ಕನ್ನಡಪ್ರಭವಾರ್ತೆ ಹಿರಿಯೂರುಚಿತ್ರದುರ್ಗ ಜಿಲ್ಲೆಯ ಜೀವನಾಡಿ ಏಕಮಾತ್ರ ಜಲಾಶಯ ಮಾರಿಕಣಿವೆ ಗಟ್ಟಿ ಮುಟ್ಟಾಗಿದೆ. ನೀರು ಸೋರಿಕೆಯಾಗಲೀ, ಭವಿಷ್ಯದಲ್ಲಿ ಕ್ರಸ್ಟ್ ಗೇಟ್ ಕಳಚಿ ಬೀಳುವ ಅಥವಾ ಡ್ಯಾಂ ನಿಂದ ನೀರು ಹೊರ ಹೋಗುವ ಅಪಾಯಗಳು ಏನಿಲ್ಲ.ಇದು ತಜ್ಞ ಇಂಜಿನಿಯರ್ ಗಳ ಉವಾಚ. ತುಂಗ ಭದ್ರಾ ಜಲಾಶಯ ಕ್ರಸ್ಟ್ ಗೇಟ್ ಕಚಳಿ ಬಿದ್ದು ಅಪಾಯದ ಸಂದರ್ಭ ಎದುರಾದ ಹಿನ್ನಲೆ ರಾಜ್ಯ ಸರ್ಕಾರ ಎಲ್ಲ ಜಲಾಶಯಗಳ ವಾಸ್ತವಾಂಶ ಪರಿಶೀಲನೆಗೆ ಸೂಚಿಸಿ ಬುಧವಾರವೇ ವರದಿ ನೀಡುವಂತೆ ತಾಕೀತು ಮಾಡಿತ್ತು. ಅದರಂತೆ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಎಫ್. ಎಚ್. ಲಮಾಣಿ ನೇತೃತ್ವದ ತಂಡ ಮಂಗಳವಾರ ಮಾರಿಕಣಿವೆಗೆ ಭೇಟಿ ನೀಡಿ ಜಲಾಶಯವನ್ನು ಇಂಚಿಂಚು ಪರಿಶೀಲಿಸಿ ಅಪಾಯದ ಲಕ್ಷಗಳೇನಾದರೂ ಇವೆಯೇ ಎಂಬುದರ ಬಗ್ಗೆ ಪರಿಶೀಳಿಸಿದರು. ಜಲಾಶಯದ ಗೋಡೆಗಳಿಂದ ಏನಾದರೂ ನೀರು ಬಸಿದು ಹೊರಹೋಗುತ್ತಿರಬಹುದೇ ಎಂಬ ಸಂದೇಹಗಳ ನಿವಾರಣೆ ಮಾಡಿಕೊಂಡರು.ಬಾಕ್ಸ್
*1907 ರಲ್ಲಿ ನಿರ್ಮಾಣಗೊಂಡ ಅಣೆಕಟ್ಟುವಾಣಿ ವಿಲಾಸಸಾಗರ ಕರ್ನಾಟಕದ ಹಳೆಯ ಜಲಾಶಯಗಳಲ್ಲಿ ಒಂದು. ವೇದಾವತಿ ನದಿಗೆ ಅಡ್ಡಲಾಗಿ ಮಾರಿಕಣಿವೆ ಎಂಬಲ್ಲಿ ಕಟ್ಟಿರುವ ಈ ಆಣೆಕಟ್ಟು 50 ಮೀ ಎತ್ತರ, 405 ಮೀ ಉದ್ದವಿದ್ದು 135 ಆಡಿವರೆಗೂ ನೀರನ್ನು ಸಂಗ್ರಹಿಸಬಹುದಾಗಿದೆ. ತಾಲೂಕಿನ 10000 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವುದಲ್ಲದೇ ಚಳ್ಳಕೆರೆ, ಮೊಳಕಾಲ್ಮುರು, ಚಿತ್ರದುರ್ಗಕ್ಕೆ ಕುಡಿಯುವ ನೀರು ಒದಗಿಸುತ್ತದೆ.
