ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಯೋಜಿಸುವ ಗ್ರಾಮಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಗೈರಾಗಿರುವುದು ಬೇಸರದ ಸಂಗತಿ ಎಂದು ಕಳಲುಘಟ್ಟ ಗ್ರಾಪಂ ಅಧ್ಯಕ್ಷೆ ಸೌಮ್ಯ ಬಿ.ಜಿ. ಹೇಳಿದರು.ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟ ಗ್ರಾಮ ಪಂಚಾಯತಿ ವತಿಯಿಂದ 2024-25ನೇ ಸಾಲಿನ ಗ್ರಾಮ ಸಭೆ ಹಾಗೂ ಮಹಿಳಾ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿ, ಜನರ ಭಾಗವಹಿಸುವಿಕೆ ಹೆಚ್ಚಾಗಬೇಕೆಂದರೆ, ಅಧಿಕಾರಿಗಳು ಗ್ರಾಮಸಭೆಗೆ ಆಗಮಿಸಬೇಕು, ಕೆಲವು ಇಲಾಖೆಗಳು ಗೈರು ಹಾಜರಿ ಬೇಸರ ತರಿಸಿದೆ ಎಂದು ಹೇಳಿದರು.
ಸಭೆ ಆರಂಭವಾಗುತ್ತಿದಂತೆ ಪಿಡಿಒ ಗೀತಾಮಣಿ ಸಿ. ಹಿಂದಿನ ಸಭೆಯ ಚರ್ಚಾ ವಿಷಯಗಳನ್ನು ಓದಿ ಹೇಳಿ ಪರಿಹಾರವಾದ ಯೋಜನೆಗಳು ಹಾಗೂ ವಾರ್ಡ್ ಸಭೆಯ ನಿರ್ಣಯಗಳು ಸೇರಿದಂತೆ ೨೦೨೪-೨೫ನೇ ಸಾಲಿನ ಕ್ರಿಯಾಯೋಜನೆ, ‘ನಮ್ಮ ನಡೆ ಪ್ಲಾಸ್ಟಿಕ್ ನಿಷೇಧದ ಕಡೆ’ ಎಂಬ ವಿಚಾರಗಳ ಬಗ್ಗೆ ತಿಳಿಸಿದರು.ಕೃಷಿ ಇಲಾಖೆಯ ಅಧಿಕಾರಿ ಅಂಜನಾ ಮಾತನಾಡಿ, ಈ ಬಾರಿ ಕಳಲುಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ೧೬೦ ಜನರಿಗೆ ಬೆಳೆ ವಿಮೆ ಸೌಲಭ್ಯದ ಪರಿಹಾರದ ಹಣ ಬಿಡುಗಡೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ರೈತರ ಪ್ರಶ್ನೆಗಳಿಗೆ ಉತ್ತರಿಸುವಾಗ ಒತ್ತಡದಲ್ಲಿ ಕೆಲಸ ನಿರ್ವಹಿಸಲು ಆಗುತ್ತಿಲ್ಲ, ಕೆಲಸ ಬಿಡುವ ಆಲೋಚನೆ ಸಹ ಮಾಡಿದ್ದೇನೆ ಎಂದಾಗ ಹಲವರು ಆಕ್ಷೇಪ ವ್ಯಕ್ತಪಡಿಸಿದರು.ಗ್ರಾಪಂ ಸದಸ್ಯ ಹರೀಶ್ ಮಾತನಾಡಿ, ಬರ ಪರಿಹಾರ ನೀಡುವಾಗ ಹಾನಿಯಾದ ರೈತರಿಗೆ ಹೆಚ್ಚು ಪರಿಹಾರ ನೀಡಿ, ಬೆಳೆ ಸಮೀಕ್ಷೆ ವೈಜ್ಞಾನಿಕವಾಗಿ ಮಾಡಿ, ಕೃಷಿ ಹೊಂಡಕ್ಕೆ ಸಲಕರಣೆಗಳನ್ನು ನೀಡಿಲ್ಲ, ಟಾರ್ಪಲ್‌ಗಳ ವಿತರಣೆ ಸರಿಯಾಗಿ ಆಗಿಲ್ಲ ಎಂದು ದೂರಿದರು.
ಗ್ರಾ.ಪಂ ಉಪಾಧ್ಯಕ್ಷ ಗಿರೀಶ್ ಮಾತನಾಡಿ, ಬೆಳೆ ಸಮೀಕ್ಷೆ ನಡೆಸುವವರು ಎಲ್ಲೋ ಕೂತು ಸಮೀಕ್ಷೆ ಮಾಡುತ್ತಿದ್ದು ವಾಸ್ತವವಾಗಿ ನನ್ನದೇ ಜಮೀನಿನಲ್ಲಿ ೫೦೦ ತೇಗದ ಮರಗಳಿರುವ ಬಗ್ಗೆ ಸಮೀಕ್ಷೆಯಲ್ಲಿ ನಮೂದಿಸಲಾಗಿದೆ. ಆದರೆ ಒಂದೇ ಒಂದು ಮರವನ್ನೂ ನಾನು ನೆಟ್ಟಿಲ್ಲ ಸರಿಯಾಗಿ ಸಮೀಕ್ಷೆ ಮಾಡಬೇಕೆಂದು ಆಗ್ರಹಿಸಿದರು.ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಅಮೃತ ತಮ್ಮ ಇಲಾಖೆಯ ಬಗ್ಗೆ ಮಾಹಿತಿ ನೀಡುವಾಗ ಸಭೆಯಲ್ಲಿದ್ದ ಸಾರ್ವಜನಿಕರು, ಕೆಲವು ಕೆರೆಗಳಲ್ಲಿ ಟೆಂಡರ್ ಮುಗಿದಿದ್ದರೂ ಮೀನುಗಳನ್ನು ಹಿಡಿಯುತ್ತಿದ್ದಾರೆ. ಇವರ ವಿರುದ್ದ ಕ್ರಮವಹಿಸುವಂತೆ ಆಗ್ರಹಿಸಿದರು. ಆಗ ಅಮೃತ ಕ್ರಮದ ಭರವಸೆ ನೀಡಿದರು.
ಸಭೆಯಲ್ಲಿ ನೋಡಲ್ ಅಧಿಕಾರಿ ಹರೀಶ್, ಸದಸ್ಯರಾದ ಲೋಕೇಶ್, ಆನಂದ್, ಹರೀಶ್, ನರಸಿಂಹಮೂರ್ತಿ, ರಂಗೇಗೌಡ, ಶ್ರೀನಿವಾಸ್, ಪದ್ಮಾವತಿ, ನರಸಮ್ಮ, ರೇಷ್ಮಾ, ಮಮತ, ಕಾರ್ಯದರ್ಶಿ ನಾಚರಮ್ಮ, ಪಂಚಾಯತಿ ಸಿಬ್ಬಂದಿ, ಗ್ರಾಮಸ್ಥರು, ಅಂಗನವಾಡಿ ಕಾರ್ಯಕರ್ತೆಯರು, ಕಿಸಾನ್ ಸಂಘದ ಪದಾಧಿಕಾರಿಗಳು ಹಾಜರಿದ್ದರು.