ಕನ್ನಡಪ್ರಭ ವಾರ್ತೆ ಮಂಗಳೂರು
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯ 6ನೇ ತಿಂಗಳ ಶ್ರಮದಾನ ಭಾನುವಾರ ಬೆಳಗ್ಗೆ 7.30ರಿಂದ 10 ಗಂಟೆವರೆಗೆ ನಗರದ ಪ್ರಧಾನ ಅಂಚೆ ಕಚೇರಿ ಪರಿಸರದಲ್ಲಿ ನಡೆಯಿತು.ಗಣ್ಯರು ಸಾಂಕೇತಿಕವಾಗಿ ರೊಸಾರಿಯೊ ಚರ್ಚ್ ರಸ್ತೆಯನ್ನು ಸ್ವಚ್ಛಗೊಳಿಸಿದರು. ಬಾಲಕೃಷ್ಣ ಭಟ್, ಮೆಹಬೂಬ್, ಡಾ. ತನಿಷ್ಕ್ ನೇತೃತ್ವದಲ್ಲಿ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಪ್ರಾಧ್ಯಾಪಕ ಪ್ರೊ. ರಾಕೇಶ್ ಕೃಷ್ಣ ಮಾರ್ಗದರ್ಶನದಲ್ಲಿ ಬಿಎಸ್ಎನ್ಎಲ್ ಕಚೇರಿ ಹಿಂಭಾಗದ ಆವರಣ ಗೋಡೆಯುದ್ದಕ್ಕೂ ಕಸದ ರಾಶಿ ತೆರವುಗೊಳಿಸಿ ಸ್ವಚ್ಛಗೊಳಿಸಿದರು.ಅನಧಿಕೃತ ಬ್ಯಾನರ್ ತೆರವು: ಹಿರಿಯ ಸ್ವಯಂಸೇವಕರಾದ ಶಿವರಾಂ, ಅನಿರುದ್ಧ್ ನಾಯಕ್, ಡಾ. ಕೃಷ್ಣ ಶರಣ್, ಸಿಎ ವಿಷ್ಣು ಶಾಸ್ತ್ರಿ ಮತ್ತಿತರರು ಫುಟ್‌ಪಾತ್ ಮತ್ತು ಒಳಚರಂಡಿಗಳಲ್ಲಿ ತುಂಬಿದ್ದ ಕಸದ ರಾಶಿ ತೆರವುಗೊಳಿಸಿ ಸ್ವಚ್ಛ ಮಾಡಿದರು. ಕೊಡಂಗೆ ಬಾಲಕೃಷ್ಣ ನಾಯಕ್ ನೇತೃತ್ವದಲ್ಲಿ ಯುವ ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ಅನಧಿಕೃತ ಬ್ಯಾನರ್‌ಗಳನ್ನು ತೆರವುಗೊಳಿಸಿದರು.
ಹಿರಿಯ ಸ್ವಯಂಸೇವಕರಾದ ವಿಠ್ಠಲದಾಸ್ ಪ್ರಭು, ಉದಯ್ ಕೆ.ಪಿ., ತಾರಾನಾಥ ಆಳ್ವ, ಯೋಗೀಶ್ ಕಾಯರ್ತಡ್ಕ, ಉಮಾನಾಥ್ ಕೋಟೆಕಾರ್, ಬಬಿತಾ ಶೆಟ್ಟಿ, ವಸಂತಿ ನಾಯಕ್, ಸುನಂದಾ ಶಿವರಾಂ ನೇತೃತ್ವದಲ್ಲಿ ಅಂಚೆ ಇಲಾಖೆಯ ಉದ್ಯೋಗಿಗಳಾದ ಚಂದ್ರಶೇಖರ ಶೆಟ್ಟಿ, ನಿಶಾನ್, ರಾಜ್‌ಕುಮಾರ್ ಮತ್ತಿತರರು, ಎಸ್‌ಡಿಎಂ ಸ್ನಾತಕೋತ್ತರ ಪದವಿ ವಿಭಾಗದ ಉಪನ್ಯಾಸಕಿ ಪ್ರೊ. ರಮ್ಯ ಶೆಟ್ಟಿ ಹಾಗೂ ಡಾ. ಪ್ರಮೀಳಾ ಶೆಟ್ಟಿ ನೇತೃತ್ವದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಅಂಚೆ ಕಚೇರಿ ಹಾಗೂ ಕಮಿಷನರ್ ಕಚೇರಿ ಹಿಂಭಾಗದ ಆವರಣ ಗೋಡೆಯುದ್ದಕ್ಕೂ ಕಸದ ವಿಲೇವಾರಿ ನಡೆಸಿದರು.ಆರಂಭದಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಸಾನಿಧ್ಯದಲ್ಲಿ ರೊಸಾರಿಯೋ ಚರ್ಚ್ ಧರ್ಮಗುರು ಫಾ. ಆಲ್ಫ್ರೆಡ್, ಇಂಡಿಯನ್ ಮೆಡಿಕಲ್ ಎಸೋಸಿಯೇಷನ್ ಮಂಗಳೂರು ವಿಭಾಗದ ಅಧ್ಯಕ್ಷ ಡಾ. ರಂಜನ್ ಹಾಗೂ ಅಂಚೆ ಇಲಾಖೆ ಅಧಿಕಾರಿ ಶಂಕರ್ ಕೆ. ಜಂಟಿಯಾಗಿ ಹಸಿರುನಿಶಾನೆ ತೋರಿ, ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಡಾ. ಧನೇಶ್ ಕುಮಾರ್, ನಿವೃತ್ತ ಯೋಧರಾದ ಬೆಳ್ಳಾಲ ಗೋಪಿನಾಥ್‌ರಾವ್, ಕಮಲಾಕ್ಷ ಪೈ ಮತ್ತು ಸತ್ಯನಾರಾಯಣ ಇದ್ದರು.ಸರ್ವಿಸ್ ಬಸ್ ನಿಲ್ದಾಣ ಪರಿಸರಕ್ಕೆ ಹೊಸ ಲುಕ್
ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದ ಒಂದು ಬದಿಯ ತ್ಯಾಜ್ಯ ಕೊಂಪೆಯಾಗಿದ್ದ ಪ್ರದೇಶದ ಚಿತ್ರಣವೇ ಈಗ ಬದಲಾಗಿದೆ. ಫೆಬ್ರವರಿ ತಿಂಗಳ ಸ್ವಚ್ಛ ಮಂಗಳೂರು ಶ್ರಮದಾನದಲ್ಲಿ ಕಸದ ರಾಶಿಯನ್ನು ತೆರವುಗೊಳಿಸಲಾಗಿದ್ದು, ಈ ಭಾಗಕ್ಕೆ ನವೀನತೆಯ ಸ್ಪರ್ಶ ಸಿಕ್ಕಿದೆ. ಬಸ್ ನಿಲ್ದಾಣದ ಬಲ ಬದಿಯಲ್ಲಿ ರಾಶಿ ಬಿದ್ದಿದ್ದ ಕಸವನ್ನೆಲ್ಲ ತೆರವುಗೊಳಿಸಿ ಉಪಯೋಗಕ್ಕೆ ಯೋಗ್ಯವಾಗುವಂತೆ ಮಾಡಲಾಗಿದೆ. ಗೋಡೆಗೆ ಬಣ್ಣ ಬಳಿಯಲಾಗಿದ್ದು, ವಿದ್ಯಾರ್ಥಿಗಳ ಕಲಾ ಕುಂಚದಿಂದ ಬಗೆಬಗೆಯ ಕಲಾಕೃತಿಗಳು ಅರಳಿವೆ. ಅವ್ಯವಸ್ಥೆಯಿಂದ ಕೂಡಿದ್ದ ಪ್ರದೇಶ ಇದೀಗ ಸಾರ್ವಜನಿಕರನ್ನು ಆಕರ್ಷಿಸುವ ರೀತಿ ಕಂಗೊಳಿಸುತ್ತಿದೆ. ಮೂತ್ರ ವಿಸರ್ಜನೆ ಮಾಡದಂತೆ ಅಲ್ಲಲ್ಲಿ ಗೋಡೆ ಬರಹಗಳನ್ನು ಬರೆಯಲಾಗಿದೆ. ಎಂಆರ್‌ಪಿಎಲ್ ಸಂಸ್ಥೆ, ಬಸ್ ಮಾಲೀಕರು, ಸಿಬಂದಿ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.