ಕನ್ನಡಪ್ರಭ ವಾರ್ತೆ ಕಲಬುರಗಿ
ಆಧುನಿಕ ಸಮಾಜದಲ್ಲಿ ಮಾನವೀಯ ಮೌಲ್ಯ ಮಾಯವಾಗಿದೆ. ಇಡೀ ಮನುಕುಲ ಮನುಷ್ಯತ್ವದ ಬರಗಾಲವನ್ನು ಅನುಭವಿಸುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸೂಕ್ಷ್ಮ ಸಂವೇದನೆ ಮತ್ತು ಮಾನವತ್ವ ಪ್ರಜ್ಞೆಯುಳ್ಳ ಕಲಾಕೃತಿಗಳನ್ನು ರಚಿಸುವ ಮೂಲಕ ಮನುಷ್ಯತ್ವ ಪ್ರಜ್ಞೆ ಬೆಳೆಸಿ ಸಮಾಜವನ್ನು ಸಂರಕ್ಷಿಸಲು ಕಲಾವಿದರಿಂದ ಮಾತ್ರ ಸಾಧ್ಯ ಎಂದು ಹಿರಿಯ ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕ ಪ್ರೊ. ಆರ್.ಕೆ. ಹುಡುಗಿ ಅಭಿಪ್ರಾಯಪಟ್ಟರು.ಕಲಬುರಗಿಯ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಹಾಗೂ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಲಬುರಗಿ ರಂಗಾಯಣದಲ್ಲಿ ಆಯೋಜಿಸಿದ ದೃಶ್ಯ ಬೆಳಕು ಪ್ರಶಸ್ತಿ ಪ್ರದಾನ ಗೌರವ ಪುರಷ್ಕಾರ ಹಾಗೂ 10ನೇ ವಾರ್ಷಿಕ ಕಲಾ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ದೇಶದಲ್ಲಿ ಸರ್ವಶ್ರೇಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದರು ಸಹ ವರ್ತಮಾನದ ಕೃಷಿ ಕಾಯ್ದೆಗಳನ್ನು ದಿಕ್ಕರಿಸಿ ಹೋರಾಟ ಮಾಡಬೇಕಾದ ದುಸ್ಥಿತಿ ಬಂದಿದೆ. ಇಡೀ ದೇಶಕ್ಕೆ ಅನ್ನದಾತರಾಗಿರುವ ರೈತರ ಪರ ಧ್ವನಿ ಅಡಗಿಸುವ ಹುನ್ನಾರ ನಡೆಯುತ್ತಿದ್ದರು ಜನರು ಮೌನವಾಗಿದ್ದಾರೆ. ರೈತರು, ಕೂಲಿ ಕಾರ್ಮಿಕರು, ದುರ್ಬಲರು, ದೀನದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅಮಾನವೀಯ ಘಟನೆಗಳನ್ನು ವಿರೋಧಿಸುವ ಮನಸ್ಥಿತಿಯನ್ನು ಬೆಳೆಸಿ ಸಮಾಜವನ್ನು ಪುನರ್ ರೂಪಿಸಬೇಕಿರುವುದು ಇಂದಿನ ಅಗತ್ಯವಿದೆ ಎಂದರು.ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ದೃಶ್ಯ ಬೆಳಕು ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರ ಪ್ರಾವೀಣ್ಯತೆಯಿಂದ ರಚಿಸಿದ ಕಲೆಗಳಿಂದ ಚರಿತ್ರೆಯನ್ನು ನೆನೆಪಿಸುತ್ತವೆ. ಇಲ್ಲಿ ಕಲಾವಿದರ ಸೇವೆಯಿಂದ ದಾಖಲಾರ್ಹ ಕೃತಿಗಳು ಮೂಡಿವೆ. ದೃಶ್ಯ ಬೆಳಕು ವೇದಿಕೆ ನಿರಂತರವಾಗಿ ಮಾಡುತ್ತಿರುವ ಶಿಬಿರ ಮತ್ತು ಕಾರ್ಯಕ್ರಮಗಳಿಂದ ಸಮಾಜದ ಜನರಿಗೆ ಜಾಗೃತಿ ಮತ್ತು ಸಮುದಾಯ ಪ್ರಜ್ಷೆ ಬೆಳೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಈ ನಾಡಿಗೆ ಕೀರ್ತಿ ತರುವ ಕೆಲಸ ಈ ಬಾಗದ ಕಲಾವಿದರಿಂದ ಅಗುತಿರುವುದು ಅಭಿನಂದನಾರ್ಹ ಕೆಲಸ ಎಂದರು.
ದೃಶ್ಯ ಬೆಳಕು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಿತ್ರ ಕಲಾವಿದ ಡಾ. ಬಾಬುರಾವ ನಡೋಣಿ ಮಾತನಾಡಿ ಮನುಷ್ಯರನ್ನು ಮನುಷ್ಯರಂತೆ ಕಾಣಬೇಕಿದೆ. ಜೀವಂತ ಸಮಾಜ ಬೆಳವಣಿಗೆಗೆ ಅಗತ್ಯವಿರುವ ಮಾನವೀಯ ಮೌಲ್ಯಗಳನ್ನು ಕಲಾವಿದರು ನೀಡಬೇಕಿದೆ ಎಂದರು.ಹಿರಿಯ ಕಲಾವಿದ ಬಸವರಾಜ ಎಲ್. ಜಾನೆ ಅದ್ಯಕ್ಷತೆ ವಹಿಸಿದ್ದರು. ಅಮರ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಮಹದೇವಪ್ಪ ಎಸ್ ಶಿಲ್ಪಿ,ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಬಸವರಾಜ ಎಲ್. ಜಾನೆ ಅವರನ್ನು ಸನ್ಮಾನಿಸಲಾಯಿತು. 10ನೇ ವಾರ್ಷಿಕ ಕಲಾ ಶಿಬಿರದಲ್ಲಿ ಅತ್ಯುತ್ತಮ ಚಿತ್ರಕಲಾಕೃತಿಗಳನ್ನು ರಚಿಸಿದ ಚಿತ್ರಕಲಾವಿದರಾದ ಜಗದೀಶ್ ಕಾಂಬಳೆ, ಸಬ್ರೀನ್ ತಾಜ್, ಬಿ.ಎನ್. ಪಾಟೀಲ್, ಸಿದ್ದಾರೆಡ್ಡಿ ಯಲ್ಲಪ್ಪ, ದಾನಯ್ಯ ಚೌಕಿಮಠ ಹಾಗೂ ಶಿವಶರಣ ಡೊಣ್ಣೂರಕರ್ ಅವರನ್ನು ಗೌರವಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಎರಡು ದಿನಗಳ ಕಲಾಶಿಬಿರದಲ್ಲಿ ಭಾಗವಿಸಿ ಕಲಾಕೃತಿ ರಚಿಸಿದ ಕಲಾವಿದರಿಗೆ ನೆನಪಿನ ಕಾಣಿಕೆ ಮತ್ತು ಪ್ರಮಾಣಪತ್ರ ನೀಡಲಾಯಿತು.
ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಡಾ. ಪಿ. ಪರಶುರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುವಿವಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಸಂತೋಷ್ ಕಂಬಾರ ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕ ಸೂರ್ಯಕಾಂತ ನಂದೂರು ನಿರೂಪಿಸಿ ವಂದಿಸಿದರು.