ಕನ್ನಡಪ್ರಭ ವಾರ್ತೆ ಹಾಸನ
ಮಹಾನಗರ ಪಾಲಿಕೆಯಲ್ಲಿ ಕೆಲಸವೇ ಆಗದೇ ಎಷ್ಟೋ ಕಾಮಗಾರಿಗಳಿಗೆ ಬಿಲ್ ಪಾವತಿ ಮಾಡಿರುವ ಬಗ್ಗೆ ಕ್ರಮಕ್ಕೆ ಸದಸ್ಯರು ಆಗ್ರಹಿಸಿದರು. ಎಲ್ಲಾ ವಾರ್ಡ್‌ಗಳಿಗೆ ಸಮಾನ ಅನುದಾನ ಹಂಚಿಕೆ ಆಗಬೇಕು ಎಂದು ಪಾಲಿಕೆ ಮೇಯರ್ ಗಿರೀಶ್ ಚನ್ನವೀರಪ್ಪ ಹೇಳಿದರಲ್ಲದೇ ಅವರ ಮೊದಲ ಸಭೆಯಲ್ಲಿ ಅನೇಕ ವಿಚಾರಗಳು ಬಿಸಿ ಬಿಸಿ ಚರ್ಚೆಗೆ ಬಂದಿತು.ನಗರದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ರಾಷ್ಟ್ರಕವಿ ಕುವೆಂಪು ಸಭಾಂಗಣದಲ್ಲಿ ಗುರವಾರ ಮೇಯರ್ ಗಿರೀಶ್ ಚನ್ನವೀರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹಲವು ಪ್ರಮುಖ ವಿಷಯಗಳು ಚರ್ಚೆಗೆ ಒಳಗಾದವು. ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ, ಸಾಹಿತಿ ಎಸ್.ಎಲ್. ಭೈರಪ್ಪ ಸೇರಿದಂತೆ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ನಂತರದ ಕಾರ್ಯಸೂಚಿಯಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಬೇಕೆಂಬ ಬೇಡಿಕೆಯನ್ನು ಸದಸ್ಯರು ಪ್ರಬಲವಾಗಿ ಮುಂದಿಟ್ಟರು. ಸಭೆಯಲ್ಲಿ ಮಾತನಾಡಿದ ಮೇಯರ್ ಗಿರೀಶ್, “ಪಾಲಿಕೆಯ ಯಾವುದೇ ಟೆಂಡರ್ ಪ್ರಕ್ರಿಯೆಯನ್ನೂ ಎಲ್ಲ ಸದಸ್ಯರಿಗೂ ಮಾಹಿತಿ ನೀಡಿ, ಅವರ ಸಹಿ ಪಡೆದು ನಂತರವೇ ಪೂರ್ಣಗೊಳಿಸಲಾಗುವುದು. ಕಾಮಗಾರಿ ಲೋಪವಿದ್ದರೆ ಕೇವಲ ಸಭೆಯಲ್ಲಿ ದೂರು ಹೇಳುವುದರಿಂದ ಪ್ರಯೋಜನವಾಗುವುದಿಲ್ಲ. ಲಿಖಿತ ದೂರು ಸಲ್ಲಿಸಿದಲ್ಲಿ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಸ್ಪಷ್ಟಪಡಿಸಿದರು.ಹಿಂದಿನ ಆಯುಕ್ತ ರಮೇಶ್ ಅವರ ಕಾಲದಲ್ಲಿ ನಡೆದಿದ್ದ ಟೆಂಡರ್ ಮ್ಯಾಪಿಂಗ್ ಸಂಬಂಧ ಕ್ರಮ ಕೈಗೊಳ್ಳುವುದಾಗಿ ಪ್ರಸ್ತುತ ಆಯುಕ್ತ ಕೃಷ್ಣಮೂರ್ತಿ ಭರವಸೆ ನೀಡಿದರು. ಸಭೆಯಲ್ಲಿ ಸದಸ್ಯರಾದ ಸಂತೋಷ್, ರಕ್ಷಿತ್, ಮಂಜುನಾಥ್ ಸೇರಿದಂತೆ ಅನೇಕರಿಂದ ಪಾಲಿಕೆಯಲ್ಲಿ ಸ್ಥಾಯಿ ಸಮಿತಿ ರಚಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಗಿರೀಶ್, ಸಮಿತಿ ರಚನೆಗೆ ಅಭ್ಯಂತರವಿಲ್ಲ. ಮುಂದಿನ ಸಭೆಯಲ್ಲಿ ನಡಾವಳಿಯಲ್ಲಿ ಸೇರಿಸಿ, ವಲಯ ಆಯುಕ್ತರ ಮೂಲಕ ಚುನಾವಣಾ ದಿನಾಂಕ ನಿಗಧಿಪಡಿಸಿ ಸಮಿತಿ ರಚನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ, “ಅವಧಿ ಕಡಿಮೆ ಉಳಿದಿರುವ ಸಂದರ್ಭದಲ್ಲಿ ಸಮಿತಿ ರಚನೆ ಏಕೆ? ಎಂದು ಪ್ರಶ್ನಿಸಿದರೂ, ಬಹುತೇಕ ಸದಸ್ಯರು ಸಮಿತಿ ರಚನೆಯಿಂದ ಅಧಿಕಾರ ಹಂಚಿಕೆ ಸಾಧ್ಯವಾಗುತ್ತದೆ ಮತ್ತು ಕೆಲಸಕ್ಕೆ ವೇಗ ಸಿಗುತ್ತದೆ ಎಂದು ಒತ್ತಾಯಿಸಿದರು. ಮೇಯರ್ ಗಿರೀಶ್ ಅವರು ಹನ್ನೆರಡು ದಿನಗಳೊಳಗೆ ಸಭೆ ಕರೆದು ಸಮಿತಿ ರಚನೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಬೃಹತ್ ಜಾಹೀರಾತು ಫಲಕಗಳನ್ನು ಅಳವಡಿಸಿರುವ ಬಗ್ಗೆ ಸದಸ್ಯ ಮಂಜುನಾಥ್, ನರೇಂದ್ರಬಾಬು, ಶಂಕರ್ ಹಾಗೂ ಇತರರು ಅಸಮಾಧಾನ ವ್ಯಕ್ತಪಡಿಸಿದರು. ೧೫ ವರ್ಷ ಅವಧಿಗೆ ಪರವಾನಗಿ ನೀಡಿರುವ ಕುರಿತು ಪ್ರಶ್ನೆ ಎತ್ತಿ, ಇದು ಕಾನೂನು ಬಾಹಿರವಾಗಿದೆ ಎಂದು ಹೇಳಿದರು. ಮೇಯರ್ ಗಿರೀಶ್ ಅವರು ಪಾಲಿಕೆಯ ನಿಯಮಾನುಸಾರ ಪರವಾನಗಿ ನೀಡಲಾಗಿಲ್ಲ. ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.ಡಿವೈಡರ್ ಮಧ್ಯದಲ್ಲಿ ಫಲಕಗಳನ್ನು ಅಳವಡಿಸಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂಬ ವಿಷಯವನ್ನು ಸದಸ್ಯ ಸಂತೋಷ್ ಮುಂದಿಟ್ಟರು. ಆಯುಕ್ತರು ಸಂಬಂಧಪಟ್ಟ ಕಡತವೇ ಇಲ್ಲವೆಂದು ತಿಳಿಸಿದ ಹಿನ್ನೆಲೆಯಲ್ಲಿ ಮೇಯರ್, ಹೊಣೆಗಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಹಲವಾರು ಸದಸ್ಯರು, ಕೆಲಸ ಆಗದೆ ಬಿಲ್‌ಗಳನ್ನು ಪಾವತಿಸಲಾಗಿದೆ ಎಂದು ದೂರಿದರು. ಪಾಲಿಕೆಯ ಅಧಿಕಾರಿ ಚೆನ್ನೇಗೌಡ ಅವರು, ಅಂತಹ ಯಾವುದೇ ಬಿಲ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಮಲ್ಲಿಗೆ ಹೋಟೆಲ್ ಬಳಿಯ ಮಣ್ಣಿನ ರಸ್ತೆಗೆ ಕಳಪೆ ಗುಣಮಟ್ಟದ ಕಾಂಕ್ರೀಟ್ ಹಾಕಲಾಗಿದೆ ಎಂದು ಸದಸ್ಯರು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಮೇಯರ್ ಗಿರೀಶ್, ಲಿಖಿತ ದೂರು ಸಲ್ಲಿಸಿದಲ್ಲಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸಾಮಾನ್ಯ ಸಭೆಯಲ್ಲಿ ಮಹಾನಗರ ಪಾಲಿಕೆ ಉಪಮೇಯರ್ ಹೇಮಲತಾ ಕಮಲ್ ಕುಮಾರ್, ಆಯುಕ್ತ ಕೃಷ್ಣಮೂರ್ತಿ ಹಾಗೂ ಪಾಲಿಕೆಯ ಅನೇಕ ಅಧಿಕಾರಿಗಳು ಹಾಜರಿದ್ದರು.