ಸಿಮೆಂಟ್ ಉಪಯೋಗಿಸದೇ ಕೇವಲ ಗಾರೆಯಿಂದಲೇ ಕಟ್ಟಲಾಗಿದ್ದು ಜಿಲ್ಲೆಯ ಜೀವನಾಡಿ ಎಂದು ಆಣೆಕಟ್ಟು ಹೆಸರಾಗಿದೆ. 1907ರಲ್ಲಿ ಈ ಜಲಾಶಯವನ್ನು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಹಿರಿಯೂರು ತಾಲೂಕಿನ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಿನ ಅನುಕೂಲವಾಗುವ ದೃಷ್ಟಿಯಿಂದ ಜಲಾಶಯ ನಿರ್ಮಾಣ ಮಾಡಿದ್ದರು.ಚಿಕ್ಕಮಗಳೂರು ಜಿಲ್ಲೆಯ ಗಿರಿ ಕಂದಕಗಳಲ್ಲಿ ಹುಟ್ಟುವ ವೇದಾವತಿ ನದಿಗೆ ಅಡ್ಡಲಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸಪುರ ಬಳಿ ಮಾರಿಕಣಿವೆ ಅಥವಾ ವಾಣಿ ವಿಲಾಸಸಾಗರ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ವಾಣಿ ವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್‌ಪೀಸ್ ಎಂದು ಗುರುತಿಸಲಾಗಿದೆ. ಈ ಅಣೆಕಟ್ಟನ್ನು ಮೈಸೂರಿನ ಶ್ರೀ ಕೃಷ್ಣರಾಜ ಒಡೆಯರ್ ರವರ ತಾಯಿ ಕೆಂಪನಂಜಮ್ಮಣಿ ಆದೇಶದ ಮೇರೆಗೆ ನಿರ್ಮಿಸಲಾಗಿದೆ. ಅಲ್ಲದೇ ಮೈಸೂರಿನಲ್ಲಿ ಇರುವ ಕೆಆರ್ ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಾಣಿವಿಲಾಸ ಸಾಗರದ ನೀಲಿನಕ್ಷೆಯೇ ಮೂಲ ಎಂದು ಹೇಳಲಾಗುತ್ತದೆ.*ಕ್ರಸ್ಟ್ ಗೇಟ್ ಗಳಿಲ್ಲ
ವಾಣಿ ವಿಲಾಸ ಸಾಗರ ಭರ್ತಿಯಾದಲ್ಲಿ ನೀರನ್ನು ನದಿಗೆ ಬಿಡಲು ಕ್ರಸ್ಟ್ ಗೇಟ್ ವ್ಯವಸ್ಥೆಯಿಲ್ಲ. 30 ಟಿಎಂಸಿ ಸಾಮರ್ಥ್ಯದ ಜಲಾಶಯ ಭರ್ತಿಯಾದಾಗ ಸಹಜವಾಗಿಯೇ ಕೋಡಿಯಿಂದ ನೀರು ಹೊರ ಹೋಗುತ್ತದೆ. ಕೆರೆಗಳ ಮಾದರಿಯಲ್ಲಿ ಕೋಡಿ ಸೃಜಿಸಲಾಗಿದೆ. ಕ್ರಸ್ಟ್ ಗೇಟ್ ಉಸಾಬರಿ ಈ ಜಲಾಶಯಕ್ಕೆ ಇಲ್ಲ. ಆದರೆ ಅಚ್ಚು ಕಟ್ಟು ಪ್ರದೇಶಕ್ಕೆ ನೀರುಣಿಸುವಾಗ ಕಾಲುವೆಗೆ ನೀರು ಹಾಯಿಸುವ ಪುಟ್ಟ ಕ್ರಸ್ಟ ಗೇಟ್ ಇದ್ದು ಮಾನವ ಚಾಲಿತ ವ್ಯವಸ್ಥೆ ಇದಾಗಿದೆ. ಕೈಯಿಂದಲೇ ತಿರುಗಿಸಿ ಗೇಟ್ಗಳನ್ನು ಎತ್ತಲಾಗುತ್ತದೆ.ಪರಿಶೀಲನೆ ನಂತರ ಕನ್ನಡಪ್ರಭದೊಂದಿಗೆ ಮಾತನಾಡಿದ ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಎಫ್. ಎಚ್. ಲಮಾಣಿ, ಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವರ ಸೂಚನೆ ಮೇರೆಗೆ ಜಲಾಶಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಜಲಾಶಯ ಗಟ್ಟಿ ಮುಟ್ಟಾಗಿದ್ದು ಆತಂಕ ಪಡುವ ಯಾವುದೇ ಲಕ್ಷಣಗಳಿಲ್ಲವೆಂದರು. ಭದ್ರಾ ಮೇಲ್ದಂಡೆ ಅಧೀಕ್ಷಕ ಇಂಜಿನಿಯರ್ ಮಧುಕುಮಾರ್, ಕಾರ್ಯಪಾಲಕ ಇಂಜಿನಿಯರ್ ಚಂದ್ರಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಜಯ್ ಕುಮಾರ್ , ಸಹಾಯಕ ಇಂಜಿನಿಯರ್ ಮಾನಸ ಪರಿಶೀಲನಾ ತಂಡದಲ್ಲಿ ಇದ್ದರು.