ಕನ್ನಡಪ್ರಭ ವಾರ್ತೆ ಮೈಸೂರು
ಮಹಿಳೆಯರಲ್ಲಿ ಹೂಡಿಕೆ ಮಾಡಿ ಪ್ರಗತಿಯನ್ನು ವೇಗಗೊಳಿಸಿ ಎಂಬುದು ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನದ ಘೋಷವಾಕ್ಯವಾಗಿದ್ದು, ಅಂಚೆ ಇಲಾಖೆಯಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗಾಗಿಯೇ ಮೀಸಲಾದ ಹಲವು ಉಳಿತಾಯ ಯೋಜನೆಗಳು ಲಭ್ಯವಿದ್ದು, ಮಹಿಳೆಯರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕಿ ಡಾ. ಏಂಜಲ್ ರಾಜ್ ಮನವಿ ಮಾಡಿದ್ದಾರೆ.ಎಲ್ಲಾ ಅಂಚೆ ಕಚೇರಿಗಳಲ್ಲಿಯೂ ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾ.8 ರವರೆಗೂ ಸುಕನ್ಯಾ ಸಮೃದ್ಧಿ ಮತ್ತು ಮಹಿಳಾ ಸಮ್ಮಾನ್ ಸರ್ಟಿಫಿಕೇಟ್ ಖಾತೆಗಳನ್ನು ಆಧ್ಯತೆಯ ಮೇಲೆ ತೆರೆಯಲಾಗುತ್ತದೆ. ಆದ್ದರಿಂದ ಸಮೀಪದ ಅಂಚೆ ಕಚೇರಿಗಳಲ್ಲಿ ಮಹಿಳೆಯರು ಖಾತೆಗಳನ್ನು ತೆರೆಯುವಂತೆ ಅವರು ಕರೆ ನೀಡಿದ್ದಾರೆ.
ಸುಕನ್ಯಾ ಸಮೃದ್ಧಿ ಖಾತೆಯನ್ನು 1 ರಿಂದ 10 ವರ್ಷದ ಒಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಕೇವಲ 250 ರೂ. ಠೇವಣಿ ಮಾಡುವ ಮೂಲಕ ತೆರೆಯಬಹುದು. ಈ ಖಾತೆಗೆ ಪ್ರಸ್ತತ ಶೇ.8.2 ರಷ್ಟು ಬಡ್ಡಿ ದರವಿದೆ. ಈ ಯೋಜನೆಗೆ ಆದಾಯ ತೆರಿಗೆ ವಿನಾಯಿತಿ ಕೂಡ ಲಭ್ಯವಿದೆ. ಮಹಿಳಾ ಸಮ್ಮಾನ್ ಸೇವಿಂಗ್ಸ್ ಖಾತೆಯಲ್ಲಿ ಕನಿಷ್ಟ 1000 ದಿಂದ ಗರಿಷ್ಠ 2 ಲಕ್ಷ ರೂ. ವರೆಗೂ ಠೇವಣಿ ಇಡಬಹುದು. ಈ ಖಾತೆಗೆ ಶೇ.7.5 ರಷ್ಟು ಬಡ್ಡಿ ದರವಿದ್ದು, ಇದರ ಕಾಲಾವದಿ ಕೇವಲ 2 ವರ್ಷಗಳಾಗಿವೆ. ಈ ಯೋಜನೆಯಲ್ಲಿ 2 ಲಕ್ಷ ರೂ. ಠೇವಣಿ ಇಟ್ಟರೆ ಎರಡು ವರ್ಷಗಳಲ್ಲಿ ಅಸಲು ಮತ್ತು ಬಡ್ಡಿ ಸೇರಿ 2.32 ಲಕ್ಷ ರು. ದೊರೆಯುತ್ತದೆ ಎಂದು ಅವರು ತಿಳಿಸಿದ್ದಾರೆ.ಈಗಾಗಲೇ ಅಂಚೆ ಕಚೇರಿಗಳಲ್ಲಿ ಯಾವುದಾದರೂ ಒಂದು ಉಳಿತಾಯ ಯೋಜನೆಯ ಖಾತೆಯನ್ನು ಹೊಂದಿದ್ದರೆ ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ. ಹೊಸದಾಗಿ ಖಾತೆ ತೆರೆಯುವವರು ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಎರಡು ಭಾವಚಿತ್ರಗಳನ್ನು ನೀಡುವ ಮೂಲಕ ಸಮೀಪದ ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯಬಹುದು ಎಂದು ಅವರು ಹೇಳಿದ್ದಾರೆ.