ಪೊಲೀಸ್ ಇಲಾಖೆ ಸುವರ್ಣ ಸಂಭ್ರಮಕ್ಕೆ ಮ್ಯಾರಥಾನ್‌

KannadaprabhaNewsNetwork | Published : Mar 11, 2024 1:15 AM

ಸಾರಾಂಶ

ದಾವಣಗೆರೆಯಲ್ಲಿ ಭಾನುವಾರ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವ ಹಾಗೂ ಮಾದಕ ದ್ರವ್ಯಗಳ ಕುರಿತು ಅರಿವು ಮೂಡಿಸುವ ಅಂಗವಾಗಿ ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಪೊಲೀಸ್ ಇಲಾಖೆಯ 50ನೇ ವರ್ಷದ ಸುವರ್ಣ ಮಹೋತ್ಸವ ಅಂಗವಾಗಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಮಾದಕ ದ್ರವ್ಯಗಳ ಬಗ್ಗೆ ಅರಿವು ಮೂಡಿಸಲು 10 ಕೆ ಮತ್ತು 5 ಕೆ ಮೀಟರ್ ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗಿದೆ ಎಂದು ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ.ಕೆ.ತ್ಯಾಗರಾಜನ್ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಇಲಾಖೆ ಸುವರ್ಣ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ 10 ಕೆ ಮತ್ತು 5 ಕೆ ಮೀಟರ್ ಮ್ಯಾರಥಾನ್ ಓಟದ ಸ್ಪರ್ಧೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು, ಸಂಘ-ಸಂಸ್ಥೆಗಳು, ವಕೀಲರು, ಪತ್ರಕರ್ತರು, ವಿದ್ಯಾರ್ಥಿ, ಯುವ ಜನರು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದಾರೆ ಎಂದರು.

ಆನ್ ಲೈನ್ ಕ್ಯೂ ಆರ್ ಕೋಡ್ ಮೂಲಕ 650ಕ್ಕೂ ಹೆಚ್ಚು ಸದಸ್ಯರು ನೋಂದಣಿ ಮಾಡಿಸಿದ್ದು, 200ಕ್ಕೂ ಹೆಚ್ಚು ಜನ 10 ಸಾವಿರ ಮೀಟರ್ ಓಟದಲ್ಲಿ, 500 ಜನರು 5 ಸಾವಿರ ಮೀಟರ್ ಓಟದಲ್ಲಿ ನೋಂದಣಿ ಮಾಡಿಸಿದ್ದಾರೆ. ಎಲ್ಲರೂ ಸ್ಪರ್ಧಾ ಮನೋಭಾವದಿಂದ ಮ್ಯಾರಥಾನ್ ಓಟದಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಮಾತನಾಡಿ, ಪೊಲೀಸ್ ಇಲಾಖೆಯ 50ನೇ ವರ್ಷದ ಸುವರ್ಣ ಮಹೋತ್ಸವ ಆಚರಿಸುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಡ್ರಗ್ಸ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ದಾವಣಗೆರೆ ಜಿಲ್ಲಾ ಪೊಲೀಸ್ ಇಲಖೆಯಿಂದ 5 ಸಾವಿರ ಮೀಟರ್ ಮತ್ತು 10 ಸಾವಿರ ಮೀಟರ್ ಓಟ ಆಯೋಜಿಸಿದೆ. ಓಟದ ಜೊತೆ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಕೆಲಸ ಇದಾಗಿದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ, ಹಿರಿಯ ವಕೀಲ ಎಲ್.ಎಚ್.ಅರುಣಕುಮಾರ ಮಾತನಾಡಿ, ದೇಶದಲ್ಲಿ ಕರ್ನಾಟಕ ರಾಜ್ಯದ ಪೊಲೀಸರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ದೇಶದಲ್ಲೇ ಹೆಗ್ಗಳಿಕೆ ಹೊಂದಿದ್ದಾರೆ. ಇಡೀ ಭಾರತದಲ್ಲೇ ಕರ್ನಾಟಕ ಪೊಲೀಸ್ ಇಲಾಖೆ ಅಗ್ರ ಸ್ಥಾನದಲ್ಲಿದೆ. ತನ್ನ ಹಿರಿಮೆ, ಗರಿಮೆಯನ್ನು ನಿರಂತರ ಕಾಯ್ದುಕೊಂಡು ಬಂದಿದೆ. ದಾವಣಗೆರೆ ಜಿಲ್ಲೆಯಲ್ಲೂ ಪೊಲೀಸ್ ಇಲಾಖೆ ಜನಸ್ನೇಹಿಯಾಗಿ, ಜನರ ಒಳಿತಿ ಗಾಗಿ ಕೆಲಸ ಮಾಡುತ್ತಿದೆ ಎಂದರು. ಹಲವಾರು ಜನಪರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಸಂಚಾರಿ ವ್ಯವಸಥೆ, ಮಾದಕ ವಸ್ತುಗಳ ವಿರುದ್ಧ ಅರಿವು, ಅಪರಾಧ ತಡೆ, ಸಾಮಾಜಿಕ ಜಾಲತಾಣಗಳಿಂದ ಆಗುವ ಅಪಾಯ, ಆನ್ ಲೈನ್ ವಂಚಕರ ವಿರುದ್ಧ ಜಾಗೃತಿ, ಮಹಿಳಾ ರಕ್ಷಣೆ, ಆಸ್ತಿಪಾಸ್ತಿ ರಕ್ಷಣೆ ಸೇರಿದಂತೆ ಇಲಾಖೆ ಜನ ಸ್ನೇಹಿ ಕೆಲಸ ಮಾಡುತ್ತಿದೆ. ಸುವರ್ಣ ಮಹೋತ್ಸವದ 5 ದಶಕದ ಹಾದಿ ಪೊಲೀಸ್ ಇಲಾಖೆಗೆ ಸುಲಭದ್ದಾಗಿರಲಿಲ್ಲ.ಈ ಹಾದಿಯಲ್ಲಿ ಉತ್ತಮ ಅಧಿಕಾರಿ, ಸಿಬ್ಬಂದಿ ಹುತಾತ್ಮರಾಗಿದ್ದಾರೆ. ತ್ಯಾಗ, ಬಲಿದಾನದ ಮೂಲಕ ಇಲಾಖೆಯು ತನ್ನ ಹಿರಿಮೆ ಕಾಪಾಡಿಕೊಂಡು ಬರುತ್ತಿದೆ ಎಂದು ಅವರು ತಿಳಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಜಿ.ಸಂತೋಷ, ಹಿರಿಯ ಪತ್ರಕರ್ತರಾದ ಎಂ.ವೈ.ಸತೀಶ, ಎಚ್.ಎಂ.ಪ್ರಶಾಂತಕುಮಾರ ಇತರರು ಇದ್ದರು.ಮ್ಯಾರಥಾನ್ ಓಟದ ಫಲಿತಾಂಶ ಪ್ರಕಟ

ದಾವಣಗೆರೆ: ಕರ್ನಾಟಕ ರಾಜ್ಯ ಪೊಲೀಸ್ 50 ವರ್ಷದ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ‘ಡ್ರಗ್ಸ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ’ ಮೂಡಿಸುವ ಆಶಯದೊಂದಿಗೆ ಜಿಲ್ಲಾ ಪೊಲೀಸ್ ವತಿಯಿಂದ ನಗರದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ 10ಕೆ, 5ಕೆ ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರ ಪಟ್ಟಿ ಈ ರೀತಿ ಇದೆ.ಮ್ಯಾರಥಾನ್‌ನಲ್ಲಿ ವಿಜೇತರು: ಪೊಲೀಸ್ ಪುರುಷ ವಿಭಾಗ: 10ಕೆ ಮ್ಯಾರಥಾನ್ ಓಟ ಸ್ಪರ್ಧೆ: ಪ್ರಥಮ- ಕೆ.ಪಿ.ತಿಮ್ಮರಾಜು (ನ್ಯಾಮತಿ ಪೊಲೀಸ್ ಠಾಣೆ), ದ್ವಿತೀಯ- ಮಲ್ಲಿಕಾರ್ಜುನ, (ಡಿಎಆರ್ ದಾವಣಗೆರೆ), ತೃತೀಯ- ಜಯ್ಯಣ್ಣ, (ಡಿಎಆರ್ ದಾವಣಗೆರೆ).

