ಚಿಕ್ಕಬಳ್ಳಾಪುರ : ಮಾವಿನ ಬೆಲೆ ಈ ಬಾರಿ ಬಲು ದುಬಾರಿಯಾಗಲಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರ ಕೈ ಸುಡುವುದು ಗ್ಯಾರಂಟಿ. ತೀವ್ರ ಹವಾಮಾನ ವೈಪರೀತ್ಯದ ಪರಿಣಾಮ ಶೇ.70 ರಷ್ಟು ಮಾವಿನ ಫಸಲಿನ ಇಳುವರಿ ಕುಸಿತ ಕಂಡಿದ್ದು, ಶೇ 30 ರಷ್ಟು ಮಾತ್ರ ಫಸಲು ಕೈಗೆ ಬರಲಿದೆ. ಪರಿಣಾಮ ಮಾರುಕಟ್ಟೆಯಲ್ಲಿ ಮಾವಿನ ಬೆಲೆ ಗ್ರಾಹಕರ ಪಾಲಿಗೆ ದುಪ್ಪಟ್ಟಾಗಲಿದೆ. ಏಷ್ಯಾ ಖಂಡದಲ್ಲಿಯೇ ಹೆಚ್ಚು ಮಾವು ಬೆಳೆಯುವ ಹೆಗ್ಗಳಿಕೆ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಇದೆ.
ಜಿಲ್ಲೆಯಲ್ಲಿ 10,500 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಬೆಳೆಯಿದ್ದು, ಚಿಂತಾಮಣಿ ತಾಲೂಕೊಂದರಲ್ಲಿಯೇ ಸುಮಾರು 8 ಸಾವಿರ ಹೆಕ್ಟೇರ್ ಮಾವು ಬೆಳೆಯಲಾಗುತ್ತಿದೆ. ಪ್ರತಿ ಹೆಕ್ಟರ್‌ಗೆ ಸರಾಸರಿ 3 ರಿಂದ 4 ಟನ್ ಮಾವು ಸಿಗಬಹುದು. ಅದರ ಲೆಕ್ಕಾಚಾರದಂತೆ ಜಿಲ್ಲೆಯಲ್ಲಿ ಈ ಬಾರಿ 35 ರಿಂದ 40 ಸಾವಿರ ಟನ್‌ನಷ್ಟು ಮಾವು ಮಾರುಕಟ್ಟೆಗೆ ಬರಲಿದೆ. ಕಳೆದ ವರ್ಷವೂ ವ್ಯಾಪಕ ಮಳೆಯಿಂದ ನಿರೀಕ್ಷಿತ ಮಾವಿನ ಫಸಲು ಬರಲಿಲ್ಲ. ಈ ಬಾರಿ ಉಷ್ಣಾಂಶ ತೀವ್ರತೆ ಹಾಗೂ ಬರದಿಂದಾಗಿ ಶೇ.70 ಮಾವಿನ ಬೆಳೆಯನ್ನು ರೈತರು ಕಳೆದುಕೊಳ್ಳುವಂತಾಗಿದೆ.
ಜೂನ್ ತಿಂಗಳ ಎರಡನೇ ವಾರದಲ್ಲಿ ಮಾವು ಚಿಕ್ಕಬಳ್ಳಾಪುರದ ಮಾರುಕಟ್ಟೆ ಪ್ರವೇಶಿಸುತ್ತದೆ. ಅಲ್ಲಿವರೆಗೂ ಬಿಸಿಲು ತಾಪಮಾನ ಮತ್ತು ಕೀಟಬಾಧೆಯಿಂದ ಮಾವನ್ನು ರಕ್ಷಿಸಿಕೊಳ್ಳಲು ರೈತರು ವಿವಿಧ ಕಸರತ್ತು ಮಾಡುತ್ತಿದ್ದಾರೆ.
