15 ರಂದು ಬೆಳಗಾವಿಯಲ್ಲಿ ಬೃಹತ್ ರಕ್ತದಾನ ಶಿಬಿರ

KannadaprabhaNewsNetwork | Published : Aug 7, 2024 1:03 AM

ಸಾರಾಂಶ

ಜೈನ್‌ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಜೇಶನ್‌ ಬೆಳಗಾವಿ ವಿಭಾಗದ ವತಿಯಿಂದ ಮೂರು ವರ್ಷಗಳಿಂದ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದ್ದು, ಈ ವರ್ಷ ಆ.15ರಂದು ಬೆಳಗಾವಿಯ ಮಹಾವೀರ ಭವನದಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೃಹತ್‌ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ರಕ್ತದಾನ ಶಿಬಿರದ ಸಂಯೋಜಕ ಕುಂತಿನಾಥ ಕಲಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜೈನ್‌ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಜೇಶನ್‌ ಬೆಳಗಾವಿ ವಿಭಾಗದ ವತಿಯಿಂದ ಮೂರು ವರ್ಷಗಳಿಂದ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದ್ದು, ಈ ವರ್ಷ ಆ.15ರಂದು ಬೆಳಗಾವಿಯ ಮಹಾವೀರ ಭವನದಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೃಹತ್‌ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ರಕ್ತದಾನ ಶಿಬಿರದ ಸಂಯೋಜಕ ಕುಂತಿನಾಥ ಕಲಮನಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿತೊ ಸಂಸ್ಥೆ ಮೂರು ವರ್ಷಗಳಿಂದ ರಕ್ತದಾನ ಶಿಬಿರ ಆಯೋಜಿಸುತ್ತಿದೆ. ಕಳೆದ ವರ್ಷ ಒಂದೇ ದಿನದಲ್ಲಿ 936 ಯುನಿಟ್ ರಕ್ತ ಸಂಗ್ರಹ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದು, ಈ ವರ್ಷ ಹೊಸ ದಾಖಲೆ ಮಾಡುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು. ರಕ್ತದಾನ ಶಿಬಿರದಲ್ಲಿ ಕೆ.ಎಲ್.ಇ.ಬ್ಲಡ್‌ ಬ್ಯಾಂಕ್‌, ಮಹಾವೀರ ಬ್ಲಡ್ ಬ್ಯಾಂಕ್‌, ಬಿಮ್ಸ್‌ ಬ್ಲಡ್‌ ಬ್ಯಾಂಕ್‌ ಮತ್ತು ಬೆಳಗಾಂ ಬ್ಲಡ್‌ ಬ್ಯಾಂಕ್‌ಗಳು ಸಹ ಭಾಗವಹಿಸಲಿವೆ. ಶಿಬಿರದಲ್ಲಿ ರಕ್ತದಾನಿಗಳಿಗೆ ಒಂದು ವರ್ಷದ ಅವಧಿಯ ₹1 ಲಕ್ಷವರೆಗಿನ ಅಪಘಾತ ವಿಮೆಯ ಪ್ರಿಮಿಯಂ ಜಿತೊ ಸಂಸ್ಥೆ ಭರಿಸಲಿದೆ ಎಂದು ಮಾಹಿತಿ ನೀಡಿದರು. ರಕ್ತದಾನ ಶಿಬಿರಕ್ಕೆ ಬೆಳಗಾವಿಯ ವಿವಿಧ ಸಂಘ-ಸಂಸ್ಥೆಗಳು, ರೋಟರಿ ಸಂಸ್ಥೆಗಳು, ಬಿಸಿಸಿಐ ಸೇರಿದಂತೆ ಕೈಗಾರಿಕೆಗಳು, ಉದ್ದಿಮೆಗಳು, ಶಿಕ್ಷಣ ಸಂಸ್ಥೆಗಳು ಸಹಕರಿಸಲು ಮುಂದೆ ಬಂದಿದ್ದು, ಒಟ್ಟಾರೆ ಶಿಬಿರ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸುತ್ತಿದ್ದಾರೆ. ರಕ್ತದಾನಿಗಳಿಗೆ ಅಂದು ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುವುದು. ರಕ್ತದಾನ ಶಿಬಿರದಲ್ಲಿ ಶೇಖರಿಸಿದ ರಕ್ತವನ್ನು ಎಲ್ಲ ಬ್ಲಡ್‌ ಬ್ಯಾಂಕ್‌ಗಳಲ್ಲಿ ಇಡಲಾಗುತ್ತದೆ. ಯಾರಿಗಾದರೂ ರಕ್ತದ ಅವಶ್ಯಕತೆಯಿದ್ದಲ್ಲಿ ಅವರು ಜಿತೊ ಸಂಸ್ಥೆ ಸಂಪರ್ಕಿಸಿದರೆ ಅಂತವರಿಗೆ ತಕ್ಷಣ ರಕ್ತವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ಉದ್ಯಮ ಭಾಗದಲ್ಲಿರುವ ಜಿತೊ ಕಚೇರಿಯನ್ನು ಸಂಪರ್ಕಿಸಿ ರಕ್ತ ಪಡೆಯಬಹುದಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಜಿತೊ ಅಧ್ಯಕ್ಷ ವೀರಧವಲ ಉಪಾಧ್ಯೆ, ಕಾರ್ಯದರ್ಶಿ ಅಶೋಕ ಕಟಾರಿಯಾ, ರಕ್ತದಾನ ಶಿಬಿರದ ಮುಖ್ಯ ಸಂಯೋಜಕ ಹರ್ಷವರ್ಧನ ಇಂಚಲ, ಜಿತೊ ಸದಸ್ಯ ಅಭಯ ಆದಿಮನಿ ಇತರರು ಉಪಸ್ಥಿತರಿದ್ದರು.

