- ಏಕವಚನ ಬಳಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ವಿರುದ್ಧ ಲೋಕಸಭೆ ಚುನಾವಣೆ ಪರಾಚಿತ ಅಭ್ಯರ್ಥಿ ಗರಂ ।
ಕನ್ನಡಪ್ರಭ ವಾರ್ತೆ, ದಾವಣಗೆರೆ ಅಹಿಂದ ವರ್ಗಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ, ಶೋಷಿತ ವರ್ಗಗಳ ಮುಖ್ಯಮಂತ್ರಿ ಸಿದ್ದರಾಮಯ್ಯ ಪದಚ್ಯುತಿಗೆ ನಡೆದ ಕುತಂತ್ರಗಳ ವಿರುದ್ಧ ಅಹಿಂದ ವರ್ಗದವನಾಗಿ ನಾನು ಧ್ವನಿ ಎತ್ತಿದ್ದನ್ನೇ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಹಾಪರಾಧ ಎಂಬಂತೆ ಬಿಂಬಿಸಿದ್ದು ಸರಿಯಲ್ಲ ಎಂದು ಲೋಕಸಭೆ ಚುನಾವಣೆ ಪರಾಜಿತ ಅಭ್ಯರ್ಥಿ ಜಿ.ಬಿ. ವಿನಯಕುಮಾರ ತೀವ್ರವಾಗಿ ಆಕ್ಷೇಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಿಂದ ವರ್ಗದ ಪರವಾಗಿದ್ದೇನೆಂದು ಬಿಂಬಿಸಿಕೊಳ್ಳುವ ಪಕ್ಷದ ಜಿಲ್ಲಾಧ್ಯಕ್ಷನಾಗಿ, ಅದೇ ವರ್ಗಗಳನ್ನು ಪ್ರತಿನಿಧಿಸುತ್ತಿರುವ ನನ್ನ ವಿರುದ್ಧ ಏಕವಚನದಲ್ಲಿ ಎಚ್.ಬಿ.ಮಂಜಪ್ಪ ಮಾತನಾಡಿದ್ದು ಶೋಷಿತ ವರ್ಗಗಳ ದುರಾದೃಷ್ಟ ಎಂದರು.ಜಾತಿ ಜಾತಿಗಳ ಮಧ್ಯೆ ದ್ವೇಷ ಹರಡುತ್ತಿರುವುದಾಗಿ ಎಚ್.ಬಿ.ಮಂಜಪ್ಪ ಮಿಥ್ಯಾರೋಪ ಮಾಡಿದ್ದಾರೆ. ಲೋಕಸಭೆ ಚುನಾವಣೆಗೆ 2 ದಿನ ಮುಂಚೆ ಕ್ಷೇತ್ರದ ಕುರುಬ ಸಮಾಜದ ಸಭೆಯನ್ನು ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆಸಿ, ಪಕ್ಷೇತರ ಅಭ್ಯರ್ಥಿ ವಿನಯಕುಮಾರಗೆ ಒಂದೇ ಒಂದು ಓಟು ಸಹ ಹಾಕಬಾರದೆಂದು ಮುಖ್ಯಮಂತ್ರಿ ಅವರಿಂದ ಹೇಳಿಸಿದ್ದು ಯಾರು? ಹೊನ್ನಾಳಿ ಸಭೆಯಲ್ಲಿ ಒಬ್ಬ ಕುರುಬ ಜಾತಿಯ ವ್ಯಕ್ತಿ ಸ್ಪರ್ಧಿಸಿದ್ದಾನೆ ಅಂತಾ ಓಟು ಹಾಕುತ್ತೀರಾ ಅಂತಾ ಹೇಳಿಸಿದ್ದು ಯಾರು ಎಂದು ಪ್ರಶ್ನಿಸಿದರು.
ಮುಖಂಡರಾದ ಸೊಸೈಟ್ ಮೊಹಮ್ಮದ್ ಅಲ್ತಾಫ್, ಜಗಳೂರುಪ್ರಸನ್ನಕುಮಾರ ಇತರರು ಇದ್ದರು.
ಬಾಕ್ಸ್-1* ವಲಸಿಗನಲ್ಲ, ನನ್ನೂರು ಕಕ್ಕರಗೊಳ್ಳ - ಕಾಂಗ್ರೆಸ್ಸಿನಿಂದ ಉಚ್ಚಾಟಿಸಲಿ, ವಿಧಾನಸಭೆಗೆ ಸ್ಪರ್ಧಿಸುವೆ ಎಂದ ವಿನಯಕುಮಾರ
ಚುನಾವಣೆ ಕಾರಣಕ್ಕೆ ಇಲ್ಲಿಗೆ ವಲಸೆ ಬಂದವನು ನಾನಲ್ಲ. ನನ್ನ ಊರು, ನಾನು ಹುಟ್ಟಿದ ಊರು ಕಕ್ಕರಗೊಳ್ಳ. ಸಾಧನೆ ಮಾಡಲೆಂದೇ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದೇನೆ ಎಂದು ಜಿ.ಬಿ.ವಿನಯಕುಮಾರ ಹೇಳಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಒಂದು ಕುಟುಂಬದ ಪರ ಮಾತನಾಡುತ್ತಿದ್ದಾರೆ. ಆದರೆ, ವಿನಯಕುಮಾರ ಸಮಸ್ತ ಶೋಷಿತ ವರ್ಗಗಳ ಪರವಾಗಿ ಮಾತನಾಡುತ್ತಿದ್ದಾನೆ. ಈ ಸತ್ಯವನ್ನು ಜನರು ಸಹ ಅರಿತಿದ್ದಾರೆ. ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರಿಗೆ ಸದ್ಯ ಅಭದ್ರತೆ ಕಾಡುತ್ತಿದೆ ಎಂದರು.
- - -
ಟಾಪ್ ಕೋಟ್ ಯಾರ ಹಂಗಿನಲ್ಲೂ ನಾನು ಇಲ್ಲ. ಸ್ವಾಭಿಮಾನಿಯಾಗಿ, ಸ್ವತಂತ್ರವಾಗಿಯೇ ಇದ್ದೇನೆ. ಬಡ, ಮಧ್ಯಮ ವರ್ಗಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲೆಂದು ತರಬೇತಿ ಕೇಂದ್ರಗಳನ್ನು ಇಲ್ಲಿ ಆರಂಭಿಸಲಿದ್ದೇನೆ. ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ, ಸರ್ಕಾರಿ ಶಾಲೆಗಳನ್ನು ಉಳಿಸಿ, ಅಭಿಯಾನ ಪ್ರಾರಂಭಿಸುತ್ತಿದ್ದೇನೆ - ಜಿ.ಬಿ.ವಿನಯಕುಮಾರ, ಸ್ವಾಭಿಮಾನಿ ಬಳಗ- - - -14ಕೆಡಿವಿಜಿ13: