ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಮಾರಿಕಣಿವೆ ಜಿಲ್ಲೆಯ ಜೀವನಾಡಿಯಾಗಿರುವ ವಿವಿ ಸಾಗರ ಜಲಾಶಯ ಮಂಗಳವಾರ ಸಂಜೆಯ ಹೊತ್ತಿಗೆ 129 ಅಡಿ ತಲುಪಿದ್ದು, ಕೋಡಿ ಬೀಳಲು ಕೇವಲ ಇನ್ನೊಂದು ಅಡಿ ಬಾಕಿ ಇದೆ. ಸಾವಿರಾರು ರೈತರು ಆಸೆಯ ಕಣ್ಣಲ್ಲಿ ಕಾಯುತ್ತಿದ್ದು, ಜಲಾಶಯ ಮೈದುಂಬಿ ಹರಿಯುವ ಕ್ಷಣಕ್ಕೆ ಸಾಕ್ಷಿಯಾಗಲು ಕಾಯುತ್ತಿದ್ದಾರೆ.ವಿವಿ ಸಾಗರ ಜಲಾಶಯ ಮೂರನೇ ಬಾರಿ ತುಂಬುತ್ತಿರುವ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಳ್ಳಲು ಮುಂದಾಗಿರುವ ಸಚಿವ ಡಿ.ಸುಧಾಕರ್, ಹಬ್ಬದ ವಾತಾವರಣ ಸೃಷ್ಟಿಸುವ ಇರಾದೆ ಹೊಂದಿದ್ದಾರೆ. ಜಲಾಶಯದ ಮೇಲ್ಬಾಗ ಸಿಎಂ, ಡಿಸಿಎಂ ಅವರಿಂದ ಬಾಗಿನ ಸಮರ್ಪಣೆ, ನಂತರ ನೆಹರು ಮೈದಾನದಲ್ಲಿ ಸಾರ್ವಜನಿಕ ಸಭೆ ಏರ್ಪಾಡು ಮಾಡುವ ಉದ್ದೇಶ ಹೊಂದಲಾಗಿದೆ. 2022ರಲ್ಲಿ ಮಾರಿಕಣಿವೆ ತುಂಬಿದಾಗ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಬಂದು ಬಾಗಿನ ಬಿಟ್ಟಿದ್ದರು. ಅದೇ ಮಾದರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.ಜಲಾಶಯ ಭರ್ತಿಯಾಗುತ್ತಿರುವ ಹಿನ್ನಲೆ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಹಾಗೂ ಭದ್ರಾ ಮೇಲ್ದಂಡೆ ಮುಖ್ಯ ಎಂಜಿನಿಯರ್ ಎಫ್.ಎಚ್.ಲಮಾಣಿ ಸೋಮವಾರ ಸಂಜೆ ವಿವಿ ಸಾಗರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಭದ್ರೆಯಿಂದ ಲಿಫ್:
ಕಳೆದ ಹತ್ತು ಹದಿನೈದು ದಿನದಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗಣನೀಯವಾಗಿ ಇಲ್ಲವಾಗಿದ್ದು, ಕೋಡಿ ಬೀಳುವ ಕನಸನ್ನು ಮಸುಕಾಗಿಸಿತ್ತು. ಮಳೆಯ ಪ್ರಮಾಣವೂ ಕಡಿಮೆಯಾಗಿ, ಅಜ್ಜಂಪುರದ ಬಳಿಯ ಸೇತುವೆ ಕಿತ್ತು ಹೋದದ್ದರಿಂದ ಭದ್ರಾ ಜಲಾಶಯದ ನೀರನ್ನೂ ನಿಲ್ಲಿಸಲಾಗಿತ್ತು. ಇದೀಗ ಸೇತುವೆ ಮರು ನಿರ್ಮಾಣವಾಗಿದ್ದು, ಭದ್ರಾದ ನೀರು ಮತ್ತೆ ವಿವಿ ಸಾಗರದ ಒಡಲು ಸೇರುತ್ತಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 128.95 ಅಡಿ ತಲುಪಿದ್ದು ಡ್ಯಾಂನ ಒಡಲು ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ.ಮಂಗಳವಾರದ ಆರಂಭಕ್ಕೆ 693 ಕ್ಯೂಸೆಕ್ ಒಳಹರಿವಿದ್ದು, ಇದೇ ಅಳತೆಯಲ್ಲಿ ನೀರು ಹರಿದರೆ ಜಲಾಶಯ ಕೋಡಿ ಬೀಳುವ ದಿನಗಳು ತುಂಬಾ ದೂರವೇನು ಇಲ್ಲ ಎನ್ನಲಾಗಿದೆ. 30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ವಿವಿ ಸಾಗರ ಜಲಾಶಯ ಒಟ್ಟು 135 ಅಡಿ ಎತ್ತರ ಹೊಂದಿದ್ದು, 130 ಅಡಿಗೆ ಜಲಾಶಯ ಕೋಡಿ ಬೀಳಲಿದೆ. 1933ರಲ್ಲಿ ಜಲಾಶಯ ಮೊದಲ ಬಾರಿಗೆ ಮೈದುಂಬಿ ಹರಿದು ಕೋಡಿ ಬಿದ್ದಿತ್ತು. ಇದಾದ ಬಳಿಕ 89 ವರ್ಷಗಳ ನಂತರ 2022ರಲ್ಲಿ ಕೋಡಿ ಬಿದ್ದಿತ್ತು. ಇದೀಗ ಮತ್ತೆ ಕೇವಲ ಮೂರು ವರ್ಷದ ಅಂತರದಲ್ಲೇ ಜಲಾಶಯ ಮೂರನೇ ಬಾರಿಗೆ ಕೋಡಿಯತ್ತ ಮುಖಮಾಡಿದೆ. ಜುಲೈ ತಿಂಗಳ ಅಂತ್ಯದಲ್ಲಿ 113.08 ರಷ್ಟಿದ್ದ ಜಲಾಶಯದ ನೀರಿನ ಮಟ್ಟ ನವೆಂಬರ್ 2ರ ಹೊತ್ತಿಗೆ 127.15 ಅಡಿ ಮುಟ್ಟಿದೆ. ಕೇವಲ ನಾಲ್ಕು ತಿಂಗಳಲ್ಲಿ ಸುಮಾರು 14 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಜಿಲ್ಲೆಯ ಜನರ ನೀರಿನ ಬವಣೆ ನೀಗಿಸಲಿದೆ. ಬರಗಾಲದ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಈ ಭಾಗಕ್ಕೆ ವಿವಿ ಸಾಗರ ಜಲಾಶಯವೇ ಆಧಾರಸ್ಥoಭವಾಗಿದೆ. ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲೂಕುಗಳ ಜನರ ಕುಡಿಯುವ ನೀರಿನ ದಾಹ ಹಿಂಗಿಸುವ ಜಲಾಶಯವು 12,135 ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಬಂದಂತಹ ಸಂದರ್ಭದಲ್ಲಿ ಮೈಸೂರು ಮಹಾರಾಜರು ತಾಲೂಕಿನ ಮಾರಿಕಣಿವೆ ಬಳಿ 1907ರಲ್ಲಿ ಜಲಾಶಯ ನಿರ್ಮಿಸಿದರು. ಜಲಾಶಯ ನಿರ್ಮಾಣವಾಗಿ ಶತಮಾನ ಕಳೆದರೂ ಸಹ ಇಂದಿಗೂ ಗಟ್ಟಿ ಮುಟ್ಟಾಗಿದ್ದು, ಇದರ ನಿರ್ಮಾಣಕ್ಕೆ ಕೇವಲ ಕಲ್ಲು ಮತ್ತು ಗಾರೆಯನ್ನು ಮಾತ್ರ ಬಳಸಲಾಗಿದೆ ಎಂಬುದು ಮತ್ತೊಂದು ವಿಶೇಷ. ಜಲಾಶಯ ನಿರ್ಮಾಣವಾಗಿ 26 ವರ್ಷಗಳ ನಂತರ ಅಂದರೆ 1933ರಲ್ಲಿ ಮೊದಲ ಬಾರಿಗೆ ಕೋಡಿ ಬಿದ್ದಿತ್ತು. ಆನಂತರ ಸತತವಾಗಿ 89 ವರ್ಷಗಳ ಕಾಲ ಕೋಡಿ ಬೀಳಲೇ ಇಲ್ಲ. 2022ರ ಸೆಪ್ಟೆಂಬರ್ ಒಂದರಂದು 89 ವರ್ಷದ ನಂತರ ಕೋಡಿ ಬಿದ್ದ ಜಲಾಶಯ ಈ ತಲೆಮಾರಿನ ಜನಕ್ಕೆ ಆಶ್ಚರ್ಯ ಮತ್ತು ಅಪರೂಪದ ಚಿತ್ರಣ ಒದಗಿಸಿತ್ತು. ಇದೀಗ ಕೇವಲ ಅದಾಗಿ ಮೂರನೇ ವರ್ಷಕ್ಕೆ ಮತ್ತೆ ಅಂತಹುದೊಂದು ಸುವರ್ಣಗಳಿಗೆಗೆ ತಾಲೂಕು ಮತ್ತು ಜಿಲ್ಲೆ ಸಾಕ್ಷಿಯಾಗುವ ಕ್ಷಣಗಳು ಹತ್ತಿರ ಬರುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿಯಲ್ಲಿ ಜನಿಸುವ ವೇದಾ ನದಿಯು ಮುಂದೆ ಸಾಗಿ ಕಡೂರಿನ ಬಳಿ ಅವತಿ ನದಿ ಜೊತೆ ಸೇರಿ ವೇದಾವತಿ ನದಿಯಾಗಿ ಹರಿದು ವಿವಿ ಸಾಗರದ ಒಡಲು ಸೇರುತ್ತದೆ. 117 ವರ್ಷಗಳ ಇತಿಹಾಸವಿರುವ ಜಲಾಶಯದ ಎತ್ತರ 135.25 ಅಡಿ ಇದ್ದು, ತಾಲೂಕಿನ ಮೂರನೇ ಒಂದು ಭಾಗದಷ್ಟು ರೈತರ ಜಮೀನುಗಳಿಗೆ ನೀರು ಒದಗಿಸುತ್ತದೆ. 1933ರಲ್ಲಿ 135 ಅಡಿ, 1934ರಲ್ಲಿ 130 ಅಡಿ, 1957ರಲ್ಲಿ 125 ಅಡಿ, 1958ರಲ್ಲಿ 124 ಅಡಿ ನೀರು ಸಂಗ್ರಹ ಕಂಡಿತ್ತು. ಆನಂತರ 2021ರಲ್ಲಿ 125 ಅಡಿ ತಲುಪಿ 2022 ರಲ್ಲಿ ಕೋಡಿ ಬೀಳುವ ಮೂಲಕ 89 ವರ್ಷಗಳ ನಂತರ ಇತಿಹಾಸ ಸೃಷ್ಟಿಸಿತ್ತು. ಇದೀಗ ಕೋಡಿ ಬೀಳುವ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ಜನ ತುದಿಗಾಲಲ್ಲಿ ನಿಂತಿದ್ದಾರೆ.