ನೀರಾವರಿ ಸೌಲಭ್ಯ ಇರುವವರು ಮಾವಿನ ಮರಗಳಿಗೆ ನೀರು ಕೊಡುತ್ತಿದ್ದಾರೆ. ನೀರಾವರಿಯಿಲ್ಲದಿರುವರು ಟ್ಯಾಂಕರ್ ಗಳ ಮೂಲಕ ಗಿಡಗಳಿಗೆ ಮಾವನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಬಿಸಿಲು ಮತ್ತು ಕೀಟಬಾಧೆಯಿಂದಾಗಿ ಮಾವಿನ ಕಾಯಿಗಳು ಉದುರುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ತಾಪಮಾಣ ಹೆಚ್ಚಳದಿಂದ ಇತ್ತೀಚಿಗೆ ಕಾಣಿಸಿಕೊಂಡಿರುವ ಬಿಸಿಗಾಳಿ ಅಂತೂ ಮಾವು ಬೆಳೆಗಾರರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದು ಕೊಯ್ಲಿಗೆ ಬಂದಿರುವ ಮಾವು ಬೆಳೆಗಾರರ ಕಣ್ಣು ಮುಂದೆ ನೆಲಕ್ಕೆ ಉದುರುತ್ತಿರುವುದು ಮಾವು ಬೆಳೆಗಾರರು ಪರಿಸ್ಥಿತಿ ನಿಜಕ್ಕೂ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ಮಾವು ಹೂ ಬಿಡಲು ಪ್ರಾರಂಭವಾದಾಗಿದಿಂದಲೂ ಇಲ್ಲಿಯವರೆಗೂ ಮಳೆ ಬಂದಿಲ್ಲ. ಆದ ಕಾರಣ ಭೂಮಿಯಲ್ಲಿ ತೇವಾಂಶವೂ ಇಲ್ಲದಿರುವುದರಿಂದ ಮಾವಿನ ಬೆಳೆಗೆ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಕೇವಲ ಶೇ.10 ರಷ್ಟು ಮಾತ್ರ ನೀರಾವರಿ ಸೌಲಭ್ಯ ಇರುವುದು. ಉಳಿದಂತೆ ಶೇ.90ರಷ್ಟು ಮಳೆಯಾಧಾರಿತ ಪ್ರದೇಶದಲ್ಲಿ ಮಾವಿನ ಬೆಳೆ ಇರುವುದರಿಂದ ಉಳ್ಳವರು ಮಾತ್ರ ಟ್ಯಾಂಕರ್‌ನಿಂದ ನೀರು ಕೊಡಲು ಸಾಧ್ಯವಾಗಿದೆ. ಉಳಿದವರು ಮಳೆಯನ್ನೇ ನಂಬಿದ್ದಾರೆ.
ಪ್ರಸ್ತುತ ಆಂಧ್ರದ ಮಾವು ಜಿಲ್ಲೆಯ ಮಾರುಕಟ್ಟೆ ಪ್ರವೇಶಿಸಿದೆ. ಆಂಧ್ರವು ತೋತಾಪುರಿ, ಬೇನಿಷಾ,ರಸಪುರಿ, ಅಲ್ಫಾನ್ಸೊ, ಮಲ್ಲಿಕಾ, ಬೈಗನಪಲ್ಲಿ, ಪೈರಿ, ನೀಲಂ, ಮಲ್ಗೋವಾ ಮಾವಿಗೆ ಹೆಚ್ಚು ಹೆಸರುವಾಸಿಯಾಗಿದೆ. ಜಿಲ್ಲೆಯ ಮಾವು ಮಾರುಕಟ್ಟೆಗೆ ಪ್ರವೇಶಿಸುವ ಮುನ್ನವೇ ಆಂಧ್ರದ ಮಾವು ಜಿಲ್ಲೆಯ ಜನರ ಕೈ ಸೇರುತ್ತಿದೆ. ಆಂಧ್ರದ ಮಾವಿಗೆ ಜಿಲ್ಲೆಯಲ್ಲಿ ಹೆಚ್ಚಿನ ಬೇಡಿಕೆ ಕಂಡು ಬಂದಿದೆ. ಕೆಜಿ ಮಾವಿನ ಹಣ್ಣು 80 ರಿಂದ 150 ರು.ಗಳವರೆಗೂ ಮಾರಾಟವಾಗುತ್ತಿದೆ. ಜಿಲ್ಲೆಯ ಮಾವು ಮಾರುಕಟ್ಟೆಗೆ ಬರುವವರೆಗೂ ಆಂಧ್ರದ ಮಾವುಗೆ ಬೆಲೆ ಇರಲಿದೆ.