ಕನ್ನಡಪ್ರಭ ವಾರ್ತೆ ಮಂಡ್ಯ
ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ಎಚ್.ಟಿ.ಮಂಜು, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಮರು ಆಯ್ಕೆ ಬಯಸಿ ನಿರ್ದೇಶಕ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಕೆಬ್ಬಳ್ಳಿ ರಾಜು ಉಮೇದುವಾರಿಕೆ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಶನಿವಾರ (ಜ.25) ಕೊನೆಯ ದಿನ. ಶುಭ ಶುಕ್ರವಾರದಂದು ಪ್ರಬಲ ಆಕಾಂಕ್ಷಿಗಳು ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶಿಸುತ್ತಾ ಅಖಾಡ ಪ್ರವೇಶಿಸಿದರು. ಶಾಸಕ ರವಿಕುಮಾರ್ ಕೂಡ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಬೆಂಬಲಿತ ಅಭ್ಯರ್ಥಿಗೆ ಸಾಥ್ ನೀಡಿದ್ದರು.ಮಂಡ್ಯ ತಾಲೂಕಿನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಅವರು ಚುನಾವಣಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಿದರು. ನಗರಸಭೆ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಅರುಣ್ ಕುಮಾರ್, ಸದಸ್ಯ ರಾಮಲಿಂಗಯ್ಯ ಇದ್ದರು.
ಕೆ. ಆರ್.ಪೇಟೆ ತಾಲೂಕಿನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಶಾಸಕ ಎಚ್.ಟಿ. ಮಂಜು ನಾಮಪತ್ರ ಸಲ್ಲಿಸಿದರು. ಶಾಸಕರಾಗಿ ಆಯ್ಕೆಯಾಗಿದ್ದರೂ ಮನ್‌ಮುಲ್ ಆಡಳಿತ ಮಂಡಳಿಗೆ ಮರು ಆಯ್ಕೆ ಬಯಸಿ ಸ್ಪರ್ಧೆಗಿಳಿದಿರುವುದು ಒಂದು ವಿಶೇಷವಾಗಿದೆ.
ಜಿಲ್ಲಾಧಿಕಾರಿ ಕಚೇರಿ ಬಳಿ ಜನಜಂಗುಳಿ:
ನೂರಾರು ಕಾರುಗಳಲ್ಲಿ ಆಗಮಿಸಿದ್ದ ಬೆಂಬಲಿಗರು ರಸ್ತೆಯ ಎರಡೂ ಬದಿಗಳಲ್ಲಿ ಕಾರುಗಳನ್ನು ನಿಲ್ಲಿಸಿದ್ದರು. ಅತಿ ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು, ಬೆಂಬಲಿಗರು ರಸ್ತೆಯಲ್ಲಿ ನಿಂತಿದ್ದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಯಿತು. ಬೆಂಬಲಿತ ಅಭ್ಯರ್ಥಿ ಪರವಾಗಿ ಜಯಘೋಷಗಳನ್ನು ಮೊಳಗಿಸಿದರು. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರು ಆಗಮಿಸಿ ಅಭ್ಯರ್ಥಿಗಳಿಗೆ ಶುಭ ಕೋರಿದರು.