5ಕೆ ಮ್ಯಾರಥಾನ್ ಓಟ ಸ್ಪರ್ಧೆ: ಪ್ರಥಮ: ಅಜ್ಜಯ್ಯ(ಬಡಾವಣೆ ಪೊಲೀಸ್ ಠಾಣೆ), ದ್ವಿತೀಯ - ಶ್ರೀಶೈಲ, (ಡಿಎಆರ್ ದಾವಣಗೆರೆ) ತೃತೀಯ- ಹೇಮಣ್ಣ ಮತ್ತು ಮಂಜುನಾಥ. ಪೊಲೀಸ್ ಮಹಿಳಾ ವಿಭಾಗ- 10ಕೆ ಮ್ಯಾರಥಾನ್ ಓಟ ಸ್ಪರ್ಧೆ ಪ್ರಥಮ -ಮಧುರಾ(ಮಹಿಳಾ ಪೊಲೀಸ್ ಸಿಬ್ಬಂದಿ).

5ಕೆ ಮ್ಯಾರಥಾನ್ ಓಟ ಸ್ಪರ್ಧೆ: ಪ್ರಥಮ - ಮಾಲತಿ (ಬಡಾವಣೆ ಪೊಲೀಸ್ ಠಾಣೆ), ದ್ವಿತೀಯ- ಶ್ವೇತಾ (ಹರಿಹರ ಪೊಲೀಸ್ ಠಾಣೆ).

ಸಾರ್ವಜನಿಕ ಪುರುಷ ವಿಭಾಗ- 10ಕೆ ಮ್ಯಾರಥಾನ್ ಓಟ ಸ್ಪರ್ಧೆ : ಪ್ರಥಮ - ಪ್ರಭು ಲಮಾಣಿ, ದ್ವಿತೀಯ - ದೇವರಾಜ, ತೃತೀಯ- ಪ್ರವೀಣ್ ಎ.ಕೆ.ಕಾಡಜ್ಜಿ.ಸಾರ್ವಜನಿಕ ಪುರುಷ 5ಕೆ ಮ್ಯಾರಥಾನ್ ಓಟ ಸ್ಪರ್ಧೆ: ಪ್ರಥಮ - ನೀಲಪ್ಪ, ದ್ವಿತೀಯ - ಪ್ರಮೋದ್ ಭಜಂತ್ರಿ, ತೃತೀಯ- ರಮೇಶ್.

ಸಾರ್ವಜನಿಕ ಮಹಿಳಾ ವಿಭಾಗ- 10ಕೆ ಮ್ಯಾರಥಾನ್ ಓಟ ಸ್ಪರ್ಧೆ: ಪ್ರಥಮ - ಎ.ಅಕ್ಷತಾ, ದ್ವಿತೀಯ - ಎಂ.ರೇಖಾ, ತೃತೀಯ - ಕೆ.ಹರ್ಪಿತಾ.ಸಾರ್ವಜನಿಕ ಮಹಿಳಾ ವಿಭಾಗದ 5ಕೆ ಮ್ಯಾರಥಾನ್ ಓಟ ಸ್ಪರ್ಧೆಯಲ್ಲಿ ವಿಜೇತರಾದವರು ಪ್ರಥಮ- ಪದ್ಮಶ್ರೀ, ದ್ವಿತೀಯ - ಮಮತಾ, ತೃತೀಯ- ಖುಷಿ ಮತ್ತು ಶಿವಬಸಮ್ಮ ಕಲಕೋಟೆ ಇವರುಗಳು ಬಹುಮಾನ ಗಳಿಸಿದ್ದಾರೆ.

ವಿಜೇತರಿಗೆ ಪೂರ್ವವಲಯ ಐಜಿಪಿ ಡಾ.ಕೆ ತ್ಯಾಗರಾಜನ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ವಿಜೇತರಾದವರಿಗೆ ನಗದು ಬಹುಮಾನ, ಪದಕ ಹಾಗೂ ಪ್ರಶಂಸನಾ ಪತ್ರ ವಿತರಿಸಿದರು.

Share this article