ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಪಟ್ಟಣಕ್ಕೆ ಸಮೀಪದಲ್ಲಿರುವ ತರಲಘಟ್ಟ ಗ್ರಾಪಂ 3 ದಶಕದಿಂದ ಬಿಜೆಪಿ ವಶದಲ್ಲಿದ್ದು, ಶನಿವಾರ ನಡೆದ ಅಧ್ಯಕ್ಷ ಹಾಗೂ ಉಪಾದ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಮಂಜಮ್ಮ ಜ್ಞಾನೇಶ್ ಅಧ್ಯಕ್ಷರಾಗಿ ಹಾಗೂ ಕುಮಾರನಾಯ್ಕ ತಿಮ್ಲಾಪುರ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಕಾರ್ಯನಿರ್ವಹಿಸಿದರು.
16 ಸದಸ್ಯ ಬಲದ ಗ್ರಾ.ಪಂ.ಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ತಲಾ 8 ಸದಸ್ಯರಿದ್ದು, 14 ಮತ ಗಳಿಸಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದರು. ಆ ಮೂಲಕ ಎಲ್ಲರ ಹುಬ್ಬೇರಿಸುವ ಜತೆಗೆ ಕಮಲ ಪಾಳಯದಲ್ಲಿ ತಳಮಳ ಹುಟ್ಟಿಹಾಕಿ, ಕಾಂಗ್ರೆಸ್ ಪಾಳಯದಲ್ಲಿ ಆತ್ಮಶಕ್ತಿ ವೃದ್ಧಿಸಿದೆ.ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಕೆಲವೇ ಸಮಯದಲ್ಲಿಯೇ ನಡೆದ ಈ ಅನಿರೀಕ್ಷಿತ ಬೆಳವಣಿಗೆ ತಾಲೂಕಿನಲ್ಲಿ ಪಕ್ಷದ ಸಂಘಟನೆಗೆ ಭವಿಷ್ಯದಲ್ಲಿ ಸವಾಲಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಈ ಪರಂಪರೆ ಇತರೆ ಗ್ರಾ.ಪಂ.ಗಳಲ್ಲಿ ಪುನರಾವರ್ತನೆ ಆಗದಂತೆ ಎಲ್ಲ ರೀತಿಯ ಎಚ್ಚರಿಕೆ ಬಿಜೆಪಿ ವಹಿಸುವುದೋ ಅಥವಾ ಕಾಂಗ್ರೆಸ್ ಆತ್ಮವಿಶ್ವಾಸ ಇಮ್ಮಡಿಯಾಗಿ ಆಪರೇಷನ್ ಹಸ್ತದ ಪ್ರಭಾವ ಹೆಚ್ಚಾಗುವುದೋ ಕಾದುನೋಡಬೇಕು.
- - - -22ಕೆ.ಎಸ್.ಕೆ.ಪಿ2: