನ್ನು ಪಡೆದುಕೊಂಡು ವಿವಿ ಅಕಾಡೆಮಿಕ್‌ ಅಧ್ಯಯನಕ್ಕೆ ಮುಂದಡಿ ಇಡಲಿದೆ.

--------------ಅಕಾಡೆಮಿಕ್‌ ಅಧ್ಯಯನ ಇದೇ ಮೊದಲು

ಪ್ರಾಚೀನ ಕಲೆಯಾದ ಯಕ್ಷಗಾನ ಪ್ರಸಕ್ತ ಪ್ರಮುಖವಾಗಿ ತೆಂಕು ಮತ್ತು ಬಡಗು ಎಂದು ಎರಡು ವಿಭಾಗಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಯಕ್ಷಗಾನದ ಹುಟ್ಟಿನಿಂದ ತೊಡಗಿ ಇಲ್ಲಿವರೆಗಿನ ಸಾಧನೆಗಳ ಬಗ್ಗೆ ಅಕಾಡೆಮಿಕ್‌ ರೀತಿಯಲ್ಲಿ ಸಮಗ್ರ ಅಧ್ಯಯನ ಇದುವರೆಗೆ ನಡೆದಿಲ್ಲ. ಹಾಗಾಗಿ ಇದು ಕೂಡ ಯಕ್ಷಗಾನದ ತವರು ನೆಲ ಕರಾವಳಿಯಲ್ಲೇ ಅಕಾಡೆಮಿಕ್‌ ಆಗಿ ಅಧ್ಯಯನ ನಡೆಸಿದರೆ ಹೆಚ್ಚು ಅರ್ಥಪೂರ್ಣ ಎಂಬುದು ಯಕ್ಷಗಾನ ಅಭಿಮಾನಿಗಳ ಅಂಬೋಣ.

ಈಗಾಗಲೇ ಕರಾವಳಿಯಲ್ಲಿ 50ಕ್ಕೂ ಅಧಿಕ ವೃತ್ತಿಪರ ಯಕ್ಷಗಾನ ಮೇಳಗಳು ತಿರುಗಾಟ ನಡೆಸುತ್ತಿವೆ. ಇದಲ್ಲದೆ ಅನೇಕ ಸಂಘಸಂಸ್ಥೆಗಳು ಹವ್ಯಾಸಿಯಾಗಿ ಪ್ರದರ್ಶನ ನೀಡುತ್ತಿವೆ. ಬಾಲಕರಿಂದ ತೊಡಗಿ ಮಹಿಳೆಯರು ಕೂಡ ಈಗ ಯಕ್ಷಗಾನ ಕಲಾವಿದರಾಗಿದ್ದಾರೆ. ಶಾಲಾ ಕಾಲೇಜುಗಳಲ್ಲೂ ಯಕ್ಷಗಾನ ತರಬೇತಿ ನಡೆಯುತ್ತಿದೆ. ದೇಶ, ವಿದೇಶಗಳಲ್ಲೂ ಯಕ್ಷಗಾನ ತನ್ನ ಛಾಪನ್ನು ಬೀರಿದರೂ ಅಕಾಡೆಮಿಕ್‌ ಆಗಿ ಇನ್ನೂ ಗುರುತಿಸಿಕೊಂಡಿಲ್ಲ.--------------

ಸಂಗೀತ, ನೃತ್ಯ ವಿಶೇಷ ಕೋರ್ಸ್‌ಗಳ ಮಾದರಿಯಲ್ಲೇ ಯಕ್ಷಗಾನವನ್ನು ಅಕಾಡೆಮಿಕ್ ಆಗಿ ಕಲಿಸಬೇಕು ಎನ್ನುವ ಚಿಂತನೆ ಇದೆ. ಇದಕ್ಕಾಗಿ ಯಕ್ಷಗಾನದ ಹಿರಿಯ ಕಲಾವಿದರು, ತಜ್ಞರ ಜೊತೆ ಸಮಾಲೋಚನೆ ನಡೆಸಿ ಕಾರ್ಯರೂಪಕ್ಕೆ ತರಲು ಉದ್ದೇಶಿಸಲಾಗಿದೆ. ಕರಾವಳಿ ಯಕ್ಷಗಾನದ ಪ್ರದೇಶವಾದ್ದರಿಂದ ಯಕ್ಷಗಾನಕ್ಕೊಂದು ಕೊಡುಗೆ ನೀಡಬೇಕು ಎಂಬುದು ವಿವಿಯ ಸಂಕಲ್ಪ.

-ಪ್ರೊ.ಪಿ.ಎಲ್‌.ಧರ್ಮ, ಕುಲಪತಿ, ಮಂಗಳೂರು ವಿವಿ

-------------

PREV

Latest Stories

ವಿಯೆಟ್ನಾಮ್‌ಗೆ ಈಗ ಬೆಂಗಳೂರಿಂದಲೇ ನೇರ ವಿಮಾನ
ಡಯಾಬಿಟೀಸ್ ಬಾಧಿತರಿಗಾಗಿ ಹುಟ್ಟಿದ ನಂದಿನಿ ಸ್ವಾದ್‌ ರೊಟ್ಟಿ
ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವೆ ಆಗಸ್ಟ್‌ನಲ್ಲಿ ಮೆಟ್ರೋ ಸಂಚಾರ ಶುರು