ಕನ್ನಡಪ್ರಭ ವಾರ್ತೆ ಕುಶಾಲನಗರನೆರೆಯ ಕೇರಳದಲ್ಲಿ ಕೊರೋನಾ ಸೊಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಶಿಫಾರಸು ಮಾಡುವ ಚಿಂತನೆ ಇದೆ. ಡಿ.19ರಂದು ತಾಂತ್ರಿಕ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 60 ವರ್ಷ ಮೇಲ್ಪಟ್ಟ ಹಾಗೂ ಜ್ವರ ಕೆಮ್ಮು ಬಾಧಿತ ರೋಗಿಗಳು ಕಡ್ಡಾಯ ಮಾಸ್ಕ್ ಧರಿಸಬೇಕು. ಕೋವಿಡ್ ರೋಗ ಬಾಧಿತರಿಗೆ ಸಮಸ್ಯೆ ಆಗದಂತೆ ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್, ಮಾಸ್ಕ್, ಪಿಪಿಇ ಕಿಟ್ ಇರಿಸಲಾಗಿದ್ದು, ಸಕಲ ಸಿದ್ಧತೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿ ಆಧಾರದ ಮೇಲೆ ತಾಂತ್ರಿಕ ಸಲಹಾ ಸಮಿತಿ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.ಗಡಿಭಾಗದ ಪ್ರವಾಸಿಗರು ಮಾತ್ರವಲ್ಲದೆ ಅಯ್ಯಪ್ಪ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿ ಬರುತ್ತಿದ್ದು, ರಾಜ್ಯದಲ್ಲಿ ಸೋಂಕು ಹರಡದಂತೆ ಮಂಗಳವಾರ ನಡೆಯುವ ತಾಂತ್ರಿಕ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಗಡಿ ಭಾಗವಾದ ಕೊಡಗು, ಮಂಗಳೂರು, ಚಾಮರಾಜನಗರ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು. ಪ್ರಸಕ್ತ ರಾಜ್ಯದಲ್ಲಿ ಸಹಜ ಸ್ಥಿತಿ ಇದೆ. ಹೆಚ್ಚಿನ ಸಂಖ್ಯೆ ಕಂಡು ಬಂದಲ್ಲಿ ನಿರ್ಬಂಧ ಕ್ರಮಕ್ಕೆ ಮುಂದಾಗುವುದಾಗಿ ಸಚಿವರು ತಿಳಿಸಿದರು.ರಾಜ್ಯದ ಕೆಲವು ಕಡೆ ಭ್ರೂಣ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಇಂಥ ಪ್ರಕರಣ ತಡೆಗಟ್ಟಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಕಾರ್ಯಪಡೆ ರಚಿಸಲು ಚಿಂತಿಸಲಾಗಿದೆ ಎಂದರು.ಪಾರ್ಲಿಮೆಂಟ್ ಘಟನೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಸಂಸದ ಬದಲು ಕಾಂಗ್ರೆಸ್ ಸಂಸದ ಆಗಿದ್ದಲ್ಲಿ ತನಿಖೆಗೆ ಒತ್ತಾಯಿಸಿ, ಗ್ರಾಮ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿತ್ತು. ಬಿಜೆಪಿ ಸಂಸತ್ ಸದಸ್ಯರ ರಕ್ಷಣೆಗೆ ಎಲ್ಲರೂ ನಿಂತಿದ್ದಾರೆ. ಗಂಭೀರ ವಿಷಯದ ತನಿಖೆ ಆಗಬೇಕಿದೆ. ಲೆಹರ್ ಸಿಂಗ್, ಸಿ.ಟಿ. ರವಿ ಹೇಳಿಕೆ ನೀಡುತ್ತಾ ರಾಜಕಾರಣ ಮಾಡುತ್ತಿದ್ದಾರೆ. ಘಟನೆಗೆ ಕಾರಣಕರ್ತರಾದ ಪ್ರತಾಪ್ ಸಿಂಹ ಅವರನ್ನು ಅಮಾನತು ಮಾಡುವ ಬದಲು 12 ಜನ ಸಂಸತ್ ಸದಸ್ಯರನ್ನು ಅಮಾನತು ಮಾಡಿರೋದು ಹಾಸ್ಯಸ್ಪದವಾಗಿದೆ ಎಂದರು.