ಜಿತೊ ಸಂಸ್ಥೆ ಕೈಗೊಂಡಿರುವ ರಕ್ತದಾನ ಶಿಬಿರ ಅತ್ಯಂತ ಸಮಯೋಚಿತವಾಗಿದ್ದು, ಇದರಿಂದ ನಮ್ಮ ಕೆಎಲ್ಇ ಬ್ಲಡ್‌ ಬ್ಯಾಂಕಿಗೆ ಸಾಕಷ್ಟು ಅನುಕೂಲವಾಗಿದೆ. ಪ್ರತಿ ದಿನ ಗ್ರಾಮೀಣ ಭಾಗದ ಜನರು ಬೆಳಗಾವಿಯ ಆಗಮಿಸಿದ ಸಂದರ್ಭದಲ್ಲಿ ಸಂಕಷ್ಟದ ಸಮಯಕ್ಕೆ ರಕ್ತದ ಬೇಡಿಕೆ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಅಗತ್ಯವಿದ್ದರಿಗೆ ರಕ್ತ ನೀಡಲು ಅನಕೂಲವಾಗಲೆಂದು ಜಿತೊ ಸಂಸ್ಥೆ ಈ ಶಿಬಿರ ಹಮ್ಮಿಕೊಂಡಿದೆ. ಪ್ರತಿಯೊಬ್ಬರು ರಕ್ತದಾನ ಮಾಡಬೇಕು, ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಶಿಬಿರದಲ್ಲಿ ನೀಡಲಾದ ರಕ್ತದ ಮಾದರಿಗಳನ್ನು ಎಲ್ಲ ರೀತಿಯಲ್ಲಿ ಟೆಸ್ಟ್ ಮಾಡಿ ಅವುಗಳನ್ನು ಶೇಖರಿಸಲಾಗುತ್ತದೆ. ಅಗತ್ಯವಿದ್ದವರು ಜಿತೊ ಸಂಸ್ಥೆಯನ್ನು ಸಂಪರ್ಕಿಸಬಹುದು.

-ಡಾ.ವಿರಗಿ

ಕೆಎಲ್ಇ ಬ್ಲಡ್‌ ಬ್ಯಾಂಕ್‌ ಸಂಚಾಲಕ.

Share this article