ಮಾ.12ರಿಂದ ತೀರ್ಥಹಳ್ಳಿಯಲ್ಲಿ ಮಾರಿಕಾಂಬಾ ಜಾತ್ರೆ

KannadaprabhaNewsNetwork |  
Published : Feb 21, 2024, 02:06 AM IST
ತೀರ್ಥಹಳ್ಳಿಯಲ್ಲಿ ಶ್ರೀ ಮಾರಿಕಾಂಬಾ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ. ನಾಗರಾಜಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಎರಡು ವರ್ಷಕ್ಕೊಮ್ಮೆ ನಡೆಯುವ ತೀರ್ಥಹಳ್ಳಿ ಪಟ್ಟಣದ ಶ್ರೀ ಮಾರಿಕಾಂಬಾ ಜಾತ್ರೆ ಮಾ.12ರಿಂದ 20ರವರೆಗೆ ಆಯೋಜಿಸಲಾಗಿದೆ. ಧಾರ್ಮಿಕ ಸಾಂಸ್ಕೃತಿಕ ಮತ್ತು ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿವೆ. ಜಾತ್ರೆ ಹಿನ್ನೆಲೆ ₹65 ಲಕ್ಷ ವೆಚ್ಚದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ. ನಾಗರಾಜ ಶೆಟ್ಟಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಎರಡು ವರ್ಷಕ್ಕೊಮ್ಮೆ ನಡೆಯುವ ಪಟ್ಟಣದ ಶ್ರೀ ಮಾರಿಕಾಂಬಾ ಜಾತ್ರೆ ಮಾ.12ರಿಂದ 20ರವರೆಗೆ ನಡೆಯಲಿದ್ದು, ಧಾರ್ಮಿಕ ಸಾಂಸ್ಕೃತಿಕ ಮತ್ತು ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿವೆ. ಜಾತ್ರೆ ಹಿನ್ನೆಲೆ ₹65 ಲಕ್ಷ ವೆಚ್ಚದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ. ನಾಗರಾಜ ಶೆಟ್ಟಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಮಾ.12ರಂದು ಮಾರಿ ಸಾರುವ ಮೂಲಕ ಆರಂಭಗೊಳ್ಳುವ ಜಾತ್ರೆಯಲ್ಲಿ ಮಾ.19ರಂದು ಎಣ್ಣೆ ಭಂಡಾರ ಪೂಜೆಯೊಂದಿಗೆ ಗೊಂಬೆ ತಂದು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುವುದು. ಮಾ.20ರಂದು ಮಧ್ಯಾಹ್ನ 3 ಗಂಟೆಗೆ ರಾಜಬೀದಿ ಉತ್ಸವದೊಂದಿಗೆ ಗೊಂಬೆಯನ್ನು ತುಂಗಾ ನದಿಯಲ್ಲಿ ವಿಸರ್ಜಿಸಲಾಗುವುದು. ಪ್ರತಿದಿನ ವಿಶೇಷ ಧಾರ್ಮಿಕ ಕಾರ್ಯಕ್ರಮ ಮತ್ತು ಮಧ್ಯಾಹ್ನ ಅನ್ನ ಸಂತರ್ಪಣೆ ಇರುತ್ತದೆ ಎಂದು ತಿಳಿಸಿದರು.

ಮಾ.13ರಿಂದ ಪ್ರತಿದಿನ ಸಂಜೆ ದೇವಸ್ಥಾನ ಆವರಣದಲ್ಲಿ ಸ್ಥಳೀಯ ಮತ್ತು ರಾಜ್ಯಮಟ್ಟದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕ್ರಮವಾಗಿ ಡಾನ್ಸ್ ಪ್ಯಾಲೇಸ್ ತಂಡದ ನೃತ್ಯ ಸಂಭ್ರಮ, ವಿಠಲ ನಾಯಕ್ ಕಲ್ಲಡ್ಕ ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ, ಪ್ರೊ.ಕೃಷ್ಣೇಗೌಡರಿಂದ ನಗೆವೈವಿಧ್ಯ, ಮಂಗಳೂರಿನ ಸುಪ್ರೀತ್ ಸಫಲಿಗ ಬಳಗದ ಸಂಗೀತ ಸೌರಭ, ಜನಪದ ಗಾಯಕಿ ಸವಿತಾ ಗಣೇಶ್ ತಂಡದ ಸವಿತಕ್ಕನ ಅಳ್ಳಿ ಬ್ಯಾಂಡ್ ಸಂಗೀತ ರಸಸಂಜೆ, ಬೆಂಗಳೂರಿನಲ್ಲಿ ನೆಲೆಸಿರುವ ಸ್ಥಳೀಯರಿಂದ ನೃತ್ಯವೈಭವ, ಮಾ.18ರಂದು ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಯಕ್ಷಗಾನ ಮೇಳದವರಿಂದ ಅಯೋಧ್ಯಾ ದೀಪ ಯಕ್ಷಗಾನ ನಡೆಯಲಿದೆ ಎಂದು ಹೇಳಿದರು.

ಖೋ ಖೋ ಪಂದ್ಯಾವಳಿ:

ಜಾತ್ರೆ ಅಂಗವಾಗಿ ಸ್ಥಳೀಯ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಸಹಯೋಗದೊಂದಿಗೆ ಮಾ.15 ರಿಂದ 17ರವರೆಗೆ ಹೊನಲು ಬೆಳಕಿನಲ್ಲಿ ರಾಷ್ಟ್ರಮಟ್ಟದ ಪುರುಷರ ಮತ್ತು ಮಹಿಳೆಯರ ಖೋ ಖೋ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ 8 ಪುರುಷರು ಹಾಗೂ 6 ಮಹಿಳೆಯರ ತಂಡಗಳು ಪಾಲ್ಗೊಳ್ಳಲಿವೆ ಎಂದೂ ಹೇಳಿದರು.

ಧರ್ಮದರ್ಶಿ ಮಂಡಳಿಯ ಖಜಾಂಚಿ ಮಂಜುನಾಥ ಶೆಟ್ಟಿ, ಕಾರ್ಯದರ್ಶಿ ಧನಂಜಯ್, ಸಹ ಕಾರ್ಯದರ್ಶಿ ಪ್ರಭಾಕರ್, ಮೊಕ್ತೇಸರ ಟಿ.ಕೆ. ಜಯರಾಮ ಶೆಟ್ಟಿ, ಸಂದೇಶ್ ಜವಳಿ, ರಾಘವೇಂದ್ರ ನಾಯಕ್, ಕೆ.ಸಿ. ಚಂದ್ರಶೇಖರ್, ಚಿದಾನಂದ್, ಜಯಪ್ರಕಾಶ್ ಶೆಟ್ಟಿ, ಬಿ.ಆರ್. ರಾಘವೇಂದ್ರ ಶೆಟ್ಟಿ, ಟಿ.ಎನ್. ಅನಿಲ್ ಬಿ. ರಾಜು ಮುಂತಾದವರು ಇದ್ದರು.

- - - -ಫೋಟೋ:

ತೀರ್ಥಹಳ್ಳಿಯಲ್ಲಿ ಶ್ರೀ ಮಾರಿಕಾಂಬಾ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ. ನಾಗರಾಜಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